ಕರಾವಳಿ

ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ : ರಾಜ್ಯದಲ್ಲಿ ಮತ್ತೊಮ್ಮೆ ನೀತಿ ಸಂಹಿತೆ ಜಾರಿ

Pinterest LinkedIn Tumblr

ಮಂಗಳೂರು ಮೇ. 18 : ಭಾರತ ಚುನಾವಣಾ ಆಯೋಗವು ಮೇ. 15 ರಂದು ಕರ್ನಾಟಕ ನೈರುತ್ಯ ಪದವೀದರರ/ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಡೆಸಲು ವೇಳಾಪಟ್ಟಿಯನ್ನು ಹೊರಡಿಸಿರುತ್ತದೆ. ಅದರಂತೆ ಮೇ 15 ರಿಂದ ಮಾದರಿ ನೀತಿ ಸಂಹಿತೆಯು ಜಾರಿಗೆ ಬಂದಿರುತ್ತದೆ.

ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಜಾರಿಯಲ್ಲಿರುವಂತೆ ವಿಧಾನಪರಿಷತ್ ಚುನಾವಣೆಯಲ್ಲೂ ರಾಜಕೀಯ ಪಕ್ಷ ಮತ್ತು ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಮಾದರಿ ನೀತಿ ಸಂಹಿತೆಯು ಅನ್ವಯವಾಗುತ್ತದೆ.

ಮಾದರಿ ನೀತಿ ಸಂಹಿತೆಯನ್ವಯ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷವು ಅಧಿಕಾರ ದುರುಪಯೋಗ ಮಾಡುವುದನ್ನು ತಡೆಗಟ್ಟಬೇಕಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಂತ್ರಿಗಳು ಚುನಾವಣಾ ಪ್ರಕ್ರಿಯೆ ಜಾರಿ ಇರುವ ಅವಧಿಯಲ್ಲಿ ಸರಕಾರದ ವಿವಿಧ ಯೋಜನೆಗಳ ಪ್ರಯೋಜನವನ್ನು ಸಾರ್ವಜನಿಕರಿಗೆ ತಲುಪಿಸುವ ಬಗ್ಗೆ ಉದ್ಘಾಟನೆ,ಶಂಕುಸ್ಥಾಪನೆ ಮಾಡುವುದನ್ನು ನಿಷೇಧಿಸಲಾಗಿದೆ. ಅಧಿಕೃತ ಕಛೇರಿ ಕಾರ್ಯಕ್ರಮದ ನಿಮಿತ್ತ ಮಾತ್ರ ಪ್ರವಾಸಗಳನ್ನು ಕೈಗೊಳ್ಳಬಹುದಾಗಿದೆ.

ಮತದಾರರನ್ನು ಸೆಳೆಯುವಂತಹ ಸರಕಾರದ ಹೊಸ ಯೋಜನೆ/ಕಾರ್ಯಕ್ರಮವನ್ನು ಹಮ್ಮಿಕೊಳ್ಳಬಾರದು. ಕೇಂದ್ರ/ರಾಜ್ಯ ಸರಕಾರದ ಮಂತ್ರಿಗಳು ಭಾಗವಹಿಸುವ ಯಾವುದೇ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಯಾವುದೇ ಅಧಿಕಾರಿ ಭಾಗವಹಿಸಬಾರದು ಹಾಗೂ ಅವರು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಲ್ಲಿ ಅವರ ವಿರುದ್ದ ಪ್ರಜಾ ಪ್ರಾತಿನಿದ್ಯ ಕಾಯಿದೆ 1951ರ ಕಲಂ 129 (1) ರನ್ವಯ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಿಕೊಳ್ಳಲಾಗುವುದು.

ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರನ್ನು ಕರೆದು ಕೇಂದ್ರ/ರಾಜ್ಯ ಸರಕಾರದ ಮಂತ್ರಿಗಳು ಯಾವುದೇ ಸಭೆ ಸಮಾರಂಭ, ವೀಡಿಯೋ ಸಂದರ್ಶನವನ್ನು ನಡೆಸುವಂತಿಲ್ಲ. ಆದಾಗ್ಯೂ ಕಾಲಕಾಲಕ್ಕೆ ನಡೆಸಬೇಕಾದ ಪ್ರಕರಣಗಳಲ್ಲಿ ಜಿಲ್ಲಾ ಚುನಾವಣಾಧಿಕಾರಿಯವರ ಅನುಮತಿ ಪಡೆದು ನಡೆಸುವಲ್ಲಿ ಅವಕಾಶವಿರುತ್ತದೆ. ಗಣ್ಯ/ಅತಿಗಣ್ಯ ವ್ಯಕ್ತಿಗಳಿಗೆ ಪೈಲೆಟ್ ಕಾರು ನೀಡುವಲ್ಲಿ ಅವಕಾಶವಿರುವುದಿಲ್ಲ.

ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಕೇಂದ್ರ/ರಾಜ್ಯ ಸರಕಾರದ ಮಂತ್ರಿಗಳಿಗೆ ನೀಡಬೇಕಾಗಿರುವ ಭದ್ರತಾ ವ್ಯವಸ್ಥೆಯನ್ನು ನೀಡಬಹುದಾಗಿದೆ. ರಾಜಕೀಯ ಪಕ್ಷಗಳ ಸಭೆ ಸಮಾರಂಭಗಳನ್ನು ವಿಡಿಯೋ ಚಿತ್ರಿಕರಣದ ಮೂಲಕ ದಾಖಲಿಸಕೊಳ್ಳಬೇಕಾಗಿರುತ್ತದೆ.
ಚುನಾವಣೆ ಇರುವ ಕ್ಷೇತ್ರಗಳಲ್ಲಿ ಅಧಿಕೃತ ಪ್ರವಾಸದಲ್ಲಿರುವ ಕೇಂದ್ರ/ರಾಜ್ಯ ಸರಕಾರದ ಮಂತ್ರಿಗಳು, ನಗರ ಸ್ಥಳೀಯ ಸಂಸ್ಥೆಗಳ ಮೇಯರ್ / ಉಪಮೇಯರ್, ಜಿಲ್ಲಾ ಪಂಚಾಯತ್‍ಗಳ ಅಧ್ಯಕ್ಷರು / ಉಪಾಧ್ಯಕ್ಷರು ಅವರಿಗೆ ಹಂಚಿಕೆ ಮಾಡಲಾದ ವಾಹನಗಳನ್ನು ಕಛೇರಿಯಿಂದ ವಾಸ್ತವ್ಯಕ್ಕೆ ತೆರಳಲು ಉಪಯೋಗಿಸಬಹುದಾಗಿದೆ.

ಸಂಸದರ ಮತ್ತು ಶಾಸಕರ ಯೋಜನೆಯನ್ನು ಯಾವುದೇ ಹೊಸ ಕಾಮಗಾರಿಗಳಿಗೆ ಮಂಜೂರಾತಿ ನೀಡುವಲ್ಲಿ ಅವಕಾಶವಿರುವುದಿಲ್ಲ. ಚುನಾವಣಾ ಕೆಲಸ ಕಾರ್ಯಗಳಲ್ಲಿ ನಿರತರಾದ ಯಾವುದೇ ಅಧಿಕಾರಿಗಳನ್ನು ವರ್ಗಾವಣೆ ಮಾಡುವಲ್ಲಿ ಅವಕಾಶವಿರುವುದಿಲ್ಲ.

ಚುನಾವಣೆಯಲ್ಲಿ ಹಣದ ಪ್ರಭಾವವನ್ನು ತಡೆಯಲು ಕಪ್ಪು ಹಣಗಳ ಸಾಗಾಣಿಕೆಯನ್ನು ತಡೆಯುವ ಬಗ್ಗೆ ಸ್ಟ್ಯಾಟಿಕ್ ಸರ್ವೆಲೆನ್ಸ್ ಟೀಮ್‍ಗಳನ್ನು ನಿಯೋಜಿಸಲಾಗುವುದು. ಲೋಕಸಭಾ / ರಾಜ್ಯ ಸಭಾ ಚುನಾವಣೆಯಲ್ಲಿ ಜ್ಯಾರಿಯಲ್ಲಿದ್ದಂತೆ ಚುನಾವಣೆ ಸಮಯದಲ್ಲಿ ನೀಡಲಾದ ಎಲ್ಲಾ ಚುನಾವಣಾ ಪ್ರಚಾರ ಜಾಹಿರಾತುಗಳನ್ನು ಪರಿಶೀಲಿಸಿ ಅನುಮತಿ ನೀಡುವ ಬಗ್ಗೆ ಎಂಸಿಎಂಸಿ ತಂಡವನ್ನು ರಚಿಸಲಾಗುವುದು.

ಒಮ್ಮೆಲೆ (ಃuಟಞ) ಗರಿಷ್ಟ ಪ್ರಮಾಣದ ಎಸ್.ಎಂ.ಎಸ್ / ವಾಯಿಸ್ ಮೆಸೇಜ್ ಗಳನ್ನು ಕೂಡಾ ಎಂಸಿಎಂಸಿ ತಂಡವು ಪರಿಶೀಲಿಸಿ ದೃಢಪಡಿಸಿಕೊಳ್ಳಬೇಕಾಗಿರುತ್ತದೆ. ಚುನಾವಣೆ ನಡೆಯುವ ದಿನಾಂಕಗಳಂದು ಸಂಬಂಧಪಟ್ಟ ಮತಗಟ್ಟೆ ಪ್ರದೇಶ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿದೇಷವನ್ನು ಜ್ಯಾರಿಗೆ ತರಲಾಗುವುದು.

ಲೋಕಸಭಾ / ರಾಜ್ಯ ಸಭಾ ಚುನಾವಣೆಯಲ್ಲಿ ಜ್ಯಾರಿಯಲ್ಲಿದ್ದಂತೆ ವಿಧಾನಪರಿಷತ್ ಚುನಾವಣೆಯ ಪ್ರಚಾರದ ಅವಧಿಯಲ್ಲಿ ವಾಹನಗಳ ದುರ್ಬಳಕೆಯನ್ನು ತಡೆಗಟ್ಟಲಾಗುವುದು. ಚುನಾವಣೆ ನಡೆಯುವ 48 ಘಂಟೆ ಮೊದಲು ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಿರುವ ರಾಜಕೀಯ ಪಕ್ಷಗಳ ಪ್ರತಿನಿಧಿಯವರನ್ನು ಜಿಲ್ಲೆಯಿಂದ ಹೊರಗೆ ಕಳುಹಿಸಲಾಗುವುದು.

ಕರ್ನಾಟಕ ವಿಧಾನ ಪರಿಷತ್‍ಗೆ ನಡೆಯುವ ದೈವಾರ್ಷಿಕ ಚುನಾವಣೆಯನ್ನು ಮುಕ್ತ ಹಾಗೂ ಶಾಂತಿಯುತವಾಗಿ ನಡೆಸುವ ಬಗ್ಗೆ ಜಿಲ್ಲೆಯ ಸಾರ್ವಜನಿಕರು ಮತ್ತು ರಾಜಕೀಯ ಪಕ್ಷಗಳ ಪ್ರತಿನಿಧಿಯವರು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ. ಸಸಿಕಾಂತ್ ಸೆಂಥಿಲ್ ಅವರ ಪ್ರಕಟಣೆ ತಿಳಿಸಿದೆ.

Comments are closed.