ಕರಾವಳಿ

ಪೊಲೀಸ್ ಇಲಾಖೆಯ ಬೀಟ್ ಸಿಸ್ಟಂ ಸದೃಢ ಹಾಗೂ ಜನಸ್ನೇಹಿಯಾಗಿದೆ : ಜೆ.ಅರುಣ್ ಚಕ್ರವರ್ತಿ

Pinterest LinkedIn Tumblr

ಮಂಗಳೂರು, ಎಪ್ರಿಲ್.3 : ಮಂಗಳೂರು ಪೊಲೀಸ್ ಕಮಿಷನರೇಟ್, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಮತ್ತು ಕೆ.ಎಸ್.ಆರ್.ಪಿ. ೭ನೇ ಪಡೆ ಮಂಗಳೂರು ಘಟಕದ ಆಶ್ರಯದಲ್ಲಿ ಸೋಮವಾರ ನಗರದ ಡಿ.ಎ.ಆರ್ ಪೊಲೀಸ್ ಕವಾಯತು ಮೈದಾನದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ಹಾಗೂ ಕಲ್ಯಾಣ ದಿನಾಚರಣೆ ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ಜೆ.ಅರುಣ್ ಚಕ್ರವರ್ತಿ ಅವರು, ಪೊಲೀಸ್ ಇಲಾಖೆ ಬೀಟ್ ಸಿಸ್ಟಂ ಮೂಲಕ ಸದೃಢಗೊಂಡಿದ್ದು, ಜನಸ್ನೇಹಿಯಾಗಿ ಬೆಳೆದಿದೆ. ಹಾಗಾಗಿ ಇಲಾಖೆಯಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಪೊಲೀಸ್ ಉಪನಿರೀಕ್ಷಕ ಪ್ರಕಾಶ್ ಕುಮಾರ್ ಕೆ., ಪೊಲೀಸರು ನಿಸ್ವಾರ್ಥ ಸೇವೆ, ಸ್ನೇಹಶೀಲ ನಡೆಯಿಂದ ಕಾರ್ಯ ನಿರ್ವಹಿಸಿದಾಗ ಸವಾಲನ್ನು ಎದುರಿಸುವುದು ಸುಲಭ ಎಂದರು.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವುದೇ ಹೆಮ್ಮೆಯ ಸಂಗತಿ. ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತರಾಗುವ ಸಿಬ್ಬಂದಿಯನ್ನು ನಿರ್ಲಕ್ಷ ಮಾಡದೆ ಗೌರವಯುತ ಬದುಕಿಗೆ ದಾರಿ ಮಾಡಿಕೊಡಬೇಕು ಎಂದವರು ಹೇಳಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಬಿ.ಆರ್. ರವಿಕಾಂತೇ ಗೌಡ ವರದಿ ಮಂಡಿಸಿದರು. ಕೆ.ಎಸ್.ಆರ್.ಪಿ, ಕಮಾಂಡೆಂಟ್ ಜನಾರ್ದನ ಆರ್.ಉಪಸ್ಥಿತರಿದ್ದರು.

ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ 59 ಮಂದಿಗೆ ಅಭಿನಂದನೆ ಸಲ್ಲಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಬೋಳಾ ಪುಷ್ಪರಾಜ ಶೆಟ್ಟಿ ಸ್ಮರಣಾರ್ಥ ಅವರ ಸಹೋದರಿ ನಳಿನಿ ಭಂಡಾರಿ ಪೊಲೀಸ್ ಕಲ್ಯಾಣ ನಿಧಿಗೆ ದೇಣಿಗೆ ನೀಡಿದರು.

ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಸ್ವಾಗತಿಸಿದರು. ಪೊಲೀಸ್ ಉಪ ಆಯುಕ್ತ ಹನುಮಂತ ರಾಯ ವಂದಿಸಿದರು.

ಪೊಲೀಸರಿಂದ ಆಕರ್ಷಕ ಪಥ ಸಂಚಲನ ನಡೆದು ನಿವೃತ್ತ ಪೊಲೀಸ್ ಉಪ ನಿರೀಕ್ಷಕ ಪ್ರಕಾಶ್ ಕುಮಾರ್ ಕೆ. ಗೌರವ ವಂದನೆ ಸ್ವೀಕರಿಸಿದರು.

ಪ್ರೊಬೆಶನರ್ ಅಕ್ಷಯ್ ಎಂ.ಕೆ. ಹಕ್ಕೆ ದಂಡನಾಯಕರಾಗಿ, ಆರ್‌ಪಿಐ, ಡಿಎಆರ್ ಗಣೇಶ್ ಎಚ್.ಬಿ. ಉಪದಂಡನಾಯಕರಾಗಿ ಪಥ ಸಂಚಲನ ಮುನ್ನಡೆಸಿದರು.

Comments are closed.