ಕರಾವಳಿ

ಕರಾವಳಿ ಸಂಸ್ಕೃತಿಯಲ್ಲಿ ಸ್ವೀಕೃತ ಗುಣವಿದೆ : ‘ಚೇತನಾ’ ಶಿಬಿರಾರ್ಥಿಗಳನ್ನುದ್ದೇಶಿಸಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ

Pinterest LinkedIn Tumblr

ಮಂಗಳೂರು: ‘ರಾಜ್ಯದ ಕರಾವಳಿ ಜಿಲ್ಲೆಗಳು ವಿಶಿಷ್ಟ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿವೆ. ಇದರಿಂದ ಆಕರ್ಷಿತರಾಗಿ ಬಂದವರನ್ನು ತನ್ನೊಂದಿಗೆ ಸೇರಿಸಿಕೊಳ್ಳುವ ಸ್ವೀಕೃತ ಗುಣದಿಂದಾಗಿ ಇಲ್ಲಿನ ಸಂಸ್ಕೃತಿ ಬಹುಮುಖಿಯಾಗಿ ಬೆಳೆದಿದೆ. ತುಳುಜನರ ಪಾರಂಪರಿಕ ಆಚರಣೆಗಳಾದ ದೈವಾರಾಧನೆ, ನಾಗಾರಾಧನೆ ಮತ್ತು ಯಕ್ಷಾರಾಧನೆಗಳು ಇಂದು ಸಂಶೋಧನೆಯ ವಿಷಯಗಳಾಗಿ ಪ್ರಾದೇಶಿಕ ಗಡಿಯನ್ನು ದಾಟಿ ವಿಶ್ವಮಾನ್ಯವಾದುದು ಇದಕ್ಕೆ ಸಾಕ್ಷಿ’ ಎಂದು ಕರ್ನಾಟಕ ಜಾನಪದ-ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.

ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯ ಆಶ್ರಯದಲ್ಲಿ ಈ ಬಾರಿ ಎಸ್ಸೆಲ್ಸಿ ಪರೀಕ್ಷೆಯಲ್ಲಿ ಗರಿಷ್ಟ ಅಂಕ ಗಳಿಸಿದ ರಾಜ್ಯದ ವಿವಿಧ ಜಿಲ್ಲೆಗಳ ಸರಕಾರಿ ಶಾಲಾ ಬಾಲಕಿಯರಿಗಾಗಿ ಮುಡಿಪು ಇನ್ಫೋಸಿಸ್ ಸಂಸ್ಥೆಯಲ್ಲಿ ಏರ್ಪಡಿಸಲಾದ ಎಂಟುದಿನಗಳ ಸನಿವಾಸ ಶಿಬಿರದ ಅಂಗವಾಗಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಸಭಾಂಗಣದಲ್ಲಿ ಜರಗಿದ ‘ಚೇತನಾ’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ‘ಸಾಂಸ್ಕೃತಿಕ ಪರಂಪರೆ ಮತ್ತು ಯಕ್ಷಗಾನ’ ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.

ಯಕ್ಷಗಾನದ ಬಗ್ಗೆ ಶಿಬಿರಾರ್ಥಿಗಳೊಂದಿಗೆ ಸಂವಹನ ನಡೆಸಿದ ಅವರು ‘ನಮ್ಮ ಪುರಾತನ ಮೌಲ್ಯಗಳನ್ನು ವಿವಿಧ ಪ್ರಸಂಗ ಪಠ್ಯಗಳ ಮೂಲಕ ಸಂಗೀತ,ನೃತ್ಯ, ಅಭಿನಯ,ಬಣ್ಣಗಾರಿಕೆ ಮತ್ತು ಆಶು ಭಾಷಣದೊಂದಿಗೆ ಕಲಾತ್ಮಕವಾಗಿ ಕಟ್ಟಿಕೊಡುವ ಯಕ್ಷಗಾನ ಕರಾವಳಿ ಭಾಗದ ಒಂದು ರಮ್ಯಾದ್ಭುತ ರಂಗಪ್ರಕಾರ. ಪರಂಪರೆಯ ಜೊತೆಗೆ ಆಧುನಿಕ ಪರಿಷ್ಕಾರಗಳಿಗೆ ತೆರೆದು ಕೊಳ್ಳುವ ವಿಶಿಷ್ಟ ಸ್ವರೂಪದಿಂದಾಗಿ ಯಕ್ಷಗಾನವನ್ನು ಜನಜಾಗೃತಿಯ ಮಾಧ್ಯಮವಾಗಿಯೂ ಬಳಸಲಾಗುತ್ತಿದೆ’ ಎಂದು ನುಡಿದರು.

ಕರ್ನಾಟಕ ಸರಕಾರದ ಐಸಿಟಿ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಮೌಲಿಶ್ರೀ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಶಿಬಿರ ಸಂಯೋಜಕ ಹಾಗೂ ನಿಟ್ಟೆ ಇಂಜಿನಿಯರಿಂಗ್ ಕಾಲೇಜ್ ಪ್ರಾಧ್ಯಾಪಕ ಶಶಾಂಕ್ ಶೆಟ್ಟಿ ವಂದಿಸಿದರು.ಬಳಿಕ ಯಕ್ಷಗಾನ ಬಯಲಾಟ ಪ್ರಾತ್ಯಕ್ಷಿಕೆ ಜರಗಿತು.

ಸ್ತ್ರೀ ಸಬಲೀಕರಣ ಯೋಜನೆಯಡಿ ನ್ಯೂ ಏಜ್ ಇನ್ಕ್ಯೂಬೇಶನ್ ನೆಟ್ವರ್ಕ್ ಎನ್ಎಂಎಐಟಿ ನಿಟ್ಟೆ, ಇನ್ಫೋಸಿಸ್ ಪ್ರೈ.ಲಿ., ಮತ್ತು ಸ್ಯಾಮ್ಸಂಗ್ ಪ್ರೈ.ಲಿ., ಸಹಯೋಗದೊಂದಿಗೆ 2018 ಮೇ 25 ರಿಂದ ಜೂನ್ 1 ರ ವರೆಗೆ ಬೆಂಗಳೂರಿನ ಐಸಿಟಿ ಸೊಸೈಟಿ ಏರ್ಪಡಿಸಿದ್ದ ಈ ಶಿಬಿರದಲ್ಲಿ ಕರ್ನಾಟಕದ 29 ಜಿಲ್ಲೆಗಳಿಂದ ಒಟ್ಟು 400 ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

Comments are closed.