ಕರಾವಳಿ

ಮುಸ್ಲಿಂ ಸಮುದಾಯದ ವಿರುದ್ಧ ಕವಿತಾ ಸನಿಲ್ ಹೇಳಿಕೆ ವಿವಾದ : ಕಾಂಗ್ರೆಸ್ ಮುಸ್ಲಿಂ ಪಾಳಯದಲ್ಲಿ ಭಾರೀ ಆಕ್ರೋಷ

Pinterest LinkedIn Tumblr

ಮಂಗಳೂರು, ಮಾರ್ಚ್‌ 24: ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಹಾಗೂ ಎಐಸಿಸಿ ಸದಸ್ಯೆ ಕವಿತಾ ಸನಿಲ್ ಹೇಳಿಕೆಯೊಂದು ಯಡವಟ್ಟಿಗೆ ಕಾರಣವಾಗಿದ್ದು, ಇವರ ಹೇಳಿಕೆ ಮುಸ್ಲಿಂ ಸಮುದಾಯವನ್ನು ಕೆರಳಿಸಿದೆ.

ಮುಸ್ಲಿಮರಲ್ಲಿ ಹೆಚ್ಚಿನವರು ಎಸ್.ಡಿ.ಪಿ.ಐ ನವರು. ಅವರನ್ನು ನಂಬಲು ಸಾದ್ಯವಿಲ್ಲ ಎಂದು ಕವಿತಾ ಸನಿಲ್ ಹೇಳಿರುವ ಮಾತು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಾಂಗ್ರೆಸ್ ಪರ ಮತ ಚಲಾಯಿಸುವ ಮುಸ್ಲಿಂ ಸಮುದಾಯ ಇವರ ಈ ಹೇಳಿಕೆ ಬಗ್ಗೆ ಆಕ್ರೋಷ ವ್ಯಕ್ತಪಡಿಸಿದೆ. ಇದೇ ಸಂದರ್ಭದಲ್ಲಿ ಇವರ ಈ ಹೇಳಿಕೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿ ಪರಿಣಮಿಸಬಹುದೇ ಎಂಬ ಅನುಮಾನ ವ್ಯಕ್ತವಾಗಿದೆ.

ಕರಾವಳಿಯಲ್ಲಿ ಎಐಸಿಸಿ ಅದ್ಯಕ್ಷ ರಾಹುಲ್ ಗಾಂಧಿ ಪ್ರವಾಸ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಕರಾವಳಿ ಕೈ ಪಾಳಯದಲ್ಲಿ ಸಂಚಲನ ಮೂಡಿಸಿದ್ದು, ಈ ನಡುವೆ ಕರಾವಳಿಯ ಕಾಂಗ್ರೆಸ್ ಮುಖಂಡರ ಇಂತಹ ಹೇಳಿಕೆಗಳಿಂದ ಕಾಂಗ್ರೆಸ್‌ಗೆ ಹಿನ್ನಡೆಯಾಗಬಹುದೇ ಎಂದು ವಿಶ್ಲೇಶಿಸಲಾಗಿದೆ.

ಇತ್ತೀಚಿಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕವಿತಾ ಸನಿಲ್ ಈ ಹೇಳಿಕೆ ನೀಡಿದ್ದರು ಎಂದು ಹೇಳಲಾಗಿದೆ. ಸಚಿವ ರಮಾನಾಥ ರೈ, ಜಿಲ್ಲಾ ಪಂಚಾಯತ್ ಸದಸ್ಯ ಮಹಮ್ಮದ್ ಸೇರಿದಂತೆ ಇತರರು ಊಟ ಮಾಡುತ್ತಿದ್ದ ವೇಳೆ ಯಾವುದೋ ವಿಚಾರವಾಗಿ ಚರ್ಚೆ ನಡೆಯುತ್ತಿತ್ತು. ಈ ಸಂದರ್ಭ ಕವಿತಾ ಸನಿಲ್, ‘ನಿಮ್ಮವರೆಲ್ಲರನ್ನೂ ನಂಬಲು ಸಾಧ್ಯವಿಲ್ಲ. ನಿಮ್ಮವರಲ್ಲಿ ಹೆಚ್ಚಿನವರು ಎಸ್.ಡಿ.ಪಿ.ಐ ಗೆ ಸೇರಿದವರು ಎಂದು ಹೇಳಿದ್ದರು ಎನ್ನಲಾಗಿದೆ.

ಸಚಿವ ಬಿ.ರಮಾನಾಥ ರೈ ಮುಂದೆ ಕವಿತಾ ಸನಿಲ್ ಹೀಗೆ ಹೇಳುತ್ತಿರುವ ವಿಡಿಯೋ ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗಿದ್ದು ಭಾರೀ ಆಕ್ರೋಶ ವ್ಯಕ್ತವಾಗಿದೆ. ಕವಿತಾ ಸನಿಲ್ ಅವರ ಈ ಹೇಳಿಕೆ ಕಾಂಗ್ರೆಸ್ ಪರ ಇರುವ ಮುಸ್ಲಿಂ ಸಮುದಾಯದ ಒಂದು ವರ್ಗವನ್ನು ಕೆರಳಿಸಿದ್ದು, ಕರಾವಳಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇವರ ಈ ಹೇಳಿಕೆ ಮುಜುಗರ ತಂದಿದೆ ಎಂದು ಕಾಂಗ್ರೆಸ್‌ನ ಕೆಲವು ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Comments are closed.