ಕರಾವಳಿ

ಸ್ಥಳೀಯರ ವಿರೋಧದ ನಡುವೆಯೇ ಉದ್ಘಾಟನೆಗೊಂಡ ಕದ್ರಿ ಸ್ಮಶಾನ

Pinterest LinkedIn Tumblr

ಮಂಗಳೂರು,ಮಾರ್ಚ್.19: ಕದ್ರಿ ಮಲ್ಲಿಕಟ್ಟೆ ಸಮೀಪ ಹೈಟೆಕ್ ಸ್ಪರ್ಷದೊಂದಿಗೆ ನವೀಕರಣಗೊಂಡ ಕದ್ರಿ ದಫನಭೂಮಿಯ ಉದ್ಘಾಟನೆಗೆ ಸ್ಥಳೀಯರು ವಿರೋಧ ಪಡಿಸಿದ ಘಟನೆ ಸೋಮವಾರ ನಡೆದಿದೆ.

ಸೋಮವಾರ ಬೆಳಿಗ್ಗೆ ಕದ್ರಿಯಲ್ಲಿ ನವೀಕರಣಗೊಳಿಸಲಾದ ಹಿಂದೂ ದಫನಭೂಮಿಯ ಉದ್ಘಾಟನೆ ನೆರೆವೇರಿಸಲು ಶಾಸಕ ಜೆ.ಆರ್.ಲೋಬೋ ಅವರು ಹಿಂದೂ ದಫನಭೂಮಿ ಬಳಿ ಬರುತ್ತಿದ್ದಂತೆ ಕೆಲ ಸ್ಥಳೀಯರು ಪ್ರತಿಭಟನೆ ನಡೆಸುವ ಮೂಲಕ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದಾರೆ.

ದಫನಭೂಮಿಯ ಸುತ್ತಮುತ್ತ ಇಂಟರ್ ಲಾಕ್ ಅಳವಡಿಸಿರುವುದಕ್ಕೆ ಸ್ಥಳೀಯ ಜೋಗಿ ಸಮಾಜದವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಂಟರ್ ಲಾಕ್ ಅನ್ನು ತೆರವುಗೊಳಿಸಬೇಕು ಮತ್ತು ಜೋಗಿ ಸಮಾಜದ ಇತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಪ್ರತಿಭಟನಕಾರರು ಈ ಸಂದರ್ಭದಲ್ಲಿ ಶಾಸಕರಲ್ಲಿ ಆಗ್ರಹಿಸಿದ್ದಾರೆ.

ಈ ವೇಳೆ ಸ್ಥಳಿಯರನ್ನು ಸಮಾಧಾನಪಡಿಸಿದ ಶಾಸಕರು ಬೇಡಿಕೆ ಈಡೇರಿಸುವ ಬಗ್ಗೆ ಭರವಸೆ ನೀಡಿದ್ದಾರೆ. ಬಳಿಕ ಮೇಯರ್ ಭಾಸ್ಕರ್ ಮೊಯ್ಲಿಯವರ ಅಧ್ಯಕ್ಷತೆಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯವರ ಉಪಸ್ಥಿಯಲ್ಲಿ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೋರವರು ದಫನಭೂಮಿಯನ್ನು ಉದ್ಘಾಟಿಸಿದರು.

ಸ್ಥಳೀಯ ಕಾರ್ಪೊರೇಟರ್ ಅಶೋಕ್ ಡಿ.ಕೆ, ಮನಪಾ ಸಚೇತಕ ಶಶಿಧರ್ ಹೆಗ್ಡೆ, ಮಾಜಿ ಮೇಯರ್ ಗಳಾದ ಹರಿನಾಥ್ ಜೋಗಿ, ಮಹಾಬಲ ಮಾರ್ಲ, ಉದ್ಯಮಿ ಎ.ಜೆ.ಶೆಟ್ಟಿ ಹಾಗೂ ಮತ್ತಿತರ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Comments are closed.