ಕರಾವಳಿ

ಮದ್ಯ ಮಾರಾಟಕ್ಕೂ ತಟ್ಟಿದ ಚುನಾವಣಾ ನೀತಿ ಸಹಿತೆ ಬಿಸಿ : ಮದ್ಯದಂಗಡಿಗಳ ಮೇಲೆ ಚುನಾವಣಾ ಆಯೋಗದ ಹದ್ದಿನ ಕಣ್ಣು

Pinterest LinkedIn Tumblr

ಮಂಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾಗುತ್ತಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮದ್ಯ ವಹಿವಾಟಿಗೆ ಭಾರಿ ಹೊಡೆತ ಬಿದ್ದಿದೆ. ಸಾಮಾನ್ಯವಾಗಿ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಮದ್ಯ ಮಾರಾಟ ಏರಿಕೆಯಾಗುತ್ತದೆ. ಆದರೆ ಈ ಬಾರಿ ವ್ಯವಹಾರ ಅರ್ಧದಷ್ಟು ಕುಸಿತಗೊಂಡಿದೆ. ಸಾಮಾನ್ಯವಾಗಿ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಅತೀ ಹೆಚ್ಚು ಕಾರ್ಯಕ್ರಮಗಳು, ಮದುವೆಗಳು ನಡೆಯುತ್ತವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಎರಡು ತಿಂಗಳಲ್ಲಿ ಅತ್ಯಧಿಕ ಮದ್ಯ ಮಾರಾಟ ನಡೆಯುತ್ತದೆ. ಆದರೆ ಸದ್ಯ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅಧಿಕಾರಿಗಳು ಮದ್ಯ ಮಾರಾಟ, ಕುಡುಕರ ಮೇಲೆ ಕಣ್ಣಿಟ್ಟಿದ್ದಾರೆ.

ಅಕ್ರಮ ಮದ್ಯ ಮಾರಾಟ ಹಾಗೂ ಮತದಾರರಿಗೆ ಮದ್ಯವನ್ನು ಆಮಿಷವಾಗಿ ಬಳಸದಂತೆ ಮದ್ಯದಂಗಡಿಗಳ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣಿರಿಸಿದೆ.

ಇದು ಮದ್ಯ ಮಾರಾಟಗಾರರ ವ್ಯವಹಾರ ಕುಸಿಯುವಂತೆ ಮಾಡಿದೆ. ಕಾನೂನಿನ ಪ್ರಕಾರ ಸಾಮಾನ್ಯ ದಿನಗಳಲ್ಲಿ ಒಬ್ಬರಿಗೆ ಗರಿಷ್ಠ 6 ಬಾಟಲ್ ಮದ್ಯ ನೀಡಬಹುದಾಗಿದೆ. ಆದರೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಈ ಸಮಯದಲ್ಲಿ ಒಬ್ಬರಿಗೆ ಕೇವಲ 2 ಬಾಟಲ್ ಮದ್ಯ ಮಾತ್ರ ಮಾರಬಹುದಾಗಿದೆ. ಅಲ್ಲದೆ ಅಂಗಡಿ ಮಾಲೀಕರು ಪ್ರತಿನಿತ್ಯ ತಮಗಿರುವ ಬೇಡಿಕೆ ಹಾಗೂ ವ್ಯವಹಾರದ ಲೆಕ್ಕವನ್ನೂ ಚುನಾವಣಾ ಅಧಿಕಾರಿಗಳಿಗೆ ನೀಡಬೇಕಾಗಿದೆ.

ಕಳೆದ ವರ್ಷ ಮಾರ್ಚ್‌ಗೆ ಹೋಲಿಸಿದರೆ ಈ ಬಾರಿ ಜಿಲ್ಲೆಯಲ್ಲಿ ಸುಮಾರು 8,544 ಕೇಸ್ ಬಾಕ್ಸಗಳು ಕಡಿಮೆ ಮಾರಾಟವಾಗಿವೆ. ಗ್ರಾಮೀಣ ಭಾಗದಲ್ಲಿ ಶೇ. 90ರಷ್ಟು ಮದ್ಯ ಮಾರಾಟ ನಿಯಂತ್ರಣದಲ್ಲಿದ್ದು, ನಗರದ ಪ್ರದೇಶದಲ್ಲಿ ಅಧಿಕ ಪಾರ್ಸೆಲ್ ಕೊಡಲು ಮಾಲಿಕರಿಗೆ ಅವಕಾಶವಿಲ್ಲ. ಅಲ್ಲದೇ ಜಿಲ್ಲೆಯಲ್ಲಿ ಈ ಸಂದರ್ಭದಲ್ಲಿ ನಡೆಯುವ ಪಾರ್ಟಿ, ವಿವಿಧ ಬಗೆಯ ಸತ್ಕಾರ ಕೂಟಗಳ ಆಯೋಜನೆಗೆ ಪರವಾನಿಗೆ ನೀಡುತ್ತಿಲ್ಲ. ಅನುಮತಿ ನೀಡಿದರೂ ಮದ್ಯ ಬಾಟಲಿಗಳ ಸಂಖ್ಯೆಗೆ ಕಡಿವಾಣ ಬಿದ್ದಿದೆ. ವೈನ್ ಶಾಪ್‌ಗಳ ಮೇಲೂ ಕಣ್ಣಿಟ್ಟಿದ್ದು, ಕ್ರಮ ಕೈಗೊಳ್ಳಲಾಗುತ್ತಿದೆ.

Comments are closed.