ಕರಾವಳಿ

ಗಿರಾಕಿಯಂತೆ ಬಂದು ಮೊಬೈಲ್ ಎಗರಿಸಿದ ಕಿಲಾಡಿಯನ್ನು ಬಂಧಿಸಿದ ಕುಂದಾಪುರ ಪೊಲೀಸರು

Pinterest LinkedIn Tumblr

ಕುಂದಾಪುರ: ಮೊಬೈಲ್ ಅಂಗಡಿಯೊಂದಕ್ಕೆ ಬಂದ ಅಪರಿಚಿತ ವ್ಯಕ್ತಿಯೋರ್ವ ಮೊಬೈಲ್ ಖರೀದಿಸುವ ನೆಪದಲ್ಲಿ ಅಂಗಡಿ ಮಾಲಿಕನಿಗೆ ಚಳ್ಳೆಹಣ್ಣು ತಿನ್ನಿಸಿ ಮೊಬೈಲ್ ಎಗರಿಸಿ ಪರಾರಿಯಾಗಿದ್ದು ಕೆಲವೇ ಹೊತ್ತಿನಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ರಾಜಸ್ಥಾನದ ಜೋದಪುರ್ ಮೂಲದ ಅಮಿತ್ ಕುಮಾರ್ (47) ಬಂಧಿತ ಆರೋಪಿ.

ಘಟನೆ ವಿವರ: ಕೋಟೇಶ್ವರದಲ್ಲಿರುವ ಪ್ರಸಿದ್ಧ ಮೊಬೈಲ್ ಅಂಗಡಿಯೊಂದಕ್ಕೆ ಮಂಗಳವಾರ ಮಧ್ಯಾಹ್ನದ ಸುಮಾರಿಗೆ ಓರ್ವ ವ್ಯಕ್ತಿ ಆಗಮಿಸಿ ಹೊಸ ಮೊಬೈಲ್ ತೋರಿಸುವಂತೆ ಅಂಗಡಿಯವರಲ್ಲಿ ಕೇಳಿದ್ದ. ಅದರಂತೆಯೇ ಅಂಗಡಿಯವರು ವಿವಿಧ ಮಾಡೆಲ್ ತೋರಿಸಿದ್ದು ಆತ ಮಧ್ಯಾಹ್ನ ಬರುವುದಾಗಿ ತಿಳಿಸಿ ವಾಪಾಸ್ಸಾಗಿದ್ದ. ಸಂಜೆ ಅಂಗಡಿಯವರು ವ್ಯಾಪಾರವಾದ ಮೊಬೈಲ್ ತಾಳೆ ಮಾಡುವಾಗ ಒಂದು ಮೊಬೈಲ್ ಕಮ್ಮಿಯಾಗಿದ್ದು ತಿಳಿದುಬಂದಿತ್ತು. ಸುಮಾರು 16 ಸಾವಿರ ಬೆಲೆಯ ರೆಡ್ ಮಿ ನೋಟ್ 5 ಫ್ರೋ ಎಂಬ ಮೊಬೈಲ್ ಫೋನ್ ಕಳವಾಗಿತ್ತು.

ಗಿರಾಕಿಯಂತೆ ಬಂದು ಕಳವು…
ನೀಲಿ ಬಣ್ಣದ ಟೀಶರ್ಟ್ ಹಾಗೂ ಜೀನ್ಸ್ ತೊಟ್ಟಿದ್ದ ವ್ಯಕ್ತಿ ಅಂಗಡಿ ಬಂದು ಮೊಬೈಲ್ ಕಾಣುವಾಗ ಒಂದು ಮೊಬೈಲ್ ಫೋನನ್ನು ಆತ ತನ್ನ ಕೊಡೆಯೊಳಗೆ ಬಚ್ಚಿಟ್ಟಿದ್ದ. ಬಳಿಕ ತಾನು ಮಧ್ಯಾಹ್ನ ಬರುವುದಾಗಿಯೂ ತಿಳಿಸಿ ಅಲ್ಲಿಂದ ಕಾಲ್ಕಿತ್ತಿದ್ದ. ಇದೆಲ್ಲವೂ ಅಂಗಡಿಯೊಳಕ್ಕಿದ್ದ ಸಿ.ಸಿ.ಟಿವಿಯಲ್ಲಿ ದಾಖಲಾಗಿತ್ತು.

ಈ ಬಗ್ಗೆ ಪೊಲೀಸರಿಗೆ ದೂರು ಬರುತ್ತಲೇ ಕುಂದಾಪುರ ಡಿವೈಎಸ್ಪಿ ದಿನೇಶ್ ಕುಮಾರ್ ಮಾರ್ಗದರ್ಶನದಲ್ಲಿ ಸಿಪಿಐ ಮಂಜಪ್ಪ ನಿರ್ದೇಶನದಲ್ಲಿ ಕುಂದಾಪುರ ಪಿಎಸ್ಐ ಹರೀಶ್ ಆರ್.ನಾಯ್ಕ್ ಹಾಗೂ ಕ್ರೈಮ್ ವಿಭಾಗದ ಪಿಎಸ್ಐ ಸಂಕಪ್ಪಣ್ಣ ಮತ್ತು ಸಿಬ್ಬಂದಿಗಳು ತಂಡವನ್ನು ರಚಿಸಿಕೊಂಡು ಕ್ಷಿಪ್ರ ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.