ಕರಾವಳಿ

ಡ್ರಗ್ಸ್ ಜಾಲದ ಮೂಲಕ್ಕೆ ಕತ್ತರಿ ಅಗತ್ಯ : 20 ನಿಮಿಷ ಬದಲಾವಣೆಯ ಬದುಕಿಗಾಗಿ – ಬಿಡುಗಡೆಗೊಳಿಸಿ ಸುರೇಶ್ ಚೆಂಗಪ್ಪ

Pinterest LinkedIn Tumblr

ಮಂಗಳೂರು, ಮಾರ್ಚ್.17 : ಮಾದಕ ವ್ಯಸನದಿಂದ ನಮ್ಮ ಬದುಕು ಹಾಳಾಗುತ್ತದೆ ಮಾತ್ರವಲ್ಲದೆ ನಮ್ಮ ಕುಟುಂಬ ಕೂಡ ಸಂಕಷ್ಟಕ್ಕೀಡಾಗುತ್ತದೆ. ಇದರ ಜತೆಗೆ ಸಮಾಜದ ಸ್ವಾಸ್ಥ್ಯವೂ ಹಾಳಾಗುತ್ತದೆ. ಈ ನಿಟ್ಟಿನಲ್ಲಿ ಡ್ರಗ್ಸ್ ಮಾಫಿಯಾ ಎಲ್ಲಿಂದ ಶುರುವಾಗುತ್ತದೆ ಎನ್ನುವುದನ್ನು ಮೊದಲು ಪತ್ತೆ ಹಚ್ಚಿ ಅದನ್ನು ಮೂಲದಿಂದಲೇ ನಿರ್ಮೂಲನೆ ಮಾಡುವ ಅಗತ್ಯವಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ಎಂ.ಎಂ. ಸುರೇಶ್ ಚೆಂಗಪ್ಪ ಹೇಳಿದರು.

ರೋಟರಿ ಕ್ಲಬ್ ಮಂಗಳೂರು ದಕ್ಷಿಣ, ವಿಕಾಸ ಕಾಲೇಜು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ನಗರದ ಸೈಂಟ್ ಅಲೋಶಿಯಸ್ ಕಾಲೇಜಿನ ಎರಿಕ್ ಮಥಾಯಿಸ್ ಸಭಾಂಗಣದಲ್ಲಿ ಶನಿವಾರ ನಡೆದ `20 ನಿಮಿಷ ಬದಲಾವಣೆಯ ಬದುಕಿಗಾಗಿ…’ ಕಿರು ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಯೌವನ ನಮಗೆ ಮತ್ತೆ ಬರುವುದಿಲ್ಲ. ಆದರೆ ಜವಾಬ್ದಾರಿ ಎನ್ನುವುದು ನಿರಂತರ. ಜವಾಬ್ದಾರಿಯನ್ನು ಸಮರ್ಥವಾಗಿ ಹೊರಲು ನಾವು ಈಗಾಗಲೇ ಸಿದ್ಧರಾಗಬೇಕು. ಈ ಹಿನ್ನೆಲೆಯಲ್ಲಿ ಯಾವುದೇ ವ್ಯಸನಗಳಿಗೆ ನಾವು ದಾಸರಾಗಬಾರದು ಎಂದು ಸುರೇಶ್ ಚೆಂಗಪ್ಪ ನುಡಿದರು.

ವ್ಯಸನಮುಕ್ತಿ ಆರೋಗ್ಯಕ್ಕೆ ದಾರಿ: ಮಂಗಳೂರು ಫಾದರ್ ಮುಲ್ಲರ್ ಚಾರಿಟೆಬಲ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ರೆ. ಫಾ.ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಮಾತನಾಡಿ, ಆರೋಗ್ಯಕರ ಮತ್ತು ಸಂತೋಷದಾಯಕ ಬದುಕಿಗಾಗಿ ನಾವೆಲ್ಲರೂ ವ್ಯಸನಗಳಿಂದ ಮುಕ್ತರಾಗಿರಬೇಕು. ಉತ್ತಮ ನಡತೆ ಮತ್ತು ನಿಯಮಿತವಾದ ವ್ಯಾಯಾಮ ಹಾಗೂ ಜಂಕ್ ಫುಡ್‌ನಿಂದ ದೂರ ಉಳಿಯುವ ಮೂಲಕ ಆರೋಗ್ಯಕರವಾಗಿರಬಹುದು ಎಂದರು.

ಪತ್ರಕರ್ತ ಯು.ಕೆ. ಕುಮಾರ್‌ನಾಥ್ ಮಾತನಾಡಿ, ಕಳೆದ 10 ವರ್ಷಗಳಲ್ಲಿ 25 ಸಾವಿರ ಮಂದಿ ಡ್ರಗ್ಸ್ ಗೆ ಸಂಬಂಸಿದಂತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಕಳವಳಕಾರಿ ಅಂಶವನ್ನು ಬಹಿರಂಗಪಡಿಸಿದರು.

ಡ್ರಗ್ಸ್ ಎಂದಾಕ್ಷಣ ನಮಗೆ ಪಂಜಾಬ್, ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರ ನೆನಪಿಗೆ ಬರುತ್ತದೆ. ಆದರೆ ಡ್ರಗ್ಸ್ ಮಾಫಿಯಾದಲ್ಲಿ ರಾಜ್ಯದಲ್ಲೇ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ದಾಖಲಾದ 340 ಪ್ರಕರಣಗಳಲ್ಲಿ 280 ಪ್ರಕರಣಗಳು ಮಂಗಳೂರಿನಲ್ಲೇ ದಾಖಲಾಗಿದೆ. ಡ್ರಗ್ಸ್ ಮಾಫಿಯಾ ತಡೆಗಟ್ಟುವ ನಿಟ್ಟಿನಲ್ಲಿ ’20 ನಿಮಿಷ ಬದಲಾವಣೆಯ ಬದುಕಿಗಾಗಿ…’ ಕಿರು ಪುಸ್ತಕವನ್ನು ಪ್ರತಿ ಕಾಲೇಜಿಗೆ ತಲುಪಿಸುವ ಕೆಲಸವಾಗಬೇಕು. ಈ ಅಭಿಯಾನಕ್ಕೆ ಎರಡು ಮೂರು ವರ್ಷಗಳು ತಗಲಿದರೂ ಚಿಂತೆಯಿಲ್ಲ ಎಂದು ಅವರು ನುಡಿದರು.

ಡ್ರಗ್ಸ್ ಸೇವನೆ ಅಪರಾಧ: ಎಸಿಪಿ ಉದಯ ನಾಯಕ್ ಮಾತನಾಡಿ, ಡ್ರಗ್ಸ್ ಸಾಗಾಟದಂತೆ ಡ್ರಗ್ಸ್ ಸೇವನೆ ಕೂಡ ಅಪರಾಧ. ಇದರಲ್ಲಿ ಮೂರು ತಿಂಗಳು ಶಿಕ್ಷೆಯಾಗುತ್ತದೆ. ಮಾದಕ ವಸ್ತು ಸೇವೆಯಲ್ಲಿ ನೀವು ಭಾಗಿಗಳಾಗಬೇಡಿ, ಇತರರಲ್ಲಿಯೂ ಅರಿವು ಮೂಡಿಸಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ನಾವು ಮಾತ್ರ ಸರಿಯಾಗಿ ವಾಹನ ಚಲಾವಣೆ ಮಾಡಿದರೆ ಸಾಲದು ಎದುರುಗಡೆಯಿಂದ ವಾಹನ ಚಲಾಯಿಸಿಕೊಂಡು ಬರುವವನ ಮನಸ್ಥಿತಿಯನ್ನು ಕೂಡ ಅರಿತುಕೊಳ್ಳಬೇಕು. ಅಪಘಾತ ನಡೆದಾಗಲೆಲ್ಲ ನಾವು ವಿಡಿಯೋ ಮಾಡುತ್ತೇವೆಯೇ ಹೊರತು ಗಾಯಾಳು ಗಳನ್ನು ಆಸ್ಪತ್ರೆಗೆ ದಾಖಲಿಸುವ ಕುರಿತು ಯೋಚಿಸುವುದಿಲ್ಲ. ಫೋಕ್ಸೋ ಕಾಯಿದೆಯು ಮಕ್ಕಳ ಹಕ್ಕು ಮತ್ತು ಗುಡ್- ಬ್ಯಾಡ್ ಟಚ್‌ಗೆ ಸಂಬಂಸಿದ್ದು. ಹಾಗೆ ಸಾಮಾಜಿಕ ಜಾಲತಾಣಗಳನ್ನು ಉತ್ತಮ ಕೆಲಸಕ್ಕೆ ಮಾತ್ರ ಉಪಯೋಗಿಸಬೇಕು ಎಂದು ಅವರು ಹೇಳಿದರು.

ವಿದ್ಯಾರ್ಥಿಗಳಲ್ಲಿ ಮಾದಕ ವಸ್ತು ಸೇವನೆ ಪರಿಣಾಮಗಳು, ಪೋಕ್ಸೋ ಕಾಯಿದೆ ಮತ್ತು ಮಕ್ಕಳ ಹಕ್ಕುಗಳು, ಸಂಚಾರಿ ನಿಯಮ ಪಾಲನೆ ಅಗತ್ಯತೆ ಹಾಗೂ ಸಾಮಾಜಿಕ ಜಾಲತಾಣದಿಂದ ವಿದ್ಯಾರ್ಥಿಗಳ ಮೇಲಾಗುವ ಪರಿಣಾಮಗಳ ಕುರಿತು ಶಾಲಾ- ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೂ ಈ ಸಂದರ್ಭ ಚಾಲನೆ ನೀಡಲಾಯಿತು.

ಸೈಂಟ್ ಅಲೋಶಿಯಸ್ ಕಾಲೇಜಿನ ಪ್ರಿನ್ಸಿಪಾಲ್ ರೆ. ಫಾ. ಡಾ. ಪ್ರವೀಣ್ ಮಾರ್ಟಿಸ್ ಎಸ್. ಜೆ., ಮಂಗಳೂರಿನ ವಿಕಾಸ್ ಎಜು ಸೋಲ್ಯುಶನ್ಸ್‌ನ ಡಾ. ಅನಂತಪ್ರಭು ಜಿ. ಮಾತನಾಡಿದರು. ರೋಟರಿ ಕ್ಲಬ್ ಮಂಗಳೂರು ದಕ್ಷಿಣ ಮಾಜಿ ಅಧ್ಯಕ್ಷ ಕೆ.ಎಸ್. ಚಾಕೋ, ನಿಯೋಜಿತ ಅಧ್ಯಕ್ಷ ಸೂರ್ಯಕಾಂತ್ ನಾಯಕ್ ಉಪಸ್ಥಿತರಿದ್ದರು.

ರೋಟರಿ ಕ್ಲಬ್ ಮಂಗಳೂರು ದಕ್ಷಿಣ ಅಧ್ಯಕ್ಷ ಕೆ. ಯುವರಾಜ ಆಚಾರ್ಯ ಸ್ವಾಗತಿಸಿದರು. ಪತ್ರಕರ್ತ ಬಿ. ರವೀಂದ್ರ ಶೆಟ್ಟಿ ಪ್ರಸ್ತಾವಿಕ ಮಾತನಾಡಿದರು. ಕೆನರಾ ಪಿಯು ಕಾಲೇಜಿನ ಡೀನ್ ಗೋಪಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Comments are closed.