ಕರಾವಳಿ

ಬೆಳ್ತಂಗಡಿ ತಾಲೂಕಿನ ನಕ್ಸಲ್‌ಪೀಡಿತ ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ, ಎಸ್‌ಪಿ ಭೇಟಿ

Pinterest LinkedIn Tumblr

ಬೆಳ್ತಂಗಡಿ, ಏಪ್ರಿಲ್. 12- ಬೆಳ್ತಂಗಡಿ ತಾಲೂಕಿನ ನಕ್ಸಲ್ ಪೀಡಿತ ಪ್ರದೇಶ ಮತಗಟ್ಟೆಗಳಿಗೆ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಡಾ. ರವಿಕಾಂತೇ ಗೌಡ ಭೇಟಿದರು.

ತಾಲೂಕಿನ ರಾಷ್ಟ್ರೀಯ ಉದ್ಯಾನವನದೊಳಗಿರುವ ನಕ್ಸಲ್ ಪೀಡಿತ ಪ್ರದೇಶಗಳಾದ ನಾರಾವಿ, ಕುತ್ಲೂರು, ನಾವರ, ಕರಿಯಾಳ ಹಾಗೂ ದಿಡುಪೆ ಪ್ರದೇಶ ಗಳಿಗೆ ಭೇಟಿ ನೀಡಿದರು.

ಮಲವಂತಿಗೆ ಗ್ರಾಮದ ಜನರ ಹಲವಾರು ವರ್ಷಗಳ ಬಹುಮುಖ್ಯ ಬೇಡಿಕೆಯಾದ ದಿಡುಪೆ-ಎಳನೀರು-ಸಂಸೆ ರಸ್ತೆಯ ಬಗ್ಯೆ ಜಿಲ್ಲಾಧಿಕಾರಿಯವರಲ್ಲಿ ಬೇಡಿಕೆ ಇಟ್ಟರು. ಮಲವಂತಿಗೆ ಗ್ರಾ. ಪಂ.ನ ಎಳನೀರು, ಗುತ್ಯಡ್ಕ, ಬಡಾಮನೆ ಮೊದಲಾದ ಪ್ರದೇಶ ಕುದುರೆಮುಖ ರಾಷ್ಟ್ರೀಯ ಉದ್ಯಾನದೊಳಗೆ ಇದ್ದು, ಅರಣ್ಯ ಇಲಾಖೆಯಿಂದಾಗಿ ಮೂಲಭೂತ ಸೌಕರ್ಯದಿಂದ ಅಲ್ಲಿನ ಜನತೆ ವಂಚಿತರಾಗಿದ್ದಾರೆ.

ಗ್ರಾ.ಪಂ.ಗೆ ಬರಕಾದರೆ ಕೇವಲ 7 ಕಿ.ಮೀ. ದೂರವಿದೆ. ಆದರೆ ರಸ್ತೆಯ ವ್ಯವಸ್ಥೆ ಇಲ್ಲದೆ ಸುತ್ತಿ ಬಳಸಿ ಬರಬೇಕಾಗಿದೆ. ಕಚ್ಚಾ ರಸ್ತೆ ಇದ್ದರೂ ಸರಿಪಡಿಸುವ ಹಾಗಿಲ್ಲ. ಅರಣ್ಯ ಇಲಾಖೆಯಿಂದಾಗಿ ವಿದ್ಯುತ್, ರಸ್ತೆ ಮರೀಚಿಕೆಯಾಗಿದೆ. ದಿಡುಪೆ-ಎಳನೀರು-ಸಂಸ್ಥೆ ಸಂಪರ್ಕ ರಸ್ತೆ ಆದಲ್ಲಿ ಎಲ್ಲರಿಗೂ ಅನುಕೂಲ ಅದೀತು ಎಂದು ತಾಪಂ ಸದಸ್ಯ ಜಯರಾಮ ಅವರು ಜಿಲ್ಲಾಧಿಕಾರಿಯವರಲ್ಲಿ ಮನವಿ ಮಾಡಿದರು.

ಈ ಹಿಂದೆಯೂ ಡಿಸಿಯವರು, ಸಿಎಸ್ ಅವರು ಭೇಟಿ ನೀಡಿದ್ದಾರೆ. ಅವರಲ್ಲಿಯೂ ಸಾಕಷ್ಟು ಭಾರಿ ಮನವಿ ಮಾಡಲಾಗಿದೆ. ಆದರೆ ನಮ್ಮ ಸಮಸ್ಯೆ ಮಾತ್ರ ಬಗೆಹರಿದಿಲ್ಲ ಎಂದಾಗ ಜಿಲ್ಲಾಧಿಕಾರಿಯವರ ಮಟ್ಟದಲ್ಲಿ ಸಮಸ್ಯೆಯನ್ನು ಬಗೆಹರಿಸುವುದಾದರೆ ಮೊದಲಿನ ಡಿಸಿಯವರು ಬಗೆಹರಿಸುತ್ತಿದ್ದರು. ಕಾನೂನಾತ್ಮಕವಾಗಿ ಬಗೆಹರಿಸುವ ಸಮಸ್ಯೆಯಾಗಿದೆ. ಇದರ ಬಗ್ಗೆ ಡಿಎಫ್‌ಒ ಅವರಲ್ಲಿ ಮಾತನಾಡುತ್ತೇನೆ. ಒಂದು ವಾರದೊಳಗೆ ನಾನು, ಎಸ್‌ಪಿಯವರು ಹಾಗೂ ಡಿಎಫ್‌ಒ ಅವರು ಎಳನೀರಿಗೆ ಭೇಟಿ ನೀಡುತ್ತೇವೆ. ಸಮಸ್ಯೆ ಬಗ್ಗೆ ಚರ್ಚೆ ಮಾಡುವ ಎಂದರು. ಕಾನೂನು ಪಾಲನೆಯೊಂದಿಗೆ ಜನರಿಗೆ ಅನುಕೂಲ ಆಗುವ ರೀತಿಯಲ್ಲಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಎಸ್‌ಪಿ ರವಿಕಾಂತೇ ಗೌಡ ಹೇಳಿದರು.

ನೀರಿನ ಸಮಸ್ಯೆ, ಒಳ ಭಾಗಗಳಲ್ಲಿ ರಸ್ತೆ ಸಮಸ್ಯೆ ಬಗ್ಗೆ ಗ್ರಾಮಸ್ಥರು ತಿಳಿಸಿದರು.ಕರಿಯಾಳ ಮತಗಟ್ಟೆಯಲ್ಲಿಯೂ ಮತಕೇಂದ್ರ ಬರುವ ಮತದಾರರಿಗೆ ಸಮಸ್ಯೆಯಾಗುತ್ತದೆ. ಇಲ್ಲಿನ ಮತಗಟ್ಟೆಗೆ ಮಕ್ಕಿ ಎಂಬಲ್ಲಿಂದ ಸುಮಾರು 5 ಕಿ.ಮೀ. ದೂರದಿಂದ ಬರಬೇಕು. ನದಿಯನ್ನು ದಾಟಿ ಬರಬೇಗುತ್ತದೆ. ವಾಹನದ ವ್ಯವಸ್ಥೆ ಇಲ್ಲ. ಸುಮಾರು 320 ಮತದಾರರಿದ್ದಾರೆ. ಅವರಿಗೆ ಕಾಜೂರು ಪರಿಸರಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡುವಂತೆ ಡಿಸಿಯವರಿಗೆ ಮನವಿ ಮಾಡಿದರು.

ಮುಂದಿನ ಚುನಾವಣೆಯಲ್ಲಿ ಈ ಬಗ್ಗೆ ಚಿಂತನೆ ನಡೆಸಲಾಗುವುದು. ಈ ಬಾರಿ ವಾಹನದ ವ್ಯವಸ್ಥೆಯ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು. ಸಾರ್ವಜನಿಕರಿಗೆ ಯಾವುದೇ ಸಮಸ್ಯೆಗಳು ಆಗದ ರೀತಿಯಲ್ಲಿ ಮತದಾನದಲ್ಲಿ ಭಾಗವಹಿಸಬೇಕು. ಆ ನಿಟ್ಟಿನಲ್ಲಿ ಮತಗಟ್ಟೆಗಳಿಗೆ ತೆರಳಿ ಅವರ ಸಮಸ್ಯೆಯನ್ನು ಆಲಿಸಲಾಗುತ್ತಿದೆ. ಬರುವ ವಾರ ಎಳನೀರು ಪ್ರದೇಶಕ್ಕೆ ಭೇಟಿ ಕೊಡಲಿದ್ದಾರೆ.

ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ., ಕಂದಾಯ ಇಲಾಧಿಕಾರಿಗಳು, ಪೊಲೀಸ್ ಇಲಾಖೆಯ ಸಿಬ್ಬಂದಿ, ಆಯಾಯ ಗ್ರಾಪಂನ ವ್ಯಾಪ್ತಿಯ ಮತದಾರರು ಉಪಸ್ಥಿತರಿದ್ದರು.

Comments are closed.