ಕರಾವಳಿ

‘ಧರೆಯ ಭಾಗ್ಯವ ಕೆಡಿಸಬೇಡಿ ಸುರೆಯಧನದಾಮಿಷಕ್ಕೆ ಬಗ್ಗದೆ ಮತದಾನ ಮಾಡಿ’

Pinterest LinkedIn Tumblr

ಉಡುಪಿ: ಮತದಾನದ ಮಾಡುವ ಮೂಲಕ ನಮ್ಮ ದೇಶದ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸಿ ಎಂದು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಅವರು ಹೇಳಿದರು.

ಅವರಿಂದು ಪಡುಬಿದ್ರೆಯ ಸಂತೆ ಮಾರುಕಟ್ಟೆಯಲ್ಲಿ ಆಯೋಜಿಸಲಾದ ‘ಮತಮಹಿಮಾಮೃತ’ಯಕ್ಷಗಾನದ ಮೂಲಕ ಜನರಿಗೆ ಅರಿವು ಮೂಡಿಸುವ ಯಕ್ಷಗಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಕಳೆದ ಸಾಲಿನಲ್ಲಿ ಚುನಾವಣೆಯಲ್ಲಿ ಮತದಾನ ಮಾಡದವರು ಆತ್ಮಾವಲೋಕನ ಮಾಡಿಕೊಂಡು ಮತದಾನ ಮಾಡಿ ಎಂದ ಸಿ‌ಇ‌ಒ ಅವರು, ನೈತಿಕ ಮತದಾನಕ್ಕೆ ಒತ್ತು ನೀಡಲು ತಿಳಿಸಿದರು.

ಧರೆಯ ಭಾಗ್ಯವ ಕೆಡಿಸಬೇಡಿ ಸುರೆಯಧನದಾಮಿಷಕ್ಕೆ ಬಗ್ಗದೆ ಮತದಾನ ಮಾಡಿ ಎಂಬ ಸಂದೇಶವನ್ನೊಳಗೊಂಡ ಯಕ್ಷಗಾನ ಕಥಾ ಪ್ರಸಂಗ ನೆರೆದ ಜನರಿಗೆ ಮಾಹಿತಿಯ ಜೊತೆಗೆ ಮನರಂಜನೆಯನ್ನೂ ನೀಡಿತು. ಸಮೃದ್ಧಿಪುರದ ಅರಸ ತನ್ನ ಜನರಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಮತದಾನದ ಪ್ರಕ್ರಿಯೆಯನ್ನು ವಿವರಿಸುವ ರೀತಿ ಉತ್ತಮವಾಗಿ ಮೂಡಿಬಂತು.

ಯಕ್ಷಗಾನದಲ್ಲಿ ಪಿಂಕ್ ಮತಗಟ್ಟೆ, ವಿಶೇಷ ಚೇತನರಿಗೆ ಮತಗಟ್ಟೆಗೆ ತಲುಪಲು ಹಾಗೂ ವಾಹನದ ವ್ಯವಸ್ಥೆ ಬಗ್ಗೆ ವಿವಿಪ್ಯಾಟ್ ಒಳಗೊಂಡಂತೆ ಎಲ್ಲ ಮಾಹಿತಿಗಳಿದ್ದವು. ’ಕಾಸಿದ್ದರೆ ಕೈಲಾಸವು ದೊರೆ ಕೇಳು ಸಂತೋಷದಿ ಮತವನು ನೀಡುವೆ ನಾ, ಹೆಂಡವ ಕೊಟ್ಟರೆ ಖಂಡಿತಾ ನೀಡುವೆ ದಂಡವಲ್ಲದ ಮತವನು ಎಂಬ ಹಾಡುಗಳು ಹಣ ಹೆಂಡಗಳ ಆಮಿಷಕ್ಕೆ ಒಳಗಾಗದೆ ಮತದಾನ ಮಾಡಿ ಎಂಬ ಸಂದೇಶಗಳು, ಹಾಸ್ಯಗಾರನ ಹಾಸ್ಯದೊಂದಿಗೆ ನೈತಿಕ ಮತದಾನದ ಅಗತ್ಯವನ್ನು ಮನೋಜ್ಞವಾಗಿ ವಿವರಿಸಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಗ್ರೇಸಿ ಗೊನ್ಸಾಲ್ವಿಸ್, ವಿದ್ಯಾಂಗ ಇಲಾಖೆಯ ನಾಗೇಶ್ ಶಾನ್‌ಬಾಗ್, ನಾಗರಾಜ್, ಪಿಡಿ‌ಒಗಳಾದ ಪ್ರಮೀಳಾ, ಮಹೇಶ್, ಕಲಾಪೀಠ ಕೋಟ ತಂಡದವರು ಪಾಲ್ಗೊಂಡರು

Comments are closed.