ಕರಾವಳಿ

ಸ್ಕೌಟುಗೈಡು ಮಕ್ಕಳ ಶಾರೀರಿಕ, ಮಾನಸಿಕ ಹಾಗೂ ನೈತಿಕ ಬೆಳವಣಿಗೆಗೆ ಸಹಕಾರಿ : ನಂದಿಕೇಶನ್

Pinterest LinkedIn Tumblr

ಮಂಗಳೂರು : ಶಾಲಾ ಪ್ರಾಯದ ಮಕ್ಕಳ ಶಾರೀರಿಕ, ಮಾನಸಿಕ ಹಾಗೂ ನೈತಿಕ ಬೆಳವಣಿಗೆಗಾಗಿ ಇತರ ಸಂಘಟನೆಗಳಿಗಿಂತ ತೀರಾ ಭಿನ್ನವಾದ ಚಟುವಟಿಕೆಗಳನ್ನು ಶಿಬಿರದ ಮೂಲಕ ನೀಡುವ ಸ್ಕೌಟುಗೈಡು ಚಳವಳಿ ನಾಡಿನಾದ್ಯಂತ ಪಸರಿಸುವಂತಾಗಲಿ. ಕಾಸರ ಗೋಡು ಜಿಲ್ಲೆಯಲ್ಲಿ ಈ ಚಳವಳಿ ಎಲ್ಲ ಶಾಲೆಗಳಲ್ಲಿ ಚೆನ್ನಾಗಿ ನಡೆಯುವಂತೆ ಮಾಡುವುದಕ್ಕಾಗಿ ಹೆಚ್ಚು ಮಂದಿ ಅಧ್ಯಾಪಕರು ತರಬೇತಿ ಪಡೆಯುವಂತಾಗಬೇಕು. ಅದಕ್ಕೆ ಅಗತ್ಯವಾದ ಪ್ರಯತ್ನ ಎಲ್ಲ ಕಡೆಗಳಿಂದಲೂ ನಡೆಯುವಂತಾಗಲಿ ಎಂದು ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿ ನಂದಿಕೇಶನ್ ನುಡಿದರು.

ಕೇರಳ ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಾಸರಗೋಡು ಜಿಲ್ಲಾ ಮುಖ್ಯ ಆಯುಕ್ತರಾಗಿ ಅಧಿಕಾರ ಸ್ವೀಕರಿಸುತ್ತಾ ಅವರು ನುಡಿದರು.

ಜಿಲ್ಲಾ ಸ್ಕೌಟು ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಜಿಲ್ಲಾ ಸ್ಕೌಟು ವಿಭಾಗದ ಆಯುಕ್ತ ಗುರುಮೂರ್ತಿನಾಯ್ಕಾಪು ಆಯುಕ್ತರ ಸ್ಕಾರ್ಫು ನೀಡಿ ಮುಖ್ಯ ಆಯುಕ್ತರನ್ನು ಬರಮಾಡಿಕೊಂಡರು. ಅನಂತರ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಕಾರ್ಯಕಾರಿ ಸಮಿತಿಯು ಮುಂದಿನ ವರ್ಷದ ವಿವಿಧ ಯೋಜನೆಗಳಿಗೆ ಅಂಗೀಕಾರ ನೀಡಿತು.

ಜಿಲ್ಲಾ ಕಾರ್ಯದರ್ಶಿ ಕಿರಣ್ ಪ್ರಸಾದ್ ಕೂಡ್ಲು ಸ್ವಾಗತಿಸಿ ಜತೆಕಾರ್ಯದರ್ಶಿ ಅನಿತ ಎಂ ನಾಯರ್ ವಂದಿಸಿದರು.

Comments are closed.