ಉಪ್ಪು ನಮ್ಮ ನಿತ್ಯದ ಆಹಾರದಲ್ಲಿ ಅವಿಭಾಜ್ಯ ಅಂಗ. ಯಾವ ಕಾಲದಿಂದ ಮನುಷ್ಯ ಉಪ್ಪನ್ನು ಬಳಸಲಾರಂಭಿಸಿದ ಎಂಬುದು ಸ್ಪಷ್ಟವಾಗಿಲ್ಲದಿದ್ದರೂ ಸುಮಾರು 8000 ವರ್ಷಗಳ ಹಿಂದೆ ಈಗಿನ ರೊಮೇನಿಯಾದಲ್ಲಿ ಉಪ್ಪನ್ನು ತಯಾರಿಸುತ್ತಿದ್ದರೆಂಬ ವಾದವಿದೆ. ಈಗಂತೂ ಇದೊಂದು ಸರ್ವಕಾಲಿಕ ಬಳಕೆಯ ವಸ್ತು ಹೌದು.
ಸಮುದ್ರದಿಂದ ದೂರವಿರುವ ಜನರಿಗೆ ಉಪ್ಪಿನ ಅಗತ್ಯ ಹೆಚ್ಚಿರುತ್ತದೆ. ಮಾಂಸಹಾರಿಗಳಿಗಿಂತ ಸಸ್ಯಹಾರಿಗಳಿಗೇ ಉಪ್ಪಿನ ಅವಶ್ಯಕತೆ ಹೆಚ್ಚು. ಮಾಂಸಹಾರಿಗಳಿಗೆ ಅಗತ್ಯವಿರುವ ಉಪ್ಪು, ತಾವು ಸೇವಿಸುವ ಪ್ರಾಣಿಯ ದೇಹದಿಂದಲೇ ದೊರೆಯುತ್ತದೆ.
ಉಪ್ಪಿನ ಸೇವನೆಯಿಂದ ಅಡ್ರಿನಾಲ್ ಗ್ರಂಥಿಯು ಉತ್ತೇಜಿತಗೊಳ್ಳುತ್ತದೆ. ದೇಹದಿಂದ ಹೆಚ್ಚಿನ Potassium ಅನ್ನು ಹೊರಹಾಕಲು ಉಪ್ಪು ಸಹಕರಿಸುತ್ತದೆ. ನಮ್ಮ ದೇಹದಿಂದ ಉಪ್ಪು ವಿಶೇಷವಾಗಿ ಹೊರಹೋಗುವುದು ಮೂತ್ರಕೋಶದಿಂದಲೇ. ಈ ಅವಯವ ಜಾಡ್ಯವಾದಾಗ ಅದಕ್ಕೆ ಕೆಲಸ ಹೆಚ್ಚಾಗಬಾರದೆಂಬ ಉದ್ದೇಶದಿಂದ ವೈದ್ಯರು ಉಪ್ಪಿಲ್ಲದ ಆಹಾರವನ್ನು ವಿಧಿಸುತ್ತಾರೆ.
ಸೋಡಿಯಂ ಕ್ಲೋರೈಡ್ ಉಪ್ಪಿನ ರಾಸಾಯನಿಕ ಹೆಸರು. ಸೋಡಿಯಂ ಮಾನವನಿಗೆ ಅಗತ್ಯವಾದ ಒಂದು ಲವಣ. ಶರೀರದಲ್ಲಿ ಇದು ಎಲೆಕ್ಟ್ರೊಲೈಟ್ ಆಗಿ ಕಾರ್ಯನಿರ್ವಹಿಸುತ್ತದೆ. ಆದರೆ ಅತಿಯಾದ ಪ್ರಮಾಣದ ಉಪ್ಪಿನ ಸೇವನೆಯಿಂದ ನರಮಂಡಲಕ್ಕೆ ಧಕ್ಕೆಯಾಗುವುದಲ್ಲದೆ ಹೃದಯದ ಮಿಡಿತ ಮತ್ತು ರಕ್ತದೊತ್ತಡ ಹೆಚ್ಚುತ್ತದೆ. ಮಾನಸಿಕ ಉದ್ವೇಗ, ಹೃದಯ ಸಂಬಂಧಿ ಖಾಯಿಲೆಗಳೂ ಹೆಚ್ಚುವ ಸಂಭವವಿದೆ.
ವಿಷಸೇವನೆಯ ಸಂದರ್ಭದಲ್ಲಿ ಸಮಯ ಹಾಳುಮಾಡದೆ ಉಪ್ಪಿನ ಮಂದ ದ್ರಾವಣವನ್ನು ಕುಡಿಸಿ ವಾಂತಿ ಮಾಡಿಸುವುದರಿಂದ ಶರೀರದಲ್ಲಿ ವಿಷ ಪಸರಿಸುವ ತೀವ್ರತೆಯನ್ನು ಕಡಿಮೆಮಾಡಿ ಬಳಿಕ ವೈದ್ಯರಲ್ಲಿಗೆ ಕರೆದೊಯ್ಯಬಹುದು.
ಉಪ್ಪನ್ನು ಸಂಪೂರ್ಣವಾಗಿ ತ್ಯಜಿಸುವುದು ಅಸಾಧ್ಯವಾದರೂ ಆರೋಗ್ಯದ ದೃಷ್ಟಿಯಿಂದ ಉಪ್ಪಿನ ಬಳಕೆ ಮಿತಿಯಲ್ಲಿದ್ದರೇ ಒಳ್ಳೆಯದು.
Comments are closed.