ಕರಾವಳಿ

ಕುಖ್ಯಾತ ದ್ವಿಚಕ್ರ ವಾಹನ ಚೋರರ ಸೆರೆ : ಲಕ್ಷಾಂತರ ಮೌಲ್ಯದ ಐಷರಾಮಿ ದ್ವಿಚಕ್ರ ವಾಹನಗಳ ವಶ

Pinterest LinkedIn Tumblr

ಮಂಗಳೂರು: ಮಂಗಳೂರು ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯೊಂದರಲ್ಲಿ ನಗರದ ಹಲವೆಡೆಗಳಿಂದ ದುಬಾರಿ ಬೆಲೆಯ ಐಷರಾಮಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಕುಖ್ಯಾತ ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿದ್ದಾರೆ.

ಕೇರಳದ ಕಣ್ಣೂರು ಜಿಲ್ಲೆ ತಲಿಪರಂಬ ತಾಲುಕು , ಕೂಟಕಳಂ ನಿವಾಸಿಗಳಾದ ಅರ್ಜುನ್ ಕೆ.ಬಿ.(18), ರೋಬಿನ್ ಬೇಬಿ ( 22), ಟಿಜೋ ಜೋಸೆಪ್ ಅಲಿಯಾಸ್ಅಗಸ್ಟಿನ್ (25) ಬಂಧಿತ ಆರೋಪಿಗಳು.

ಬಂಧಿತ ಆರೋಪಿಗಳಿಂದ 7 ರೋಯಲ್ ಎನ್ ಪೀಲ್ಡ್ ಬುಲ್ಲೆಟ್, 2 ಕೆಟಿ ಮ್ ಬೈಕ್, 1 ಯಮಹಾ ಆರ್ಒನ್ ಪೈವ್ ಬೈಕ್, 1 ಸುಜುಕಿ ಜಿಕ್ಷರ್ ಬೈಕ್, 1ಬಜಾಜ್ ಆರ್ ಎಸ್ ಬೈಕ್ , 2 ಬಜಾಜ್ ಪಲ್ಸರ್ 200 ಬೈಕ್, 2 ಎಫ್ ಜೆಡ್ ಬೈಕ್, 1 ಯಮಹಾ 135 ಹೀಗೆ ಒಟ್ಟು 17 ದುಬಾರಿ ಬೆಲೆಯ ದ್ವಿ ಚಕ್ರ ವಾಹನಗಳ ಜೊತೆಗೆ ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಶೆವರ್ಲೆಟ್ ಮತ್ತು ಇನ್ನೋವಾ ಕಾರುಗಳು ಸೇರಿದಂತೆ ಒಟ್ಟು 40 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಂಗಳೂರು ಕೇಂದ್ರ ಉಪ ವಿಭಾಗ ವಿಭಾಗದ ಠಾಣೆಗಳಲ್ಲಿ ಮತ್ತು ನಗರದ ಇತರ ಠಾಣೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹಲವು ದ್ವಿ ಚಕ್ರ ವಾಹನಗಳ ಕಳವು ಪ್ರಕರಣಗಳು ದಾಖಲಾಗಿತ್ತು. ಈ ಪ್ರಕರಣಗಳ ಪತ್ತೆಯ ಕುರಿತಂತೆ ಮಂಗಳೂರು ಕೇಂದ್ರ ಉಪ ವಿಭಾಗದ ಮಂ.ಉತ್ತರ ಪೊಲೀಸ್ ಠಾಣೆ ಮತ್ತು ಮಂ.ಪೂರ್ವ ಪೊಲೀಸ್ ಠಾಣೆಯ ಅಧಿಕಾರಿಗಳ ಮತ್ತು ಸಿಬ್ಬಂದಿಯ ವಿಶೇಷ ತಂಡವನ್ನು ರಚಿಸಿ ಕಳೆದ ಒಂದು ವಾರದಿಂದ ಆರೋಪಿಗಳ ಬಗ್ಗೆ ನಿಗಾ ವಹಿಸಲಾಗಿತ್ತು.

ಕೊನೆಗೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಂಗಳೂರಿಗೆ ಬಂದು ಮಧ್ಯ ರಾತ್ರಿ ವೇಳೆಯಲ್ಲಿ ಮಂಗಳೂರು ನಗರದ ರಸ್ತೆ ಬದಿಯಲ್ಲಿ ರಾಯಲ್ ಎನ್ ಪೀಲ್ಡ್ ಬೈಕ್, ಕೆ ಟಿ ಎಮ್ ನಂತಹ ಲಕ್ಷಾಂತರ ರೂಪಾಯಿ ಮೌಲ್ಯದ ಬೈಕ್ ಗಳನ್ನು ಕಳವು ಮಾಡಿಕೊಂಡು ಕೇರಳದಲ್ಲಿ ಮಾರಾಟ ಮಾಡಿರುವುದನ್ನು ಬಹಿರಂಗಪಡಿಸಿದ್ದರು. ಕೇರಳದಲ್ಲಿ ಮಾರಾಟ ಮಾಡಿದ್ದ ಬೈಕ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮಂಗಳೂರು ಕೇಂದ್ರ ವಿಭಾಗ ಸಹಾಯಕ ಪೊಲೀಸ್ ಆಯುಕ್ತ ಎಮ್ ಜಗದೀಶ್ ನೇತೃತ್ವದಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆ ಮತ್ತು ಉತ್ತರ ಠಾಣೆಯ ವಿಶೇಷ ತಂಡದ ಮಂಗಳೂರು ಉತ್ತರ ಠಾಣಾ ಪೊಲೀಸ್ ನಿರೀಕ್ಷಕರಾದ ಯೋಗಿಶ್ ಕುಮಾರ್ ಬಿಸಿ, ಮಂಗಳೂರು ಪೂರ್ವ ಠಾಣಾ ಪಿಎಸ್ ಐ (ಕ್ರೈಂ) ನೀತು ಆರ್ ಗುಡೆ, ಎ.ಎಸ್.ಐ ಅನಂತ ಮುರುಡೇಶ್ವರ, ಮತ್ತು ಸಿಬ್ಬಂದಿಗಳಾದ ವೆಂಕಟೇಶ್, ಜಯಾನಂದ, ಉಮೇಶ್ ಕೊಟ್ಟಾರಿ, ಗಿರೀಶ್ ಜೋಗಿ, ಗಿರೀಶ್ ಕುಂಬ್ಳೆ, ಅಜಿತ್ ಮಾಥ್ಯೂ, ಆಶಿತ್ ಕಿರಣ್, ಪ್ರಶಾಂತ್ ಶೆಟ್ಟಿ, ಶಿವಪ್ಪ, ಕಿಶೋರ್ ಸುರೇಂದ್ರ, ದೇವಿ ಪ್ರಸಾದ್, ಸತೀಶ್ ಉತ್ತರ ಠಾಣೆಯ ದಯಾನಂದ, ವಾಸು, ಸುಜನ್, ಬಸವರಾಜ್ ಚಾಲಕರಾದ ಗುರುರಾಜ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Comments are closed.