ಕರಾವಳಿ

ನಿಫಾ ವೈರಸ್ ಮುನ್ನೆಚ್ಚರಿಕೆ ವಹಿಸಿ, ಗಾಬರಿ ಬೇಡ- ಉಡುಪಿ ಜಿಲ್ಲಾಧಿಕಾರಿ

Pinterest LinkedIn Tumblr

ಉಡುಪಿ: ನಿಫಾ ವೈರಸ್ ನಿಂದ ಹರಡುವ ಕಾಯಿಲೆ ಬಗ್ಗೆ ಜಿಲ್ಲೆಯ ಜನತೆ ಆತಂಕ ಪಡದೆ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ , ನಿಫಾ ವೈರಸ್ ನಿಯಂತ್ರಣ ಕುರಿತಂತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈಗಾಗಲೇ ಕೇರಳದ ಕ್ಯಾಲಿಕಟ್ ಮತ್ತು ಮಲ್ಲಪುರಂ ನಲ್ಲಿ ಈ ವೈರಸ್ ಕಾಣಸಿಕೊಂಡಿದ್ದು, ಸೋಂಕು ಹರಡಿದ 96 ಮಂದಿಯಲ್ಲಿ 6 ಮಂದಿ ಮೃತಪಟ್ಟಿದ್ದಾರೆ. ಬಾವಲಿಗಳು ಕಚ್ಚಿದ ಹಣ್ಣಿನಿಂದ ಈ ರೋಗ ಹರಡಲಿದ್ದು, ಮರದಿಂದ ಕೆಳಗೆ ಪಕ್ಷಿಗಳು ತಿಂದು ಬಿದ್ದ ಹಣ್ಣುಗಳನ್ನು ಸೇವಿಸದಂತೆ ತಿಳಿಸಿದ್ದ ಜಿಲ್ಲಾಧಿಕಾರಿ ಎಲ್ಲಾ ಹಣ್ಣುಗಳನ್ನು ಸ್ವಚ್ಛವಾಗಿ ತೊಳೆದು ಸೇವಿಸುವಂತೆ ಹಾಗೂ ಸಾದ್ಯವಾದಷ್ಟೂ ಹಣ್ಣುಗಳ ಸಿಪ್ಪೆ ತೆಗೆದು ಸೇವನೆ ಮಾಡುವಂತೆ ಹಾಗೂ ಕೈಗಳನ್ನು ಸೂಕ್ತ ರೀತಿಯಲ್ಲಿ ಸ್ವಚ್ಛವಾಗಿಟ್ಟುಕೊಳ್ಳುವಂತೆ ಈ ಬಗ್ಗೆ ಸಾಕಷ್ಟುಜನರಿಗೆ ಮಾಹಿತಿ ನೀಡುವಂತೆ ಎಲ್ಲಾ ಇಲಾಖೆಯವರಿಗೆ ತಿಳಿಸಿದರು.

ನಿಫಾ ವೈರಸ್ ಸೊಂಕಿದ ವ್ಯಕ್ತಿಯಲ್ಲಿ ಜ್ವರ, ತಲೆನೋವು, ವಾಂತಿ ಕಾಣಸಿಕೊಳ್ಳಲಿದ್ದು, ನಂತರ ಉಸಿರಾಟದ ತೊಂದರೆ ಹಾಗೂ ಮೆದುಳು ಜ್ವರದ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ವೈದ್ಯರಿಂದ ಪರೀಕ್ಷೆ ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ, ಸೋಂಕು ಹರಡಿದ ವ್ಯಕ್ತಿಯ ದೇಹದಿಂದ ಹೊರಬರುವ ಎಂಜಲು ಮತ್ತಿತರ ದೇಹದ ದ್ರವದಿಂದ ಮತೊಬ್ಬರ ದೇಹಕ್ಕೆ ಸೇರಿದರೆ ರೋಗ ಹರಡಲಿದ್ದು , ಬಾವಲಿಗಳು ಕಚ್ಚಿರುವ ಹಣ್ಣಿನಿಂದ ಮಾತ್ರವಲ್ಲದೇ, ಅಂತಹ ಹಣ್ಣುಗಳನ್ನು ಸೇವಿಸುವ ಸಾಕು ಪ್ರಾಣಿಗಳಿಂದಲೂ ವೈರಸ್ ಹರಡುವ ಸಾದ್ಯತೆಯಿದ್ದು, ಸಾಕು ಪ್ರಾಣಿಗಳಲ್ಲಿ ರೋಗ ಲಕ್ಷಣಗಳಿದ್ದಲ್ಲಿ ಪಶು ವೈದ್ಯರಿಂದ ಸೂಕ್ತ ಪರೀಕ್ಷೆ ಮಾಡಿಸುವಂತೆ ತಿಳಿಸಿದರು.

ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿ ಬರುವ ಸಂಶಯಾಸ್ಪದ ನಿಫಾ ವೈರಸ್ ರೋಗಿಯ ವಿವರಗಳನ್ನು ಕೂಡಲೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತೆ ಹಾಗೂ ಜಿಲ್ಲೆಯ ಎಲ್ಲಾ ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲೂ ಇಲಾಖೆಯ ವತಿಯಿಂದ ಖಾಸಗಿ/ಸರಕಾರಿ ಆಸ್ಪತ್ರೆಗಳಿಗೆ ಲಕ್ಷಣ/ಚಿಕಿತ್ಸೆ ಹಾಗೂ ಸೋಂಕು ನಿಯಂತ್ರಣಾ ಕ್ರಮ – ಇವುಗಳ ಬಗ್ಗೆ ಮಾಹಿತಿ ನೀಡಿ ಕ್ರಮ ವಹಿಸುವಂತೆ ತಿಳಿಸಿದರು. ಸೂಕ್ತ ಪರೀಕ್ಷಾ ಉಪಕರಣಗಳು ಮತ್ತು ವೈದ್ಯರು ಮತ್ತು ಶುಶ್ರೂಶಕ ಸಿಬ್ಬಂದಿಗಳಿಗೆ ಅಗತ್ಯ ರಕ್ಷಣಾ ಸಾಮಾಗ್ರಿಗಳನ್ನು ಒದಗಿಸುವಂತೆ ಜಿಲ್ಲಾ ಸರ್ಜನ್ ಹಾಗೂ ಖಾಸಗಿ ಆಸ್ಪತ್ರೆ ಸಂಘದ ಅಧ್ಯಕ್ಷರಿಗೆ ಸೂಚಿಸಿದರು.

ಎಲ್ಲಾ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ನಿಫಾ ವೈರಸ್ ಲಕ್ಷಣಗಳ ಕುರಿತು ಮಾಹಿತಿ ನೀಡುವಂತೆ ಹಾಗೂ ಕರಪತ್ರಗಳನ್ನು ಮುದ್ರಿಸಿ ಸಾರ್ವಜನಿಕರಿಗೆ ವಿತರಿಸುವಂತೆ ಹಾಗೂ ಐ.ಎಂ.ಎ ವತಿಯಿಂದ ಎಲ್ಲಾ ವೈದ್ಯರಿಗೆ ಖಾಯಿಲೆ ಹಾಗೂ ಪ್ರಮಾಣಿತ ಕಾರ್ಯ ವಿಧಾನ(Standard Operating Procedure) ಬಗ್ಗೆ ಸೂಕ್ತ ಮಾಹಿತಿ ನೀಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ, ಜಿಲ್ಲಾ ಸರ್ಜನ್ ಡಾ.ಮಧುಸೂದನ್, ಐ‌ಎಂಎ ಪ್ರತಿನಿಧಿಗಳು , ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

Comments are closed.