ಕರಾವಳಿ

ಸಮುದ್ರದ ಉಪ್ಪು ನೀರು ಪರಿವರ್ತನೆ: ಸ್ಪಷ್ಟ ರೂಪ ಬಂದ ಬಳಿಕ ಅನುಷ್ಠಾನ : ಸಚಿವ ಖಾದರ್

Pinterest LinkedIn Tumblr

ಮಂಗಳೂರು : ಕರಾವಳಿಯಲ್ಲಿ ಸಮುದ್ರದ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸುವ ಯೋಜನೆಗೆ ಸಂಬಂಧಪಟ್ಟಂತೆ ಕಾರ್ಯ ಸಾಧ್ಯತಾ ವರದಿಯಲ್ಲಿ ಸ್ಪಷ್ಟತೆ ಕಂಡುಬಂದ ಬಳಿಕವಷ್ಟೇ ಯೋಜನೆ ಜಾರಿಯ ಬಗ್ಗೆ ರಾಜ್ಯ ಸರಕಾರ ನಿರ್ಧರಿಸಲಿದೆ ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರಾವಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ, ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸುವ ಯೋಜನೆಯ ಬಗ್ಗೆ ರಾಜ್ಯ ಸರಕಾರ ಚಿಂತಿಸಿದೆ. ಭವಿಷ್ಯದಲ್ಲಿ ಅಣೆಕಟ್ಟು ನೀರನ್ನು ಕುಡಿಯುವ ನೀರಿಗೆ ಮಾತ್ರ ಒದಗಿಸುವ ನಿರ್ಧಾರ ಬರುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಕೈಗಾರಿಕೆಗಳು ಸೇರಿದಂತೆ ಪ್ರಮುಖ ಸ್ಥಾಪವರ, ಉದ್ದಿಮೆಗಳಿಗೆ ಇಂತಹ ಯೋಜನೆ ಆಸರೆಯಾಗಲಿದೆ ಎಂದು ಸಚಿವ ಖಾದರ್ ತಿಳಿಸಿದರು.

ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸುವ ಯೋಜನೆ ರಾಜ್ಯದ ಕರಾವಳಿಯಲ್ಲಿ ಕಾರ್ಯಸಾಧುವಾಗಬಲ್ಲದೇ, ಇದರಿಂದ ಯಾವ ರೀತಿ ಪ್ರಯೋಜನವಾಗಬಲ್ಲದು, ಇದರ ಅನುಷ್ಠಾನ ಹೇಗೆ, ಯೋಜನಾ ವೆಚ್ಚ ಹಾಗೂ ಸಾರ್ವಜನಿಕರಿಗೆ ಮಿತದರಲ್ಲಿ ನೀರು ಒದಗಿಸಲು ಸಾಧ್ಯವೇ ಎಂಬುದರ ಬಗ್ಗೆ ಅಧ್ಯಯನ ನಡೆಸಿ ಸ್ಪಷ್ಟವಾದ ಕಾರ್ಯ ಸಾಧ್ಯತಾ ವರದಿ ಬಂದ ಬಳಿಕವಷ್ಟೇ ಯೋಜನೆ ಜಾರಿಯಾಗಬಲ್ಲದು. ಒಂದು ವೇಳೆ ಇದು ಇಲ್ಲಿಗೆ ಸೂಕ್ತವಾಗುವುದಿಲ್ಲವಾದರೆ ಯೋಜನೆಯನ್ನು ಕೈಬಿಡುವ ಬಗ್ಗೆ ಚಿಂತಿಸಲಾಗುವುದು ಎಂದು ಸಚಿವರು ತಿಳಿಸಿದರು.

ಪ್ರಸಕ್ತ 50 ಎಂಎಲ್‍ಡಿ ಉಪ್ಪು ನೀರನ್ನು ಸಿಹಿ ನೀರಿಗೆ ಪರಿವರ್ತಿಸುವ ಯೋಜನೆಯನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸಲಾಗುವುದು. ಈ ನಿಟ್ಟಿನಲ್ಲಿ ಯೋಜನೆ ಅನುಷ್ಠಾನಗೊಳ್ಳುವ ನಿಖರ ಸ್ಥಳ, ಯೋಜನಾ ವೆಚ್ಚ ಮತ್ತು ಬಂಡವಾಳ, ಕಾರ್ಯಾಚರಣೆ ಮತ್ತು ನಿರ್ವಹಣೆ, ಅಂತಿಮವಾಗಿ ಗ್ರಾಹಕನಿಗೆ ಸರಬರಾಜಾಗುವ ನೀರಿನ ವೆಚ್ಚ ಮತ್ತಿತರ ಅಂಶಗಳನ್ನು ಅಧ್ಯಯನ ಮಾಡಿ, ಸ್ಪಷ್ಟವಾದ ವರದಿಯನ್ನು ನೀಡುವಂತೆ ಸಚಿವ ಯು.ಟಿ. ಖಾದರ್ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್, ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಮುಖ್ಯ ಇಂಜಿನಿಯರ್ ಜಯರಾಂ, ಮಹಾನಗರಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್, ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು, ಪ್ರಮುಖ ಕೈಗಾರಿಕೆ, ಉದ್ಯಮ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Comments are closed.