ರಾಷ್ಟ್ರೀಯ

ಹುಡುಗಿಯೊಂದಿಗೆ ಲವ್‌ ಅಫೇರ್‌: ಯುವತಿ ತಂದೆಯ ವಿರೋಧಕ್ಕಾಗಿ ಸಿಎಎಫ್ ಜವಾನ ಗುಂಡೆಸೆದುಕೊಂಡು ಆತ್ಮಹತ್ಯೆ

Pinterest LinkedIn Tumblr


ಕೋರ್ಬಾ, ಛತ್ತೀಸ್‌ಗಢ : ಛತ್ತೀಸ್‌ಗಢ ಸಶಸ್ತ್ರ ಪೊಲೀಸ್‌ ಪಡೆಯ ಜವಾನ, 26ರ ಹರೆಯದ ಕಾನ್‌ಸ್ಟೆಬಲ್‌ ಗೋಪಿ ವರ್ಮಾ ಎಂಬವರು ತನ್ನ ಲವ್‌ ಅಫೇರ್‌ ವಿಫ‌ಲವಾದುದಕ್ಕೆ ಜುಗುಪ್ಸೆಗೊಂಡು ಸರ್ವಿಸ್‌ ರಿವಾಲ್ವರ್‌ನಿಂದ ಠಾಣೆಯಲ್ಲೇ ಗುಂಡೆಸೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.

ಛತ್ತೀಸ್‌ಗಢದ ರಾಜನಂದಗಾಂವ್‌ ಜಿಲ್ಲೆಯ ನಿವಾಸಿಯಾಗಿರುವ ವರ್ಮಾ ಕಳೆದ ಮೂರು ವರ್ಷಗಳಿಂದ ಇಲ್ಲಿನ ಕೋಟದೋಲ್‌ ಪೊಲೀಸ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸ್ಥಳೀಯ ಹುಡುಗಿಯೊಬ್ಬಳೊಂದಿಗೆ ಅವರಿಗೆ ಪ್ರಣಯವಿತ್ತು.

ಹುಡುಗಿ ಕರೆದ ಪ್ರಕಾರ ವರ್ಮಾ ಆಕೆಯ ಮನೆಗೆ ನಿನ್ನೆ ಭೇಟಿ ಕೊಟ್ಟಿದ್ದರು. ಆದರೆ ಹುಡುಗಿಯ ತಂದೆಗೆ ಈ ಪ್ರಣಯ ಪ್ರಸಂಗದ ಬಗ್ಗೆ ಆಕ್ಷೇಪ, ಅಸಮಾಧಾನ ಇತ್ತು. ಅಂತೆಯೇ ಅವರು ಗ್ರಾಮದ ಕೆಲ ಹಿರಿಯರನ್ನು ಮನೆಗೆ ಕರೆಸಿ ವರ್ಮಾ ಅವರನ್ನು ಅವಮಾನಿಸಿದ್ದರು ಎನ್ನಲಾಗಿದೆ.

ಇದರಿಂದ ಜುಗುಪ್ಸೆಗೊಂಡ ವರ್ಮಾ ಡೆತ್‌ ನೋಟ್‌ ಬರೆದಿಟ್ಟು ಠಾಣೆಯಲ್ಲೇ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾದರು. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Comments are closed.