ಕರಾವಳಿ

ಶಿಸ್ತು ಉಲ್ಲಂಘನೆ ಹಿನ್ನೆಲೆಯಲ್ಲಿ ಬಿ.ಎಂ. ಭಟ್‌ರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ : ವಸಂತ ಆಚಾರಿ

Pinterest LinkedIn Tumblr

ಮಂಗಳೂರು : ಪಕ್ಷದ ಶಿಸ್ತನ್ನು ಉಲ್ಲಂಘಿಸಿ ತಮಗಿಷ್ಟ ಬಂದಂತೆ ನಡೆಯುತ್ತಿರುವ ಬಿ.ಎಂ ಭಟ್ ಅವರನ್ನು ಈಗಾಗಲೆ ಪಕ್ಷದಿಂದ ಉಚ್ಚಾಟಿಸಲಾಗಿದೆ, ಅವರು ಸಿಪಿಐಎಂ ಬಗ್ಗೆ ಮಾತನಾಡುವ ಅಗತ್ಯವಿಲ್ಲ ಎಂದು ಸಿಪಿಐ (ಎಂ) ದ.ಕ.ಜಿಲ್ಲಾ ಸಮಿತಿಯ ಕಾರ್ಯದರ್ಶಿ ವಸಂತ ಆಚಾರಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಎಂ ಭಟ್ ಅವರನ್ನು ಪಕ್ಷದಿಂದ ಉಚ್ಚಾಟಿಸಿದರೂ ಅವರು ಇನ್ನೂ ಕಚೇರಿಯಲ್ಲಿಯೇ ಕುಳಿತು ಪಕ್ಷದ ಹೆಸರನ್ನು ದುರುಪಯೋಗಮಾಡುತ್ತಿದ್ದಾರೆ. ಕಚೇರಿಯನ್ನು ಬಿಟ್ಟು ಕೊಡದಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ, ಪಕ್ಷವನ್ನು ಮೀರಿ ಹೋಗುವವರಿಗೆ ಇಲ್ಲಿ ಅವಕಾಶವೂ ಇಲ್ಲ, ಅವರ ವಿರುದ್ಧ 2002 ರಿಂದಲೇ ಪಕ್ಷದ ವೇದಿಕೆಗಳಲ್ಲಿ ಹಲವಾರು ದೂರುಗಳು ಬಂದಿದ್ದು, ಆಗಲೂ ತನಿಖೆ ನಡೆದು ಅವರಿಗೆ ತಿದ್ದಿಕೊಳ್ಳಲು ಅವಕಾಶ ನೀಡಲಾಗಿತ್ತು. ಆದರೆ ಅವರು ತಮ್ಮ ಪ್ರವೃತ್ತಿಯನ್ನು ಬಿಡದೇ ಮುಂದುವರಿಸಿದ್ದು, ಅನಿವಾರ್ಯವಾಗಿ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ತಿಳಿಸಿದರು.

ಪಕ್ಷದ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡವರಿಗೆ ಪಕ್ಷದಲ್ಲಿ ಎಂದಿಗೂ ಅವಕಾಶವಿಲ್ಲ ಅರು ಜಿಲ್ಲಾ ಸಮಿತಿಗೆ ರಾಜೀನಾಮೆ ನೀಡಿರುವುದಾಗಿ ಹೇಳುತ್ತಿದ್ದಾರೆ, ಪಕ್ಷದಲ್ಲಿದ್ದೇವೆ ಎಂದು ಹೇಳುತ್ತಿದ್ದಾರೆ. ಅವರಲ್ಲಿ ಇನ್ನೂ ಗೊಂದಲವಿದೆ. ಪಕ್ಷದಿಂದ ಹೊರಹಾಕಿದ ಬಳಿಕ ಇವರ ರಾಜೀನಾಮೆಗೆ ಯಾವ ಅರ್ಥವಿದೆ ಎಂದು ವಸಂತ ಆಚಾರಿ ಪ್ರಶ್ನಿಸಿದರು.

ಹಣ ಕಳವು ಪ್ರಕರಣ ಸಮಗ್ರ ತನಿಖೆಗೆ ಒತ್ತಾಯ :ಕೆ.ಆರ್.ಶ್ರೀಯಾನ್ 

ಅವರ ಮನೆಯಲ್ಲಿ ಹಣ ಕಳುವಾಗಿರುವ ಬಗ್ಗೆ ಮಾಹಿತಿ ಬಂದಾಗ ಅವರ ಮನೆಯಲ್ಲಿ ಅಷ್ಟೊಂದು ( ಏಳುವರೆ ಲಕ್ಷಕ್ಕೂ ಅಧಿಕ ಹಣ) ಹಣ ಶೇಖರಿಸಿಟ್ಟಿರುವ ಬಗ್ಗೆ ಅವರಿಂದ ಮಾಹಿತಿ ಕೇಳಲಾಗಿದೆ. ಆದರೆ ಕಳವು ಆಗಿರುವ ಎಲ್ಲ ಹಣವನ್ನೂ ಪಕ್ಷಕ್ಕೆ ಪಾವತಿಸಿರುವುದಾಗಿ ಬಿಎಂ ಭಟ್ ಅವರು ಹೇಳುತ್ತಿದ್ದಾರೆ. ಆದರೆ ನಮ್ಮ ಸಂಘಗಳಿಗೆ ಬರಬೇಕಾಗಿದ್ದ ಹಣವನ್ನು ಈ ವರೆಗೆ ಪಾವತಿಸಿಲ್ಲ ಅವರು ಯಾರಿಗೆ ಪಾವತಿಸಿದ್ದಾರೆ ಎಂದು ಯಾರಿಗೂ ತಿಳಿದಿಲ್ಲ. .ಹಣ ಕಳವು ಪ್ರಕರಣದ ಬಗ್ಗೆ ಇನ್ನೂ ಹಲವಾರು ಗೊಂದಲಗಳಿದ್ದು, ಪೊಲೀಸರು ಈ ಬಗ್ಗೆ ಸಮಗ್ರವಾದ ತನಿಖೆ ನಡೆಸ ಬೇಕು ಎಂದು ಸಿಪಿಐ (ಎಂ) ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ.ಆರ್.ಶ್ರೀಯಾನ್ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಿಪಿಐ (ಎಂ) ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿಯ ಇತರ ಸದಸ್ಯರಾದ ಜೆ.ಬಾಲಕೃಷ್ಣ ಶೆಟ್ಟಿ, ಕೆ.ಕೃಷ್ಣಪ್ಪ ಸಾಲ್ಯಾನ್, ಯು.ಬಿ.ಲೋಕಯ್ಯ, ವಾಸುದೇವ ಉಚ್ಚಿಲ ಮುಂತಾದವರು ಉಪಸ್ಥಿತರಿದ್ದರು.

Comments are closed.