ಕರಾವಳಿ

ಕೊಲೆ ಸೇರಿದಂತೆ 25 ಪ್ರಕರಣಗಳ ಆರೋಪಿ, ಕುಖ್ಯಾತ ಜಾನುವಾರು ಕಳ್ಳ ಇಮ್ರಾನ್ ಬಂಧನ

Pinterest LinkedIn Tumblr

ಮಂಗಳೂರು, ಎಪ್ರಿಲ್. 1: ಕೊಲೆ, ಕೊಲೆಯತ್ನ ಸೇರಿದಂತೆ ಸುಮಾರು 25 ಪ್ರಕರಣಗಳ ಆರೋಪಿ, ಅಂತರ್ ಜಿಲ್ಲಾ ಕುಖ್ಯಾತ ಜಾನುವಾರು ಕಳ್ಳನನ್ನು ನಗರದ ಅರ್ಕುಳ‌ ಗೇಟ್ ಬಳಿ ಮಂಗಳೂರು ರೌಡಿ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಬಂಟ್ವಾಳ ತಾಲೂಕು ಪುದು ಗ್ರಾಮದ ಅಮ್ಮೆಮಾರ್ ಇಮ್ರಾನ್ (24) ಎಂದು ಗುರುತಿಸಲಾಗಿದ್ದು, ಈತನನ್ನು ಕಾರು ಸಹಿತ ಆರ್ಕುಳ ಗೇಟ್ ಬಳಿ ಮಂಗಳೂರು ದಕ್ಷಿಣ ಎ.ಸಿ.ಪಿ ರಾಮರಾವ್ ನೇತೃತ್ವದ ರೌಡಿ ನಿಗ್ರಹ ದಳದ ಸಿಬ್ಬಂದಿ ದಸ್ತಗಿರಿ ಮಾಡಿದ್ದಾರೆ.

ಆರೋಪಿ ಇಮ್ರಾನ್ ವಿರುದ್ಧ ಸುಮಾರು 25 ಪ್ರಕರಣಗಳು ನಗರದ ವಿವಿಧ ಠಾಣೆಗಳಲ್ಲಿ ಮತ್ತು ಕೊಡಗು ಜಿಲ್ಲೆಯಲ್ಲಿ ದಾಖಲಾಗಿರುತ್ತವೆ. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ಸರಹದ್ದಿನಲ್ಲಿ 3 ಜಾನುವಾರು ಕಳ್ಳತನ ಪ್ರಕರಣ, ಬಜ್ಪೆ ಠಾಣೆಯಲ್ಲಿ ಒಂದು ಜಾನುವಾರು ಕಳ್ಳತನ ಪ್ರಕರಣ, ಕೊಣಾಜೆ ಠಾಣೆ ಸರಹದ್ದಿನಲ್ಲಿ 3 ಜಾನುವಾರು ಕಳ್ಳತನ ಪ್ರಕರಣ ದಾಖಲಾಗಿದ್ದು, ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದರೋಡೆಗೆ ಸಂಚು, ಬಂಟ್ವಾಳ ಠಾಣೆ ಸರಹದ್ದಿನಲ್ಲಿ 8 ಪ್ರಕರಣದಲ್ಲಿ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

2017 ರಲ್ಲಿ ಕೊಡಗು ಜಿಲ್ಲೆಯಲ್ಲಿ ಈತನ ವಿರುದ್ಧ 7 ಜಾನುವಾರು ಕಳ್ಳತನ ಪ್ರಕರಣ ದಾಖಲಾಗಿದೆ. ಇದರಲ್ಲಿ ಶನಿವಾರಸಂತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 3 ಜಾನುವಾರು ಕಳ್ಳತನ ಪ್ರಕರಣ ದಾಖಲಾಗಿದೆ ಮತ್ತು 2 ಕೊಲೆಯತ್ನ ಪ್ರಕರಣ, ಒಂದು ಜಾನುವಾರು ಕಳ್ಳತನ ಪ್ರಕರಣ ದಾಖಲಾಗಿರುತ್ತದೆ.

ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 3 ಜಾನುವಾರು ಕಳ್ಳತನ ಪ್ರಕರಣ ಮತ್ತು ಸೋಮವಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದು ಜಾನುವಾರು ಕಳ್ಳತನ ಪ್ರಕರಣವು ದಾಖಲಾಗಿರುತ್ತದೆ. ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಈತನ ವಿರುದ್ಧ 2 ಪ್ರಕರಣ ದಾಖಲಾಗಿರುತ್ತದೆ. ಲಾರಿ ಚಾಲಕನ ಕೊಲೆ ಮತ್ತು ವಾಹನ ಕಳ್ಳತನ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಮೇಲಿನ ಪ್ರಕರಣಗಳಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ 3 ಜಾನುವಾರು ಕಳ್ಳತನ ಪ್ರಕರಣ ಮತ್ತು ಕೊಡಗು ಜಿಲ್ಲೆಯ 7 ಜಾನುವಾರು ಕಳ್ಳತನ ಪ್ರಕರಣಗಳಲ್ಲಿ ಆರೋಪಿಯು ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಂಡಿದ್ದನು ಎಂದು ಆರೋಪಿಸಲಾಗಿದೆ. ಸುಮಾರು ಒಂದು ತಿಂಗಳ ಹಿಂದೆ ಈತನ ಸಹಚರನಾದ ನಿಝಾಮ್ ಎಂಬಾತನನ್ನು ರೌಡಿ ನಿಗ್ರಹ ದಳದ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸ್ ಆಯುಕ್ತರಾದ ಟಿ.ಆರ್. ಸುರೇಶ್ ಅವರ ಆದೇಶದಂತೆ ಡಿಸಿಪಿ ಹನುಮಂತರಾಯ ಮತ್ತು ಉಮಾ ಪ್ರಶಾಂತರವರ ನಿರ್ದೇಶನದಂತೆ, ದಕ್ಷಿಣ ರೌಡಿ ನಿಗ್ರಹದಳದ ಎಸಿಪಿ ರಾಮರಾವ್, ರೌಡಿ ನಿಗ್ರಹ ದಳದ ಸಿಬ್ಬಂದಿ, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕರು ಹಾಗು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Comments are closed.