ಕರಾವಳಿ

ಬಿಜೆಪಿಗರಿಗೆ ಅಭಿವೃದ್ಧಿಯ ಅಜೆಂಡಾವಿಲ್ಲ, ಅವರದ್ದು ಕೇವಲ ಹಿಂದುತ್ವದ ಅಜೆಂಡಾ: ಗೋಪಾಲ ಪೂಜಾರಿ

Pinterest LinkedIn Tumblr

ಕುಂದಾಪುರ: ಸ್ವತಂತ್ರದ ಬಳಿಕ ಬೈಂದೂರು ಕೇವಲ ಶೇಕಡಾ 10 ರಷ್ಟು ಮಾತ್ರ ಅಭಿವೃದ್ಧಿ ಕಂಡಿದೆ ಎನ್ನುವ ಬಿಜೆಪಿ ಆರೋಪ ಸತ್ಯಕ್ಕೆ ದೂರವಾದ ವಿಚಾರ. ಈ ಕ್ಷೇತ್ರದಲ್ಲಿ ನನ್ನನ್ನು ಸೇರಿದಂತೆ ಎ.ಜಿ ಕೊಡ್ಗಿ, ಅಪ್ಪಣ್ಣ ಹೆಗ್ಡೆ, ಜಿ.ಎಸ್ ಆಚಾರ್ಯ ಐ.ಎಂ ಜಯರಾಮಶೆಟ್ಟಿ, ಲಕ್ಷ್ಮೀನಾರಾಯಣ ಮೊದಲಾದವರು ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಆದರೆ ಯಾರ ಕಾಲದಲ್ಲಿಯೂ ಬೈಂದೂರು ಕ್ಷೇತ್ರ ಅಭಿವೃದ್ಧಿ ಯಾಗಿಲ್ಲವೇ? ಮಾರಸ್ವಾಮಿ ಸೇತುವೆ, ಗಂಗೊಳ್ಳಿ ಬಂದರು, ಕೊಡೇರಿ ಬಂದರು, ಕನ್ನಡ ಕುದ್ರು ಸೇತುವೆ, ಮೊವಾಡಿ ಸೇತುವೆ, ವಾರಾಹಿ ಕಾಮಗಾರಿ, ಆಲೂರು ಸೇತುವೆ, ಬಗ್ವಾಡಿ ಸೇತುವೆ ಕ್ಷೇತ್ರದ ಬಹುತೇಕ ರಸ್ತೆ ಕಾಂಕ್ರೀಟೀಕರಣಗೊಂಡಿರುವುದು ಈ ಎಲ್ಲಾ ಅಭಿವೃದ್ಧಿ ಕಾರ್ಯ ಬಿಜೆಪಿಯವರ ಕಣ್ಣಿಗೆ ಕಾಣಿಸುತ್ತಿಲ್ಲವೇ? ಬಿಜೆಪಿಯವರು ಸುಳ್ಳು ಆಪಾದನೆ ಮಾಡಿ ಜನರನ್ನ ದಿಕ್ಕು ತಪ್ಪಿಸುವುದರಲ್ಲಿ ನಿಸ್ಸೀಮರು. ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ ಕಿಡಿಕಾರಿದ್ದಾರೆ.

ಬೈಂದೂರು ಕಾಂಗ್ರೇಸ್ ಚುನಾವಣಾ ಕಛೇರಿಯಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಳೆದ 18 ವರ್ಷದಿಂದ ಯಾವುದೇ ಶಿಕ್ಷಣ ಸಂಸ್ಥೆಗಳನ್ನ ನಿರ್ಮಾಣ ಮಾಡಿಲ್ಲ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಶಿರೂರು ಪದವಿ ಪೂರ್ವ ಕಾಲೇಜು,ಬೀಜೂರು,ಆಲೂರು,ಗುಜ್ಜಾಡಿ ಪ್ರೌಡ ಶಾಲೆ,ಬೈಂದೂರು ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ, ಐ.ಟಿ.ಐ ಕಾಲೇಜು, ಹೆರಂಜಾಲು ಮೂರಾರ್ಜಿ ದೇಸಾಯಿ ವಸತಿ, ಶಂಕರನಾರಾಯಣ ವಸತಿ ಶಾಲೆ ಇವುಗಳು ಯಾರ ಕಾಲಾವಧಿಯಲ್ಲಿ ಆಗಿದೆ ಎಂಬುವುದು ಬಿಜೆಪಿಗರು ಸ್ಪಷ್ಟಪಡಿಸಬೇಕು ಎಂದರು.

ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಯಡಿಯೂರಪ್ಪನವರು ಕೆರಾಡಿ ಗ್ರಾಮವನ್ನು, ಆಸ್ಕರ್ ಪೆರ್ನಾಂಡೀಸ್‌ರವರು ಶಿರೂರು ಗ್ರಾಮವನ್ನ ದತ್ತು ಸ್ವೀಕರಿಸಿದ್ದರು. ಆದರೆ ಎರಡೂ ಗ್ರಾಮಗಳ ಅಭಿವೃದ್ಧಿ ಕಾರ್ಯಗಳನ್ನು ಜನರು ತುಲನೆ ಮಾಡಬೇಕು ಎಂದ ಅವರು ಕಾಂಗ್ರೇಸ್ ಸರ್ಕಾರದ ಅವಧಿಯಲ್ಲಿ ಕೊಲ್ಲೂರು ಅಭಿವೃದ್ಧಿಯಾಗಿದೆ ಹೊರತು ಬಿಜೆಪಿ ಅಭ್ಯರ್ಥಿಯಿಂದಲ್ಲ. ಒಂದು ವೇಳೆ ಅವರಿಂದ ಅಭಿವೃದ್ಧಿಯಾಗಿದ್ದರೆ ಬಿಜೆಪಿ ಅಭ್ಯರ್ಥಿಯ ಮೇಲೆ ಏಕೆ ಲೋಕಾಯುಕ್ತ ತನಿಖೆಯಾಗಿದೆ ಎಂದು ಪ್ರಶ್ನಿಸಿದರು.

ಇನ್ನು ಬೈಂದೂರು ಕ್ಷೇತ್ರದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣಗೊಂಡಿಲ್ಲ ಎಂಬ ಬಿಜೆಪಿ ಅಭ್ಯರ್ಥಿಯ ಆರೋಪಕ್ಕೆ ಉತ್ತರಿಸಿದ ಅವರು ಯಡಿಯೂರಪ್ಪ,ರಾಘವೇಂದ್ರ ಹಾಗೂ ಲಕ್ಷ್ಮೀನಾರಾಯಣರವರ ಅವಧಿಯಲ್ಲಿ ಯಾಕೆ ನಿರ್ಮಾಣ ಮಾಡಲು ಆಗಿಲ್ಲ ಎಂದು ಪ್ರಶ್ನಿಸಿದ ಅವರು ಕೆ.ಎಸ್.ಆರ್.ಟಿ.ಸಿ 177 ಕೋಟಿ ರೂ ನಷ್ಟದಲ್ಲಿದ್ದಾಗ ಅದರ ಅಧ್ಯಕ್ಷನಾಗಿ ನೇಮಕಗೊಂಡ ನಾನು ಅದರಲ್ಲಿ ಬದಲಾವಣೆ ತಂದು ಶೇಕಡಾ 12.5 ಯಷ್ಟು ಸಿಬ್ಬಂದಿ ವೇತನ ಹೆಚ್ಚಿಸಿ, ಸಿಬ್ಬಂದಿಗಳಿಗೆ ಆರೋಗ್ಯ ತಪಾಸಣೆಯ ಸೌಲಭ್ಯ ನೀಡಿ, ಈ ಬಾರಿ 30 ಕೋಟಿ ರೂ ಲಾಭಗಳಿಸುವಂತೆ ಮಾಡಿದೆ ಎಂದರು. ಸಂಸದರು ಈ ಕ್ಷೇತ್ರಕ್ಕೆ ಎಷ್ಟು ಬಾರಿ ಕಾಲಿಟ್ಟಿದ್ದಾರೆಂದು ಗೋಪಾಲ ಪೂಜಾರಿ ಪ್ರಶ್ನೆ ಹಾಕಿದ್ದಾರೆ.

ಹಿಂದುತ್ವ ಬಿಜೆಪಿಯ ಗುತ್ತಿಗೆಯಲ್ಲ ಎಂದ ಅವರು ಬಹುತೇಕ ದೇವಾಲಯಗಳನ್ನ ಕಟ್ಟಿದವರು ಕಾಂಗ್ರೇಸ್‌ನವರು. ಬಿಜೆಪಿಯಿಂದ ಯಾವುದೇ ದೇವಾಲಯ ನಿರ್ಮಾಣಗೊಂಡಿಲ್ಲ. ಕೇವಲ ಓಟಿಗಾಗಿ ಹಿಂದುತ್ವದ ಬಗ್ಗೆ ಮಾತನಾಡುತ್ತಾರೆ ಅಷ್ಟೆ ಎಂದು ಆರೋಪಿಸಿದರು. ಹಿಂದುತ್ವ ಎನ್ನುವುದೇ ಬಿಜೆಪಿಗರ ಅಜೆಂಡಾ ಹೊರತು ಅಭಿವ್ರಧಿಯಲ್ಲ ಎಂದರು.

ಇದೇ ಸಂದರ್ಭ ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಭಾಸ್ಕರ್ ದೇವಾಡಿಗ ಹಾಗೂ ರಾಜು ಪೂಜಾರಿ ಹಳ್ಳಿಹೊಳೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಪತ್ರಿಕಾಗೋಷ್ಠಿಯಲ್ಲಿ ಬೈಂದೂರು ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ಪ್ರತಾಪ್ ಚಂದ್ರ ಶೆಟ್ಟಿ, ರಾಜುಪೂಜಾರಿ ಯಡ್ತರೆ, ಮದನ್ ಕುಮಾರ್, ಗೌರಿ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.

Comments are closed.