
ಮಂಗಳೂರು,ಮಾರ್ಚ್.20: ‘ಜನಾಶೀರ್ವಾದ ಯಾತ್ರೆ’ಯ ಹಿನ್ನೆಲೆಯಲ್ಲಿ ಕರಾವಳಿ ಪ್ರವಾಸದಲ್ಲಿರುವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಂಗಳವಾರ ಉಡುಪಿ ಜಿಲ್ಲೆಯ ಕಾಪು, ಪಡುಬಿದ್ರೆ ಸಮೀಪದ ತೆಂಕ ಎರ್ಮಾಲ್, ದ.ಕ.ಜಿಲ್ಲೆಯ ಮುಲ್ಕಿ, ಸುರತ್ಕಲ್ ಮುಂತಾದ ಪ್ರದೇಶಗಳಿಗೆ ಭೇಟಿ ನೀಡಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.


ರಾಹುಲ್ ಗಾಂಧಿ ಅವರು ಮಧ್ಯಾಹ್ನ 12ರ ಸುಮಾರಿಗೆ ಪಡುಬಿದ್ರೆ ತಲುಪಿದ್ದು, ಪಡುಬಿದ್ರೆ ಸಮೀಪದ ತೆಂಕ ಎರ್ಮಾಲ್ನ ಸರಕಾರಿ ಸಂಯುಕ್ತ ಪ್ರಾಥಮಿಕ ಶಾಲೆಯ ಬಳಿ ನಿರ್ಮಿಸಲಾಗಿದ್ದ ಹೆಲಿಪ್ಯಾಡ್ನಲ್ಲಿ ವಿಶೇಷ ಹೆಲಿಕಾಪ್ಟರ್ನಲ್ಲಿ ಬಂದಿಳಿದರು. ಈ ವೇಳೆ ರಾಹುಲ್ ಗಾಂಧಿ ಅವರು ಶಾಲಾ ಆವರಣದ ಬಳಿ ನೆರೆದಿದ್ದವರತ್ತ ಕೈ ಬೀಸಿದರು. ಬಳಿಕ ಅವರು ಸರಕಾರಿ ಸಂಯುಕ್ತ ಶಾಲೆಗೆ ತೆರಳಿದರು. ಶಾಲಾ ಮಕ್ಕಳೊಂದಿಗೆ ಬೆರೆತು ಅವರ ಹೆಸರು, ತರಗತಿ ಬಗ್ಗೆ ವಿಚಾರಿಸಿದರು.

ಅಲ್ಲಿಂದ ಬಸ್ಸಿನಲ್ಲಿ ಪ್ರಯಾಣ ಮುಂದುವರಿದ ರಾಹುಲ್ ಗಾಂಧಿಯವರು ತೆಂಕ ಎರ್ಮಾಳಿನಲ್ಲಿ ರಾಜೀವ ಗಾಂಧಿ ಪಾಲಿಟಿಕಲ್ ಇನ್ಸ್ಟಿಟ್ಯೂಟ್ ಉದ್ಘಾಟಿಸಿದರು. ಬಳಿಕ ಕಾಂಗ್ರೆಸ್ ಸೇವಾದಳದ ಕಾರ್ಯಕರ್ತರನ್ನು ಸದಸ್ಯರನ್ನುದ್ದೇಶಿಸಿ ಮಾತನಾಡಿದರು.
ಇದೇ ರೀತಿ ಕಾಪು ಗೆ ಭೇಟಿ ನೀಡಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡರು. ಬಳಿಕ ಮುಲ್ಕಿ ಹಾಗೂ ಸುರತ್ಕಲ್‌ಗೆ ಭೇಟಿ ನೀಡಿದರು. ರಾಹುಲ್ ಗಾಂಧಿಯನ್ನು ಸ್ವಾಗತಿಸಲು ರಸ್ತೆಯ ಇಕ್ಕೆಲಗಳಲ್ಲಿ ಜನರು ಜಮಾಯಿಸಿದ್ದು, ಕಾಂಗ್ರೆಸ್ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ನೆರದಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಕೆಪಿಸಿಸಿ ಉಸ್ತುವಾರಿ ವೇಣುಗೋಪಾಲ, ಸಂಸದ ಮಲ್ಲಿಕಾರ್ಜುನ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಸಚಿವ ಡಿ.ಕೆ.ಶಿವಕುಮಾರ್, ಶಾಸಕರಾದ ವಿನಯ ಕುಮಾರ್ ಸೊರಕೆ, ಅಭಯ ಚಂದ್ರ ಜೈನ್, ಬಿ.ಎ.ಮೊಯ್ದಿನ್ ಬಾವ, ಶಕುಂತಳಾ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಹಾಗೂ ಮತ್ತಿತರ ಪ್ರಮುಖರು ಈ ವೇಳೆ ಉಪಸ್ಥಿತರಿದ್ದರು.
Comments are closed.