ಕರಾವಳಿ

ಮಾರ್ಚ್ 19ರಂದು ಆನ್‍ಲೈನ್‍ನಲ್ಲಿ ಪ್ರಥಮ ಪಿಯು ಫಲಿತಾಂಶ

Pinterest LinkedIn Tumblr

(ಸಾಂದರ್ಭಿಕ ಚಿತ್ರ)

ಮಂಗಳೂರು ಮಾರ್ಚ್ 17 : ಪ್ರಸಕ್ತ ವರ್ಷದ ಪ್ರಥಮ ಪಿಯು ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಏಕರೂಪತೆ,ಪಾರದರ್ಶಕತೆ ಮತ್ತು ಸ್ಪಷ್ಟತೆಯನ್ನು ತರುವ ದೃಷ್ಟಿಯಲ್ಲಿ ಕೇಂದ್ರಿಕೃತ ನಿಯಂತ್ರಣದೊಂದಿಗೆ ಸ್ವಯಂಚಾಲಿತವಾಗಿ ಫಲಿತಾಂಶವು ಮಾರ್ಚ್ 19ರಂದು ಆನ್‍ಲೈನ್‍ನಲ್ಲಿ ಪ್ರಕಟವಾಗಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ ಆರ್ ತಿಮ್ಮಯ್ಯ ತಿಳಿಸಿದ್ದಾರೆ.

ಅವರು  ನಗರದ ಬಂಟ್ಸ್ ಹಾಸ್ಟೇಲ್‍ನ ಅಮೃತೋತ್ಸವ ಕಟ್ಟಡದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈಗಾಗಲೇ ಪ್ರಥಮ ಪಿಯು ಫಲಿತಾಂಶಕ್ಕೆ ಸಂಬಂಧಪಟ್ಟ ಅಂಕಿ ಅಂಶಗಳು ಮತ್ತು ಅಗತ್ಯ ಅನುಬಂಧಗಳನ್ನು ತಯಾರಿಸುವ ಮತ್ತು ಮುದ್ರಿಸುವ ಸೌಲಭ್ಯವನ್ನು ಹೊಂದಿರುವ ವಿನೂತನ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು ಈ ತಂತ್ರಾಂಶವನ್ನು ಬಳಸಿಕೊಂಡು ಮಾರ್ಚ್ 19ರಂದು ಪಿಯುಸಿ ಫಲಿತಾಂಶವು ಪ್ರಕಟಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಈ ತಂತ್ರಾಂಶವನ್ನು ಅಳವಡಿಸಲಾಗಿದ್ದು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನು ಸಾಧಿಸಿದ ಜಿಲ್ಲೆಯಾಗಿ ದಕ್ಷಿಣ ಕನ್ನಡವು ತನ್ನ ಶೈಕ್ಷಣಿಕ ಹಿರಿಮೆಗೆ ಪಾತ್ರವಾಗಿದೆ.ಜೊತೆಗೆ ಜಿಲ್ಲೆಯ ಪದವಿ ಪೂರ್ವ ವಿದ್ಯಾರ್ಥಿಗಳು ರಾಜ್ಯದಲ್ಲಿ ಅತ್ಯುತ್ತಮ ಫಲಿತಾಂಶವನ್ನು ಪಡೆಯುವಲ್ಲಿ ಸಫಲವಾಗಿದೆ.

ಇಲಾಖೆಗೆ ಸಂಬಂಧಪಟ್ಟ ಎಲ್ಲಾ ಕಾರ್ಯಗಳಲ್ಲಿ ಸಂಪೂರ್ಣ ಸಹಕಾರವನ್ನು ನೀಡುವುದರ ಜೊತೆಗೆ ಎಲ್ಲಾ ವಿಷಯಗಳ ಉಪನ್ಯಾಸಕರ ಸಂಘಗಳ ಸ್ಥಾಪನೆ ಮತ್ತು ಪುನ:ಚ್ಛೇತನಗೊಳಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಾಜ್ಯದಲ್ಲಿಯೇ ಮೊದಲ ಬಾರಿಗೆ ಇಲಾಖಾ ಮಾಹಿತಿಗಳನ್ನು, ಆದೇಶಗಳನ್ನು ಕ್ಲಪ್ತ ಸಮಯದಲ್ಲಿ ಜಿಲ್ಲೆಯ ಎಲ್ಲಾ ಪ್ರಾಚಾರ್ಯರಿಗೆ ತಲುಪಿಸುವ ದೃಷ್ಟಿಯಿಂದ ವೆಬ್‍ಸೈಟ್‍ನ್ನು ಅಳವಡಿಸಿಕೊಂಡಿರುವುದರಿಂದ ಇಲಾಖಾ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆಯಲು ಸಹಕಾರಿಯಾಗಿದೆ. ಅಲ್ಲದೇ ಮುಂದಿನ ಪಿಯುಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡವೇ ಪ್ರಥಮ ಸ್ಥಾನಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು  http://result.dkpucpa.com  ವೆಬ್‍ಸೈಟ್‍ನಲ್ಲಿ ಕಾಲೇಜಿನ ಹೆಸರನ್ನು ಆಯ್ಕೆ ಮಾಡಿ ತಮ್ಮ ಪರೀಕ್ಷಾ ಪ್ರವೇಶ ಪತ್ರದಲ್ಲಿರುವ ದಾಖಲಾತಿ ಸಂಖ್ಯೆ(ರೋಲ್ ನಂಬರ್) ಯನ್ನು ಹಾಗೂ ಹುಟ್ಟಿದ ದಿನಾಂಕವನ್ನು ನಮೂದಿಸಿ ಶೋ ರಿಸಲ್ಟ್ ಮೇಲೆ ಕ್ಲಿಕ್ ಮಾಡಿದರೆ ಫಲಿತಾಂಶ ಲಭ್ಯವಾಗುತ್ತದೆ.

ಹೆಚ್ಚಿನ ಕಾಲೇಜಿನವರು ತಂತ್ರಾಂಶವನ್ನು ಅಳವಡಿಸುವ ಮೊದಲೇ ವಿದ್ಯಾರ್ಥಿಗಳಿಗೆ ಕಾಲೇಜು ಹಂತದಲ್ಲೇ ನೋಂದಣಿ ಸಂಖ್ಯೆಯನ್ನು ನೀಡಿರುವುದರಿಂದ ವಿಶಿಷ್ಟ ನೋಂದಣಿ ಸಂಖ್ಯೆ ನೀಡಲು ಸಾಧ್ಯವಾಗದೇ ಇರುವುದರಿಂದ ಈ ಬಾರಿಗೆ ಈ ಮೇಲಿನ ರೀತಿಯಲ್ಲಿ ಫಲಿತಾಂಶವನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಈ ತಂತ್ರಾಂಶದಿಂದಾಗಿ ಫಲಿತಾಂಶದಲ್ಲಿ ಪಾರದರ್ಶಕತೆ, ಸ್ಪಷ್ಟತೆ ಮತ್ತು ಏಕರೂಪತೆಯನ್ನು ತರುವುದು. ವಿದ್ಯಾರ್ಥಿಗಳ ಮಾಹಿತಿಯನ್ನು ಸಮಗ್ರವಾಗಿ ಕ್ರೋಢೀಕರಿಸಿ ಗೌಪ್ಯತೆಯನ್ನು ಕಾಪಾಡುವುದು.ಉಪನಿರ್ದೇಶಕರ ಮೇಲ್ವಿಚಾರಣೆಗೆ ಒಳಪಟ್ಟು ಕೇಂದ್ರೀಕೃತವಾದ ಸಂಪೂರ್ಣ ನಿಯಂತ್ರಣ ವ್ಯವಸ್ಥೆ. ವಿದ್ಯಾರ್ಥಿಗಳ ಅಂಕಗಳನ್ನು ಸುಲಭ ಹಾಗೂ ಶೀಘ್ರದಲ್ಲಿ ಅಳವಡಿಸುವುದು.

ನೋಡಲ್ ಕೇಂದ್ರ ಮತ್ತು ಉಪನಿರ್ದೇಶಕರಿಂದ ಸುಲಭ ಹಾಗೂ ಶೀಘ್ರವಾಗಿ ಅನುಮೋದನೆಗೆ ಅವಕಾಶ ನೀಡುವುದು. ವಿಭಾಗವಾರು, ಸಂಯೋಜನೆವಾರು, ಭಾಷಾವಾರು, ಲಿಂಗಾವಾರು, ವರ್ಗವಾರು, ಅಂಕಿಅಂಶಗಳನ್ನು ಪಡೆಯಲು ಹಾಗೂ ಮುದ್ರಿಸಲು ಅವಕಾಶ. ಎ3 ಸೈಜ್‍ನಲ್ಲಿ ಮುದ್ರಣ ಮಾಡಲು ಅವಕಾಶವಿರದ ಕಾಲೇಜಿನವರು ಉಪನಿರ್ದೇಶಕರ ಕಛೇರಿಯಲ್ಲಿ ಅನುಮೋದಿಸಿದ ಫಲಿತಾಂಶ ಪಟ್ಟಿಯನ್ನು ಪಡೆಯಲು ಅವಕಾಶವಿದೆ.

ಸ್ವಯಂಚಾಲಿತ ಪ್ರವೇಶ ಪತ್ರ, ಅಂಕಪಟ್ಟಿ ಮತ್ತು ಫಲಿತಾಂಶ ಅನುಮೋದನೆಗೆ ಬೇಕಾದ ಎಲ್ಲಾ ಅನುಬಂಧಗಳು ಫಲಿತಾಂಶ ಪಟ್ಟಿ ಮುದ್ರಿಸಲು ಹಾಗೂ ತಮ್ಮ ಫಲಿತಾಂಶವನ್ನು ಆನ್‍ಲೈನ್‍ನಲ್ಲಿ ತಿಳಿದುಕೊಂಡು ತಾತ್ಕಾಲಿಕ ಅಂಕಪಟ್ಟಿಯನ್ನು ಪಡೆಯಲು ಅವಕಾಶವಿದೆ.

Comments are closed.