ಕರಾವಳಿ

ಸಮರ್ಪಕ ತಾಜ್ಯ ನಿರ್ವಹಿಸದ ಹಿನ್ನೆಲೆ : ಕಸ ವಿಲೇವಾರಿ ಹಾಗೂ ಸಂಸ್ಕರಣೆ ಸಂಸ್ಥೆಗಳಿಗೆ ಪಾಲಿಕೆಯಿಂದ ನೋಟಿಸ್

Pinterest LinkedIn Tumblr

ಮಂಗಳೂರು : ಕಸ ವಿಲೇವಾರಿಗೆ ಹಾಗೂ ಸಂಸ್ಕರಣೆಯ ಗುತ್ತಿಗೆ ವಹಿಸಿಕೊಂಡಿರುವ ಆ್ಯಂಟನಿ ವೇಸ್ಟ್‌ ಹ್ಯಾಂಡಲಿಂಗ್‌ ಸಂಸ್ಥೆ ಹಾಗೂ ಯುನಿಕ್‌ ವೇಸ್ಟ್‌ ಪ್ರೊಸೆಸಿಂಗ್‌ ಸಂಸ್ಥೆ ಸಮರ್ಪಕ ತಾಜ್ಯ ನಿರ್ವಹಿಸದ ಹಿನ್ನೆಲೆಯಲ್ಲಿ ಸಂಸ್ಥೆಗೆ ನೋಟಿಸ್‌ ನೀಡಿ ದಂಡ ಹಾಕಲಾಗಿದೆ ಎಂದು ಮೇಯರ್‌ ಭಾಸ್ಕರ್‌ ಕೆ. ತಿಳಿಸಿದರು.

ಪಾಲಿಕೆ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸ ವಿಲೇವಾರಿಗೆ ಹಾಗೂ ಸಂಸ್ಕರಣೆಯ ಗುತ್ತಿಗೆ ವಹಿಸಿಕೊಂಡಿರುವ ಆ್ಯಂಟನಿ ವೇಸ್ಟ್‌ ಹ್ಯಾಂಡಲಿಂಗ್‌ ಸಂಸ್ಥೆ ಹಾಗೂ ಯುನಿಕ್‌ ವೇಸ್ಟ್‌ ಪ್ರೊಸೆಸಿಂಗ್‌ ಸಂಸ್ಥೆಗೆ ತಿಂಗಳಿಗೆ 2.5 ಕೋಟಿ ರೂ. ಪಾಲಿಕೆಯಿಂದ ಪಾವತಿ ಮಾಡಲಾಗುತ್ತಿದೆ. ಸಂಸ್ಥೆಯ ಆಂತರಿಕ ಸಮಸ್ಯೆಯಿಂದಾಗಿ ಕಾರ್ಮಿಕರು ಈ ಹಿಂದೆ ಮುಷ್ಕರ ಹೂಡಿದ್ದು, ಈ ಕಾರ್ಮಿಕರಿಗೂ ಪಾಲಿಕೆಗೂ ಸಂಬಂಧವಿಲ್ಲ. ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಗೆ ನೋಟಿಸ್‌ ನೀಡಿ ದಂಡ ಹಾಕಲಾಗಿದೆ ಎಂದು ಹೇಳಿದರು.

ಮಳೆ ನೀರನ್ನು ಒಳಚರಂಡಿಗೆ :ವರದಿ ಬಂದ ಮೇಲೆ ಕ್ರಮ

ಮಳೆ ನೀರನ್ನು ಒಳಚರಂಡಿಗೆ ಹಾಯಿಸುತ್ತಿರುವುದರಿಂದ ಜೋರಾಗಿ ಮಳೆ ಬಂದರೆ ಒಳಚರಂಡಿ ನೀರು ರಸ್ತೆಗೆ ಬಂದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಫ್ಲ್ಯಾಟ್‌, ಮನೆಗಳಿಂದ ಮಳೆ ನೀರನ್ನು ಒಳಚರಂಡಿಗೆ ಹಾಯಿಸುತ್ತಿರುವ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದೆ. 15 ದಿನಗಳಲ್ಲಿ ಸಮೀಕ್ಷೆ ವರದಿ ಸಿಗಲಿದ್ದು, ವರದಿಯ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್‌ ತಿಳಿಸಿದರು.

ಸ್ಮಾರ್ಟ್‌ ಸಿಟಿ ಯೋಜನೆ : 215 ಕೋಟಿ ರೂ. ಅನುದಾನ ಬಿಡುಗಡೆ

ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಎಸ್‌ಪಿವಿ (ಸ್ಪೆಷಲ್‌ ಪರ್ಪಸ್‌ ವೆಹಿಕಲ್‌) ಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಇಲ್ಲಿಯವರೆಗ 215 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಅದರಲ್ಲಿ 3.87 ಕೋಟಿ ರೂ. ಈಗಾಗಲೇ ಖರ್ಚಾಗಿದೆ. ಕಳೆದ ಒಂದು ವರ್ಷದಿಂದ ಸ್ಮಾರ್ಟ್‌ ಸಿಟಿ ಪ್ರಸ್ತಾವನೆಯಲ್ಲಿ ಒಟ್ಟು 42 ಕಾಮಗಾರಿಗಳಿಗೆ ಕಾನ್ಸೆಪ್ಟ್ ಪ್ಲ್ರಾನ್‌, ಕಾಮಗಾರಿಗಳಿಗೆ ಡಿಪಿಆರ್‌ ಅಂತಿಮಗೊಂಡು ಎಸ್‌ಪಿವಿಯ ಅನುಮೋದನೆ ಪಡೆಯಲಾಗುತ್ತಿದೆ ಎಂದು ತಿಳಿಸಿದರು.

ಉಪಮೇಯರ್‌ ಮಹಮ್ಮದ್‌ ಮರಕಡ, ಸಚೇತಕ ಶಶಿಧರ ಹೆಗ್ಡೆ, ಸದಸ್ಯರಾದ ನವೀನ್‌ ಡಿ’ಸೋಜಾ, ಪ್ರವೀಣ್‌ಚಂದ್ರ ಆಳ್ವ, ಲತಾ ಸಾಲ್ಯಾನ್‌, ಕಮಿಷನರ್‌ ಮಹಮ್ಮದ್‌ ನಝೀರ್‌, ಆರೋಗ್ಯಾಧಿಕಾರಿ ಡಾ| ಮಂಜಯ್ಯ ಶೆಟ್ಟಿ, ಪರಿಸರ ಅಧಿಕಾರಿಗಳಾದ ಮಧು, ದೀಪ್ತಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Comments are closed.