ಕರಾವಳಿ

ಕೋಟೇಶ್ವರ: ನಾಮಫಲಕದ ಕಬ್ಬಿಣದ ಪಿಲ್ಲರ್‌ಗೆ ಲಾರಿ ಡಿಕ್ಕಿ; ಚಾಲಕ ಅಪಾಯದಿಂದ ಪಾರು

Pinterest LinkedIn Tumblr

ಕುಂದಾಪುರ: ಗುಜರಿ ಸರಕು ಸಾಗಿಸುತ್ತಿದ್ದ ಲಾರಿಯೊಂದು ಹೆದ್ದಾರಿ ಸಮೀಪವಿದ್ದ ನಾಮಫಲಕದ ಫಿಲ್ಲರ್‌ಗೆ ಡಿಕ್ಕಿಯಾದ ಘಟನೆ ತಾಲೂಕಿನ ಕೋಟೇಶ್ವರದ ಸ್ಮಶಾನದ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.

 

ಮಂಗಳೂರಿನಿಂದ ಕುಂದಾಪುರದತ್ತ ಸಾಗುತ್ತಿದ್ದ ಲಾರಿ ಇದಾಗಿದ್ದು ಕೋಟೇಶ್ವರ ಸಮೀಪ ಅಳವಡಿಸಲಾಗಿದ್ದ ನವಯುಗಕ್ಕೆ ಸಂಬಂದಪಟ್ಟ ಬೃಹತ್ ನಾಮಫಲಕದ ಕಬ್ಬಿಣದ ಪಿಲ್ಲರ್‌ಗೆ ಡಿಕ್ಕಿಯಾಗಿ ಅನತಿ ದೂರ ಮುಂದಕ್ಕೆ ಸಾಗಿದೆ. ಇದರಿಂದ ಲಾರಿಯ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದಲ್ಲದೇ ಟಯರುಗಳು ಕಳಚಿದೆ. ನಾಮಫಲಕದ ಒಂದು ಕಡೆಯ ಪಿಲ್ಲರ್ ಹಾಗೂ ನಾಮಫಲಕ ನಾಶವಾಗಿದ್ದು ಇನ್ನೊಂದು ಕಡೆಯ ಪಿಲ್ಲರ್ ಅಡಿಭಾಗ ತಿರುಚಿಹೋಗಿದೆ.

ಲಾರಿಯಲ್ಲಿದ್ದ ಚಾಲಕ ಅಪಾಯದಿಂದ ಪಾರಾಗಿದ್ದಾರೆಂದು ಸ್ಥಳೀಯರು ಹೇಳುತ್ತಿದ್ದರಾದರೂ ಕೂಡ ಆತ ಸ್ಥಳದಲ್ಲಿ ಪತ್ತೆಯಾಗಿಲ್ಲ. ಚಾಲಕನ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದ ಶಂಕೆ ವ್ಯಕ್ತವಾಗಿದ್ದು ನಿಖರ ಕಾರಣ ತಿಳಿದುಬಂದಿಲ್ಲ.

ಕುಂದಾಪುರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ತನಿಖೆ ನಡೆಸುತ್ತಿದ್ದಾರೆ.

(ಚಿತ್ರ,ವರದಿ- ಯೋಗೀಶ್ ಕುಂಭಾಸಿ)

Comments are closed.