ಕರಾವಳಿ

ಆರೋಪ ಸಾಬೀತುಪಡಿಸಲು ಸರಕಾರ ವಿಫಲ : ಸಂಸದ ನಳಿನ್‌ ಹಾಗೂ ಜಗದೀಶ್ ಕಾರಂತ್ ಖುಲಾಸೆ

Pinterest LinkedIn Tumblr

ಮಂಗಳೂರ : ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪ ಎದುರಿಸುತ್ತಿದ್ದ ಸಂಸದ ನಳಿನ್‌ ಕುಮಾರ್ ಕಟೀಲ್ ಹಾಗೂ ಹಿಂದೂ ಜಾಗರಣಾ ವೇದಿಕೆ ಮುಖಂಡ ಜಗದೀಶ್ ಕಾರಂತ್ ಅವರನ್ನು ಖುಲಾಸೆಗೊಳಿಸಿ ರಾಜ್ಯ ಹೈಕೋರ್ಟ್ ತೀರ್ಪು ನೀಡಿದೆ.

ಸಂಸದ ನಳಿನ್‌ ಕುಮಾರ್ ಕಟೀಲ್ ಹಾಗೂ ಹಿಂದೂ ಜಾಗರಣಾ ವೇದಿಕೆ ಮುಖಂಡ ಜಗದೀಶ್ ಕಾರಂತ್ ಅವರ ವಿರುದ್ಧ ಸುಳ್ಯದಲ್ಲಿ 2009ರಲ್ಲಿ ಕೋಮು ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದಲ್ಲಿ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸುಳ್ಯದ ಚೆನ್ನಕೇಶವ ದೇವಸ್ಥಾನದ ಮೈದಾನದಲ್ಲಿ 2009ರ ಫೆಬ್ರವರಿ 12ರಂದು ಆಯೋಜಿಸಿದ ಹಿಂದೂ ಜನ ಜಾಗೃತಿ ಎಂಬ ಕಾರ್ಯಕ್ರಮದಲ್ಲಿ ಭಾಷಣಕಾರರಾಗಿ ಭಾಗವಹಿಸಿದ್ದ ಜಗದೀಶ್ ಕಾರಂತ್ ಮತ್ತು ನಳಿನ್‌ಕುಮಾರ್ ಕಟೀಲ್ ಸೇರಿದಂತೆ 12 ಮಂದಿ ಕೋಮು ಪ್ರಚೋದನಾಕಾರಿಯಾಗಿ ಭಾಷಣ ಮಾಡಿದ್ದರು ಎಂದು ಆರೋಪಿಸಿ ಕೆ.ಎಸ್.ಉಮರ್ ಎಂಬವರು 2009 ಮಾ. 4ರಂದು ಖಾಸಗಿ ದೂರು ನೀಡಿದ್ದರು.

ಈ ಪ್ರಕರಣವನ್ನು ಪೊಲೀಸ್ ಇಲಾಖೆ ಮೂಲಕ ತನಿಖೆ ನಡೆಸಿ ಸರಕಾರದ ವಿಶೇಷ ಅನುಮತಿ ಪಡೆದು ಸುಳ್ಯದ ನ್ಯಾಯಾಲಯಕ್ಕೆ ಆರೋಪಪಟ್ಟಿಯನ್ನು ಸಲ್ಲಿಸಲಾಗಿತ್ತು. ಬಳಿಕ ಸುಪ್ರೀಂ ಕೋರ್ಟ್ ನಿರ್ದೇಶನ ಮೇರೆಗೆ ಈ ಪ್ರಕರಣವನ್ನು ಹೈಕೋರ್ಟ್‌ನ ವಿಶೇಷ ನ್ಯಾಯಾಲಯ ವಿಚಾರಣೆಗೆ ಕೈಗೆತ್ತಿಕೊಂಡಿತ್ತು.

ಈ ಪ್ರಕರಣದಲ್ಲಿ ಯಾವುದೇ ಸಕಾರಣವಿಲ್ಲದೆ ದೂರು ದಾಖಲಿಸಲು ವಿಳಂಬವಾಗಿದೆ. ಸಾಕ್ಷಿದಾರರು ರಾಜಕೀಯ ದುರುದ್ದೇಶದಿಂದ ಆರೋಪಿಗಳ ವಿರುದ್ಧ ಸಾಕ್ಷಿ ನುಡಿಯುತ್ತಿರುವುದು ಸ್ಪಷ್ಟವಾಗಿದೆ. ಅಭಿಯೋಜನೆಗೆ ಸರಕಾರ ಅನುಮತಿ ನೀಡುವ ವೇಳೆ ಕಾನೂನಿನ ಉಲ್ಲಂಘಟನೆಯಾಗಿದೆ. ಅಲ್ಲದೆ, ದುರುದ್ದೇಶದಿಂದ ಆರೋಪಿಗಳು ಪ್ರಚೋದನಾಕಾರಿಯಾಗಿ ಭಾಷಣ ಮಾಡಿದ್ದಾರೆ ಎಂಬ ಆರೋಪವನ್ನು ಸಾಬೀತುಪಡಿಸಲು ಸರಕಾರ ವಿಫಲವಾಗಿದೆ ಎಂದು ಹೇಳಿರುವ ಹೈಕೋರ್ಟ್‌ನ ವಿಶೇಷ ನ್ಯಾಯಾಲಯ ಇವರಿಬ್ಬರನ್ನು ಖುಲಾಸೆಗೊಳಿಸಿದೆ.

Comments are closed.