ಕರಾವಳಿ

ಮೇ 27ರಂದು ಅಡ್ಯಾರ್ ಗಾರ್ಡನ್‌ನಲ್ಲಿ ಪಟ್ಲ ಫೌಂಡೇಷನ್‌ನಿಂದ ಯಕ್ಷಧ್ರುವ ಪಟ್ಲ ಸಂಭ್ರಮ-2018 : ಪಟ್ಲ ಪ್ರಶಸ್ತಿ ಪ್ರದಾನ : ನಟ ದರ್ಶನ್, ರಿಷಭ್ ಶೆಟ್ಟಿ ವಿಶೇಷ ಆಕರ್ಷಣೆ

Pinterest LinkedIn Tumblr

ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ನ 3ನೇ ವರ್ಷದ ಪಟ್ಲ ಸಂಭ್ರಮ-2018 ಕಾರ್ಯಕ್ರಮವು ಮೇ ಮೇ 27ರಂದು ಅಡ್ಯಾರ್ ಗಾರ್ಡನ್ ನಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಪಟ್ಲ ಪ್ರಶಸ್ತಿ-2018 ಪ್ರದಾನ, ರಕ್ತದಾನ ಶಿಬಿರ, ಉಚಿತ ವೈದ್ಯಕೀಯ ತಪಾಸಣೆ, ಕಲಾವಿದರಿಗೆ ಪ್ರೋತ್ಸಾಹಧನ, ಅಶಕ್ತ ಕಲಾವಿದರಿಗೆ ಗೃಹ ನಿರ್ಮಾಣಕ್ಕೆ ಸಹಾಯಧನ ವಿತರಣೆ ಜೊತೆಗೆ ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿವೇತನ, ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ನ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಅಡ್ಯಾರ್ ಸಮೀಪ ವಿರುವ ಅಡ್ಯಾರ್ ಗಾರ್ಡನ್‌ನಲ್ಲಿ ಮೇ 27ರಂದು ಬೆಳಗ್ಗೆ 8 ರಿಂದ ರಾತ್ರಿ 12 ಗಂಟೆಯವರೆಗೆ ಸಂಭ್ರಮ ನಡೆಯಲಿದ್ದು, ಬೆಳಗ್ಗೆ 8ರಿಂದ ಚೆಂಡೆ ಜುಗಲ್ ಬಂದಿ, ಸ್ಪರ್ಧಾತ್ಮಕ ಪೀಠಿಕೆ ಸ್ತ್ರೀವೇಷ, ಉದ್ಘಾಟನಾ ಸಮಾರಂಭ, ಬಳಿಕ ರಕ್ತದಾನ ಶಿಬಿರ, ಯಕ್ಷಗಾನ ಕಲಾವಿದರು, ಅವರ ಮನೆಯವರಿಗೆ ಉಚಿತ ವೈದ್ಯಕೀಯ ತಪಾಸಣೆ, ಉಚಿತ ಔಷಧಿ ವಿತರಣೆ, 11ರಿಂದ ಯಕ್ಷಸಪ್ತಸ್ವರ ಗಾನವೈಭವ, ಮಧ್ಯಾಹ್ನ ಮಹಿಳಾ ಯಕ್ಷಗಾನ ಪ್ರದರ್ಶನ, ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ ಎಂದು ಪಟ್ಲ ಸತೀಶ್ ಶೆಟ್ಟಿ ಹೇಳಿದರು.

ಸಂಜೆ ಪಟ್ಲ ಪ್ರಶಸ್ತಿ-2018 ಪ್ರದಾನ :

ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಛಂದೋಬ್ರಹ್ಮ ಡಾ.ಶಿಮಂತೂರು ನಾರಾಯಣ ಶೆಟ್ಟಿಯವರಿಗೆ ಒಂದು ಲಕ್ಷ ರೂ ನಗದಿನೊಂದಿಗೆ ಪಟ್ಲ ಪ್ರಶಸ್ತಿ-2018 ಪ್ರದಾನ ಮಾಡಲಾಗುವುದು.

ವೃತ್ತಿಕಕಲಾವಿದರಾದ ಕುರಿಯ ಗಣಪತಿ ಶಾಸ್ತ್ರಿ, ಆರ್ಗೋಡು ಮೋಹನ್ ದಾಸ್ ಶೆಣೈ, ಎಂ.ಕೆ. ರಮೇಶ್ ಆಚಾರ್ಯ, ಆನಂದ್ ಶೆಟ್ಟಿ ಐರಬೈಲು, ಹವ್ಯಾಸಿ ಕಲಾವಿದರಾದ ಕುತ್ತೊಟ್ಟು ವಾಸು ಶೆಟ್ಟಿ ಮತ್ತು ಪಾರೆಕೋಡಿ ಗಣಪತಿ ಭಟ್ ಹಾಗೂ ಮಹಿಳಾ ಕಲಾವಿದೆಯರಾದ ಶೀಲಾ ಕೆ. ಶೆಟ್ಟಿ, ಮತ್ತು ಮಹಾಲಕ್ಷ್ಮೀ ಡಿ.ರಾವ್ ಇವರಿಗೆ ಯಕ್ಷಧ್ರುವ ಕಲಾ ಗೌರವ ನೀಡಿ ಸನ್ಮಾನಿಸಲಾಗುವುದು. ಕೀರ್ತಿಶೇಷ ಕುಬಣೂರು ಶ್ರೀಧರ್ ರಾವ್ ಅವರಿಗೆ ಮರಣೋತ್ತರ ಪ್ರಶಸ್ತಿ ನೀಡಲಾಗುವುದು.

ಇದರ ಜೊತೆಗೆ ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿವೇತನ, ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ, ಜೊತೆಗೆ ಕಲಾವಿದರಿಗೆ ತಲಾ 50 ಸಾವಿರ ಪ್ರೋತ್ಸಾಹಧನ, ೧೫ ಮಂದಿ ಅಶಕ್ತ ಕಲಾವಿದರಿಗೆ ಗೃಹ ನಿರ್ಮಾಣಕ್ಕೆ ತಲಾ 25 ಸಾವಿರ ಸಹಾಯಧನ, ನೀಡಲಾಗುವುದು. ಡಾ. ಶಿಮಂತೂರು ನಾರಾಯಣ ಶೆಟ್ಟಿ ಹಾಗೂ ಗಣೇಶ್ ಕೊಲಕಾಡಿ ವಿರಚಿತ ಯಕ್ಷಗಾನ ಪ್ರಸಂಗಗಳ ಸಂಪುಟ ಪ್ರಕಾಶನ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿರಿಕ್ ಪಾರ್ಟಿ ಖ್ಯಾತಿಯ ರಿಷಭ್ ಶೆಟ್ಟಿ ಭಾಗವಹಿಸಿ ತಾರಾ ಮೆರುಗು ನೀಡಲಿದ್ದಾರೆ ಎಂದು ಪಟ್ಲ ಸತೀಶ್ ಶೆಟ್ಟಿ ವಿವರಿಸಿದರು.

ಯಕ್ಷಗಾನ ಕಲಾಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕಲಾವಿದರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ, ಖ್ಯಾತ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರು ಸ್ಥಾಪಿಸಿರುವ ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಈಗಾಗಲೇ ಹಲವಾರು ಸಾಮಾಜಿಕ ಸೇವಾ ಕಾರ್ಯಕ್ರಮಗಳ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ನ ಪದಾಧಿಕಾರಿಗಳಾದ ಪುರುಷೋತ್ತಮ ಭಂಡಾರಿ, ಮನು ರಾವ್, ನವನೀತ್ ಶೆಟ್ಟಿ, ಜಗನ್ನಾಥ್ ಶೆಟ್ಟಿ ಬಾಳ, ಸುದೇಶ್ ಕುಮಾರ್ ರೈ, ಪೂರ್ಣಿಮಾ ರೈ ಮುಂತಾದವರು ಉಪಸ್ಥಿತರಿದ್ದರು.

Comments are closed.