ಕರಾವಳಿ

ಹೆದ್ದಾರಿ ಸಮೀಪದ ಮನೆ ನುಗ್ಗಿದ್ದ ಕಳ್ಳರು; 7 ಲಕ್ಷ ಮೌಲ್ಯದ ನಗ-ನಗದು ಕನ್ನ

Pinterest LinkedIn Tumblr

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ ಸಮೀಪವೇ ಇದ್ದ ಮನೆಗೆ ತಡರಾತ್ರಿ ನುಗ್ಗಿದ ಕಳ್ಳರು ಏಳು ಲಕ್ಷ ಮೌಲ್ಯದ ನಗ ಹಾಗೂ ನಗದು ಕದ್ದು ಪರಾರಿಯಾದ ಘಟನೆ ಕುಂದಾಪುರ ತಾಲೂಕಿನ ಕುಂಭಾಸಿಯಲ್ಲಿ ನಡೆದಿದೆ. ಪೆಟ್ರೋಲ್ ಬಂಕ್ ನಡೆಸುತ್ತಿರುವ ಉದ್ಯಮಿ ಶಾಂತರಾಮ ಪ್ರಭು ಎನ್ನುವವರ ಮನೆಯಲ್ಲಿ ಈ ಕಳವು ನಡೆದಿದೆ.

ಶಾಂತರಾಮ ಪ್ರಭು ಹಾಗೂ ಮನೆಯವರು ಕುಂದಾಪುರದಲ್ಲಿರುವ ಸಂಬಂಧಿಗಳ ಮನೆಯಲ್ಲಿ ನಡೇದ ಧಾರ್ಮಿಕ ಕಾರ್ಯಕ್ರಮಕ್ಕೆ ತಡರಾತ್ರಿ ತೆರಳಿದ್ದ ಸಂದರ್ಭ ಈ ಕಳವು ನಡೆದಿದೆ. ಮನೆಯ ಮುಂಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಮನೆಯೊಳಗಿದ್ದ ಕಪಾಟು ಒಡೆದು ಕಳವು ಮಾಡಿದ್ದಾರೆ. ಶಾಂತರಾಮ್ ಅವರು ಬೆಳಗ್ಗೆ ಮನೆಗೆ ವಾಪಾಸ್ಸಾದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ.

ಕಳವಾಗಿದ್ದೇನು?
65,000 ಮೌಲ್ಯದ 6 ಗ್ರಾಂ ತೂಕದ ವಜ್ರದ ಪೆಂಡೆಂಟ್‌ ಇರುವ ಚಿನ್ನದ ಕರಿಮಣಿ ಸರ, 1,10,000 ಮೌಲ್ಯದ 30 ಗ್ರಾಂ ತೂಕದ ವಜ್ರದ ಪೆಂಡೆಂಟ್‌ ಇರುವ ಚಿನ್ನದ ಕರಿಮಣಿ , 50,000ಮೌಲ್ಯದ 8 ಗ್ರಾಂ ತೂಕದ 3 ವಜ್ರದ ಹರಳಿರುವ ಚಿನ್ನದ ಉಂಗುರ, 50,000 ಮೌಲ್ಯದ 8 ಗ್ರಾಂ ತೂಕದ ಮೂರು ಕೆಂಪು ಹರಳಿರುವ ಚಿನ್ನದ ಉಂಗುರ, 1,50,000 ಮೌಲ್ಯದ 46 ಗ್ರಾಂ ತೂಕದ ಒಂದು ಚಿನ್ನದ ನಾಣ್ಯ, ಮೂರು ಸಾವಿರ ಮೌಲ್ಯದ ಸ್ಟೀಲ್‌ಕೇಸ್‌ ಬೆಲ್ಟ್‌ ವಾಚ್‌, 80,000 ಮೌಲ್ಯದ 1 ಕೆ.ಜಿ ತೂಕದ ಬೆಳ್ಳಿಯ ಗಟ್ಟಿ-2, 1,83,000 ಬೆಲೆಬಾಳುವ 2700 ಯು.ಎಸ್‌.ಎ ಡಾಲರ್‌, ಹಾಗೂ ನಗದು ರೂಪಾಯಿ 15,000, ಮೂರು ಸಾವಿರ ಮೌಲ್ಯದ ಕಂಪ್ಯೂಟರ್‌ ಮೊಡೆಮ್‌ ಕಳವು ಮಾಡಿ ಪರಾರಿಯಾಗಿದ್ದಾರೆ, ಕಳವಾದ ಎಲ್ಲಾ ಸೊತ್ತು ಒಟ್ಟು ಮೌಲ್ಯ ರೂಪಾಯಿ 7,09,000 ಆಗಿದೆ.

ಮನೆ ಮುಂಭಾಗದ ಕಾಂಪೊಂಡ್ ಗೋಡೆ ಹಾರಿ ಬಂದ ಕುರುಹು ಲಭ್ಯವಾಗಿದೆ. ಇದೊಂದು ಸಕ್ರೀಯ ಜಾಲ ಎಂಬ ಗುಮಾನಿಯೂ ಇದೆ. ಸ್ಥಳಕ್ಕೆ ಉಡುಪಿ ಜಿಲ್ಲಾ ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಕುಂದಾಪುರ ಸಿಪಿಐ ಮಂಜಪ್ಪ, ಎಸ್.ಐ ಹರೀಶ್ ಆರ್., ಕ್ರೈಮ್ ವಿಭಾಗದ ಎಸ್.ಐ ಸಂಕಪ್ಪಯ್ಯ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖೆ ನಡೆಯುತ್ತಿದೆ.

ಶ್ವಾನದಳ ಹಾಗೂ ಬೆರಳಚ್ಚು ತಜ್ಞರಿಂದ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲು ಮಾಡಿಕೊಂಡಿರುವ ಕುಂದಾಪುರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Comments are closed.