ಕರಾವಳಿ

ಬಂಟ್ಸ್ ವಲ್ಫೇರ್ ಟ್ರಸ್ಟ್ ನಿಂದ ಡಾ.ಸತೀಶ್ ರೈ, ವಿಜಯಗೌರಿ ಅವರಿಗೆ ಶ್ರದ್ಧಾಂಜಲಿ – ಕಾಯ ಬಿಟ್ಟವರು ಕಾಯಕದಿಂದ ಅಮರರು : ಸದಾನಂದ ಶೆಟ್ಟಿ

Pinterest LinkedIn Tumblr

ಮಂಗಳೂರು: ‘ ಸಾಧಕ ವ್ಯಕ್ತಿಗಳು ತಮ್ಮ ಜೀವಿತಾವಧಿಯಲ್ಲಿ ಮಾಡಿದ ಕೆಲಸ ಕಾರ್ಯ ಗಳನ್ನು ಅವರ ಜೀವನಾನಂತರವೂ ಸಮಾಜ ಗುರುತಿಸುತ್ತದೆ. ಅಂಥವರು ಕಾಯ ಬಿಟ್ಟರೂ ಕಾಯಕದಿಂದ ಅಮರರು’ ಎಂದು ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಎ.ಸದಾನಂದ ಶೆಟ್ಟಿ ಹೇಳಿದ್ದಾರೆ.

ಇತ್ತೀಚೆಗೆ ನಿಧನರಾದ ವೈದ್ಯ,ಸಾಹಿತಿ ಡಾ.ಸತೀಶ್ ರೈ ಬೆಳ್ಳಿಪ್ಪಾಡಿ ಮತ್ತು ಶಿಕ್ಷಕಿ ವಿಜಯಗೌರಿ ಪಕ್ಕಳ ಕೆ.ಆರ್. ಅವರ ಸ್ಮರಣಾರ್ಥ ಬಲ್ಮಠದ ಹೋಟೆಲ್ ಕುಡ್ಲ ಪೆವೆಲಿನ್ ನಲ್ಲಿ ಏರ್ಪಡಿಸಲಾದ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಹೃದಯ ಸಾಹಿತಿ- ಬಡವರ ಡಾಕ್ಟರ್ : ಕುಕ್ಕುವಳ್ಳಿ

‘ಸದಾಶಯ’ ತ್ರೈಮಾಸಿಕದ ಪ್ರಧಾನ ಸಂಪಾದಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ದಿ‌.ಬೆಳ್ಳಿಪ್ಪಾಡಿ ಸತೀಶ್ ರೈಯವರಿಗೆ ನುಡಿನಮನ ಸಲ್ಲಿಸಿ ಮಾತನಾಡುತ್ತಾ ‘ಮೈಸೂರಿನ ಸಿದ್ಧಾರ್ಥ ನಗರದ ಶ್ರೀ ಮಂಜುನಾಥ ಕ್ಲಿನಿಕ್ ನಲ್ಲಿ ಕಳೆದ 36 ವರ್ಷಗಳಿಂದ ವೈದ್ಯ ವೃತ್ತಿ ನಿರ್ವಹಿಸುತ್ತಿದ್ದ ಡಾ.ಸತೀಶ್ ರೈ ಬಡವರ ಡಾಕ್ಟರ್ ಎಂದೇ ಪ್ರಸಿದ್ಧರು. ಬಡವರು ಮತ್ತು ಕೂಲಿ ಕಾರ್ಮಿಕರಿಗೆ ಉಚಿತ ವೈದ್ಯಕೀಯ ನೆರವು ನೀಡುತ್ತಿದ್ದ ಅವರು ಡೆಂಗ್ಯೂ , ಚಿಕುನ್ ಗುನ್ಯಾ ಮೊದಲಾದ ಮಾರಣಾಂತಿಕ ರೋಗಗಳಿಗೆ ಪರಿಣಾಮಕಾರಿ ಔಷಧಿ ನೀಡಿ ಗುಣಪಡಿಸುತ್ತಿದ್ದರು’ ಎಂದರು.

‘ಕನ್ನಡ ಮತ್ತು ತುಳು ಭಾಷೆಗಳಲ್ಲಿ ಸುಮಾರು 21 ಕೃತಿಗಳನ್ನು ಪ್ರಕಟಿಸಿರುವ ರೈ ಅವರು ಓರ್ವ ಸಹೃದಯ ಸಾಹಿತಿ. ಅವರ ‘ಗೀತಾಮೃತ ವಾಹಿನಿ’ಕೃತಿ ಒಂಭತ್ತು ಆವೃತ್ತಿಗಳನ್ನು ಕಂಡಿದೆ. ಯಕ್ಷಗಾನದ ಉತ್ಕಟ ಅಭಿಮಾನಿಯಾಗಿರುವ ಅವರು ಮೈಸೂರಿನಲ್ಲಿ ಪ್ರತಿವರ್ಷ ಊರಿನ ಆಯ್ದ ಕಲಾವಿದರನ್ನು ಕರೆಸಿ ಬೆಳ್ಳಿಪ್ಪಾಡಿ ಯಕ್ಷೋತ್ಸವವನ್ನು ಏರ್ಪಡಿಸುತ್ತಿದ್ದರು’ ಎಂದು ಅವರು ನುಡಿದರು.

ಮಾದರಿ ಶಿಕ್ಷಕಿ ವಿಜಯಗೌರಿ : ವಿಜಯಲಕ್ಷ್ಮಿ :

ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ವಿಜಯಲಕ್ಷ್ಮಿ ಬಿ.ಶೆಟ್ಟಿ ಅವರು ದಿ.ವಿಜಯಗೌರಿ ಪಕ್ಕಳ ಅವರ ಗುಣಗಾನ ಮಾಡಿ ಮಾತನಾಡಿ ‘ನಗರದ ಸಂತ ಜೆರೋಸಾ ಪ್ರೌಢಶಾಲೆಯಲ್ಲಿ 38 ವರ್ಷ ಹಿಂದಿ ಭಾಷಾ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುವ ವಿಜಯಗೌರಿ ಅವರು ತಮ್ಮ ಸರಳ ನಡೆ-ನುಡಿಯಿಂದ ಎಲ್ಲರಿಗೂ ಮಾದರಿಯಾಗಿದ್ದರು.

ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಕನ್ನಡ ಎಂ.ಎ. ಕಲಿಯುತ್ತಿದ್ದಾಗ ಪ್ರೊ.ಎಸ್.ವಿ. ಪರಮೇಶ್ವರ ಭಟ್ ಮತ್ತು ಡಾ.ವಿವೇಕ ರೈಯವರ ಪ್ರೇರಣೆಯಿಂದ ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಂಡು ಕೃತಿರಚನೆ ಮಾಡಿರುವುದಲ್ಲದೆ ಹಲವು ಗೋಷ್ಠಿಗಳಲ್ಲೂ ಭಾಗವಹಿಸಿದ್ದಾರೆ ‘ ಎಂದು ನುಡಿದರು.

ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಯುವ ವಿಭಾಗದ ಅಧ್ಯಕ್ಷ ದೇವಿಚರಣ್ ಶೆಟ್ಟಿ, ಪದಾಧಿಕಾರಿಗಳಾದ ಪ್ರಸಾದ್ ರೈ ಕಲ್ಲಿಮಾರ್, ಕಮಲಾಕ್ಷ ಶೆಟ್ಟಿ ಕೋಡಿಕಲ್, ಕರುಣಾಕರ ಶೆಟ್ಟಿ ಮೂಲ್ಕಿ ,ಜಗದೀಶ್ ಶೆಟ್ಟಿ ಅಡ್ಯಾರ್, ಮುನಿಯಾಲ್ ಕರುಣಾಕರ ಶೆಟ್ಟಿ, ಕೆ.ಲಕ್ಷ್ಮೀನಾರಾಯಣ ರೈ ಹರೇಕಳ, ಎಂ.ಸಿ.ಶೆಟ್ಟಿ, ಮದಲಾಕ್ಷಿ ರೈ,ದೀಪಾ ಶೆಟ್ಟಿ, ಗೀತಾ ಶೆಟ್ಟಿ ಮೊದಲಾದವರು ಶ್ರದ್ಧಾಂಜಲಿ ಸಮರ್ಪಿಸಿದರು.

ಟ್ರಸ್ಟ್ ನ ಸಂಘಟನಾ ಕಾರ್ಯದರ್ಶಿ ರಾಜಗೋಪಾಲ್ ರೈ ಸ್ವಾಗತಿಸಿದರು. ಸಂಚಾಲಕ ಶ್ರೀನಾಥ ರೈ ವಂದಿಸಿದರು. ಕಚೇರಿ ಸಹಾಯಕ ಜಗನ್ನಾಥ ಶೆಟ್ಟಿ ನಿರೂಪಿಸಿದರು.

Comments are closed.