ಕರಾವಳಿ

ಹಸಿದ ಯಾತ್ರಿಕರಿಗಾಗಿ ಉಚಿತ ಆಹಾರ ಮತ್ತು ಬಟ್ಟೆ ಸಿಗಲಿದೆ ಮಂಗಳೂರಿನ ‘ಅಕ್ಷಯಧಾಮ’ದಲ್ಲಿ..

Pinterest LinkedIn Tumblr

ಮಂಗಳೂರು : ಬಡವರು ಮತ್ತು ದೂರದ ಊರುಗಳಿಂದ ಬರುವ ಹಸಿದ ಯಾತ್ರಿಕರಿಗಾಗಿ ಉಚಿತ ಆಹಾರ ಮತ್ತು ಬಟ್ಟೆ ಒದಗಿಸುವ ಸಲುವಾಗಿ ಫ್ರಿಜ್ ಮತ್ತು ಕಪಾಟು ವ್ಯವಸ್ಥೆಯನ್ನು ಒಳಗೊಂಡ ‘ಅಕ್ಷಯ ಧಾಮ’ ವನ್ನು ನಗರದ ಕೊಡಿಯಾಲ್‌ಬೈಲ್‌ನ ಬಿಷಪ್ಸ್ ಹೌಸ್ ಆವರಣದಲ್ಲಿ ತೆರೆಯಲಾಗಿದೆ.

ಮಂಗಳೂರು ಧರ್ಮ ಪ್ರಾಂತದ ಬಿಷಪ್ ರೆ.ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ರವಿವಾರ ಈ ‘ಅಕ್ಷಯಧಾಮ’ಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಬಿಷಪ್, ಸಾರ್ವಜನಿಕರಿಗಾಗಿ ಬಿಷಪ್ ಹೌಸ್ ಆವರಣದಲ್ಲಿ ಉಚಿತ ಕುಡಿಯುವ ನೀರಿನ ವ್ಯವಸ್ಥೆಯನ್ನು 2015ರಲ್ಲಿ ಆರಂಭಿಸಲಾಗಿದ್ದು, ಅದು ಯಶಸ್ವಿಯಾಗಿ ಮುಂದುವರಿದಿದೆ. 2017ರಿಂದ ಆಹಾರ ಮತ್ತು ಬಟ್ಟೆಗಳನ್ನು ಒದಗಿಸಲು ವ್ಯವಸ್ಥೆ ಮಾಡುವುದಾಗಿ ಡಿಸೆಂಬರ್‌ನಲ್ಲಿ ಘೋಷಿಸಲಾಗಿತ್ತು. ಈ ಸೌಲಭ್ಯವನ್ನು ಈಸ್ಟರ್ ಹಬ್ಬದ ದಿನವಾದ ರವಿವಾರ ಈಸ್ಟರ್ ಕೊಡುಗೆಯಾಗಿ ಆರಂಭಿಸಲಾಗಿದೆ. ಆದರೆ ಈಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮೇ 15ರ ಬಳಿಕ ಈ ವ್ಯವಸ್ಥೆಯನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗುವುದು ಎಂದರು.

ನೀರು, ಆಹಾರ, ಬಟ್ಟೆ ಮತ್ತು ಆಶ್ರಯ ಮಾನವನ ಮೂಲ ಸೌಲಭ್ಯಗಳಾಗಿವೆ. ಬಡವರಿಗೆ ಮನೆ ಕಟ್ಟಿಸಿ ಕೊಡುವ ಯೋಜನೆಯನ್ನು ಧರ್ಮ ಪ್ರಾಂತದ ವತಿಯಿಂದ ನಡೆಸಲಾಗಿದೆ. 2012ರಲ್ಲಿ 161 ಮನೆಗಳನ್ನು ಕಟ್ಟಿಸಲು ನೆರವು ಹಾಗೂ 2015ರಲ್ಲಿ 24 ಮನೆಗಳನ್ನು ಬಡವರಿಗೆ ಕಟ್ಟಿಸಿಕೊಡಲಾಗಿದೆ ಎಂದು ಬಿಷಪ್ ಡಾ.ಅಲೋಶಿಯಸ್ ಪೌಲ್ ಡಿಸೋಜ ಹೇಳಿದರು.

ಏಸುಕ್ರಿಸ್ತರಿಗೆ ಬಡವರು, ಕಷ್ಟದಲ್ಲಿರುವವರು, ರೋಗಿಗಳು ಹತ್ತಿರವಾಗಿದ್ದರು. ಅವರಿಗೆ ಸೇವೆ ಒದಗಿಸುತ್ತಿದ್ದರು. ಅದನ್ನು ಮುಂದುವರಿಸಿಕೊಂಡು ಹೋಗು ವಂತೆ ಏಸು ಕ್ರಿಸ್ತರು ಕರೆ ನೀಡಿದ್ದರು. ಅದನ್ನು ಕ್ರೈಸ್ತ ಧರ್ಮ ಸಭೆ ಮುಂದುವರಿಸಿಕೊಂಡು ಬರುತ್ತಿದೆ ಎಂದು ವಿವರಿಸಿದರು.

ಈ ಸಂದರ್ಭ ಧರ್ಮ ಪ್ರಾಂತದ ಪ್ರಧಾನ ಗುರು ಮೊ.ಡೆನ್ನಿಸ್ ಮೊರಾಸ್ ಪ್ರಭು, ಸಾರ್ವಜನಿಕ ಸಂಪರ್ಕ ಅಧಿಕಾರಿ ಮಾರ್ಸೆಲ್ ಮೊಂತೇರೊ, ಫಾದರ್ ಮುಲ್ಲರ್ ಸಂಸ್ಥೆಯ ನಿರ್ದೇಶಕ ಫಾ. ರಿಚಾರ್ಡ್ ಕುವೆಲ್ಲೊ, ಮೆಡಿಕಲ್ ಕಾಲೇಜು ಆಸ್ಪತ್ರೆಯ ಆಡಳಿತಾಧಿಕಾರಿ ಫಾ. ರವಿ ರುಡಾಲ್ಫ್ ಡೆಸಾ, ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಫಾ. ಅಜಿತ್ ಮಿನೇಜಸ್, ಸಹಾಯಕ ಆಡಳಿತಾಧಿಕಾರಿ ಫಾ. ಜೀವನ್ ಸಿಕ್ವೇರಾ, ಮಾಧ್ಯಮ ಸಲಹೆಗಾರ ಇ. ಫೆರ್ನಾಂಡಿಸ್ ಉಪಸ್ಥಿತರಿದ್ದರು.

ಫ್ರಿಜ್ ಮತ್ತು ಕಪಾಟು ವ್ಯವಸ್ಥೆ ಮಾಡುವಲ್ಲಿ ಸಹಕರಿಸಿದ ರೇಮಂಡ್ ಡಿಕುನ್ಹಾ ಅವರನ್ನು ಗೌರವಿಸಲಾಯಿತು. ಧರ್ಮ ಪ್ರಾಂತದ ಸಾರ್ವಜನಿಕ ಸಂಪರ್ಕ ಅಧಿಕಾರಿ ಫಾ.ವಿಲಿಯಂ ಮಿನೇಜಸ್ ಸ್ವಾಗತಿಸಿದರು. ಪಾಲನಾ ಪರಿಷತ್‌ನ ಕಾರ್ಯದರ್ಶಿ ಎಂ.ಪಿ. ನೊರೋನ್ಹಾ ವಂದಿಸಿದರು.

Comments are closed.