ಕರಾವಳಿ

‘ಮತ ಚಲಾಯಿಸಿ, ಪ್ರಜಾಪ್ರಭುತ್ವ ಬೆಳೆಸಿ’: ಸರ್ಕಾರಿ ಕಚೇರಿಗಳ ದೈನಂದಿನ ಆಡಳಿತದಲ್ಲಿ ಮತದಾನ ಜಾಗೃತಿ

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯ ಎಲ್ಲಾ ಸರಕಾರಿ ಕಚೇರಿಗಳಲ್ಲಿ ದೈನಂದಿನ ಆಡಳಿತ ವ್ಯವಹಾರಗಳಲ್ಲಿ , ಮತದಾನ ಕುರಿತು ಜಾಗೃತಿ ಮೂಡಿಸುವ ಕುರಿತಂತೆ ವಿನೂತನ ಪ್ರಯತ್ನವನ್ನು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಜಾರಿಗೆ ತಂದಿದ್ದಾರೆ.

ಸಾಮಾನ್ಯವಾಗಿ ಸರಕಾರಿ ಕಚೇರಿಗಳಿಗೆ , ಸಾರ್ವಜನಿಕರು ಯಾವುದೇ ಪತ್ರ ನೀಡಿದಲ್ಲಿ, ಅದನ್ನು ಸ್ವೀಕರಿಸಿದ ಕುರಿತು, ಸಾರ್ವಜನಿಕರಿಗೆ ಸ್ವೀಕೃತಿ / ಹಿಂಬರಹ ನೀಡಲಾಗುತ್ತಿದೆ, ಈ ಸ್ವೀಕೃತಿಯಲ್ಲಿ ಇಲಾಖೆಯ ಹೆಸರು ಮತ್ತು ದಿನಾಂಕ ಇರುವ ಮೊಹರು (ಸೀಲ್) ಹಾಕಿ ನೀಡಲಾಗುತ್ತದೆ .

ರಾಜ್ಯ ವಿಧಾನಸಭಾ ಚುನಾವಣೆಯ ಪ್ರಯುಕ್ತ , ಮತದಾನ ಮಹತ್ವ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸಲುವಾಗಿ, ಎಲ್ಲಾ ಇಲಾಖೆಗಳು ಸಾರ್ವಜನಿಕರಿಗೆ ನೀಡುವ ಸ್ವೀಕೃತಿ ಹಿಂಬರಹಗಳಿಗೆ, ತಮ್ಮ ಇಲಾಖೆಯ ಸೀಲ್ ಜೊತೆಗೆ , ಮತ ಚಲಾಯಿಸಿ, ಪ್ರಜಾಪ್ರಭುತ್ವ ಬೆಳೆಸಿ ಎನ್ನುವ ಸೀಲ್ ನ್ನು, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ , ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್, ನಿಗಮ ,ಮಂಡಳಿಗಳು ಸೇರಿದಂತೆ ಸುಮಾರು 400 ಸೀಲ್ ಹಾಕುವ ಮುದ್ರೆಗಳನ್ನು ಸ್ವೀಪ್ ಸಮಿತಿ ವತಯಿಂದ ಸರಬರಾಜು ಮಾಡಲಾಗಿದ್ದು, ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು , ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಿಗೆ ಆಗಮಿಸುವ ರೋಗಿಗಳಿಗೆ ನೀಡುವ ಆರೋಗ್ಯ ಚೀಟಿಯಲ್ಲಿಯೂ ಸಹ ಈ ಮುದ್ರೆಯನ್ನು ಕಡ್ಡಾಯವಾಗಿ ಬಳಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಸೂಚಿಸಿದ್ದಾರೆ.

ಅಲ್ಲದೇ ಜಿಲ್ಲೆಯಲ್ಲಿ ಮತದಾನ ಮಹತ್ವ ಕುರಿತಂತೆ ಅರಿವು ಮೂಡಿಸಿ , ಮತದಾನ ಪ್ರಮಾಣ ಹೆಚ್ಚಿಸುವ ಸಲುವಾಗಿ , ಮಲ್ಪೆ ಕಡಲ ತೀರದಲ್ಲಿ ಪ್ಯಾರಾಚೂಟ್ ನಲ್ಲಿ ಮತದಾನ ಜಾಗೃತಿ ಕುರಿತು ಸಂದೇಶ ಮೂಡಿಸಲಾಗುತ್ತಿದ್ದು, ಕಳೆದ ಬಾರಿ ಕಡಿಮೆ ಮತದಾನ ನಡೆದಿರುವ ಪ್ರದೇಶಗಳಲ್ಲಿ ಯಕ್ಷಗಾನದ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಕಾಪಶಿ ತಿಳಿಸಿದ್ದಾರೆ.

Comments are closed.