ಕರಾವಳಿ

ವಿಶ್ವಗುರು ಸ್ಥಾನದಲ್ಲಿ ಭಾರತ : ಕ್ಯಾಪ್ಟನ್ ಗಣೇಶ್ ಕಾರ್ಣಿಕ್

Pinterest LinkedIn Tumblr

ಮಂಗಳೂರು : ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಕ್ರೀಡಾ ಭಾರತಿಯ ಮಂಗಳೂರು ಘಟಕದ ಅಶ್ರಯದಲ್ಲಿ ಮಂಗಳೂರಿನ ಹಿಂದಿ ಪ್ರಚಾರ ಸಮಿತಿ ಸಭಾ ಭವನದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಾಜಿ ಶಿಕ್ಷಕ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಮತ್ತು ವಿರೋಧ ಪಕ್ಷದ ಮುಖ್ಯ ಸಚೇತಕರಾಗಿದ್ದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಮಾತನಾಡಿ, ಭಾರತವು ವಿಶ್ವಗುರು ಸ್ಥಾನದತ್ತ ಶರವೇಗದಲ್ಲಿ ಹೆಜ್ಜೆ ಹಾಕುತ್ತಾ ಇದೆ, ನಮ್ಮ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರು ಎಲ್ಲ ಕ್ಷೇತ್ರಗಳಲ್ಲಿಯೂ ಭಾರತವನ್ನು ವಿಶ್ವದ ರಾಷ್ಟ್ರಗಳು ಗೌರವಿಸುವ, ಗುರುತಿಸುವ ಕಾರ್ಯ ಮಾಡುತ್ತಾ ಇದ್ದು ಅವುಗಳಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯು ಮುಖ್ಯವಾಗಿದೆ ಮತ್ತು ವಿಶ್ವದ 192 ರಾಷ್ಟ್ರಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾ ತಮ್ಮ ಆರೋಗ್ಯ ಸಂಪತ್ತು ಕಾಪಾಡುವತ್ತ ಹೆಜ್ಜೆ ಹಾಕುತ್ತಾ ಇರುವುದು ನಮ್ಮ ಭಾರತೀಯರಿಗೆ ಹೆಮ್ಮೆಯ, ಗೌರವದ ವಿಚಾರವಾಗಿದೆ ಎಂದು ಹೇಳಿದರು.

ನಿವೃತ್ತ ಅಧ್ಯಾಪಕರಾದ ಶ್ರೀಯುತ ಜನಾಧ೯ನ ಆಚಾರ್ ಅವರು ಯೋಗದ ಮಹತ್ವವನ್ನು ಮತ್ತು ಅದು ಭಾರತದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದ ರೀತಿ, ಅದರಿಂದ ಪ್ರಯೋಜನ ಪಡೆಯುತ್ತಿರುವ ಮಹಾನ್ ವ್ಯಕ್ತಿಗಳ ಬಗ್ಗೆ ಮಾತಾಡುತ್ತಾ, ಯೋಗ, ಧ್ಯಾನ, ಪ್ರಾಣಾಯಾಮಗಳು ಶ್ರೇಷ್ಠ ವ್ಯಕ್ತಿಗಳ ಸಂಪತ್ತಾಗಿದ್ದು ಮತ್ತು ಅದರಲ್ಲಿ ನಾವೆಲ್ಲರೂ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರ ಮೂಲಕ ಅದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಹೇಳಿದರು.

ಶ್ರೀಯುತ ಧನಂಜಯ, ಶ್ರೀಮತಿ ಸಂಜನಾ ಮೂತಿ೯, ಶ್ರೀಮತಿ ಶಾಂಭವಿರವರು ಯೋಗ, ಧ್ಯಾನ, ಪ್ರಾಣಾಯಾಮಗಳನ್ನು ಪ್ರಾಯೋಗಿಕವಾಗಿ ಮಾಡಿಸಿದರು.

ಕ್ರೀಡಾ ಭಾರತೀಯ ಅಧ್ಯಕ್ಷರಾದ ಶ್ರೀ ಕಾರ್ಯಪ್ಪ ರೈ ಸ್ವಾಗತಿಸಿದರೆ, ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಮೋದ್ ಆರಿಗ ಧನ್ಯವಾದ ಸಮರ್ಪಿಸಿದರು. ಜೊತೆ ಕಾರ್ಯದರ್ಶಿ ಶ್ರೀ ಕೃಷ್ಣ ಶೆಟ್ಟಿ ತಾರೆಮಾರುರವರು ಕಾರ್ಯಕ್ರಮ ನಿರೂಪಿಸಿದರು. ಸಂಯೋಜಕ ಭೋಜರಾಜ್ ಕಲ್ಲಡ್ಕ ಮತ್ತು ಕ್ರೀಡಾ ಭಾರತಿಯ ಎಲ್ಲ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಶುಭಾಕೋರಿದರು.

Comments are closed.