ಕರಾವಳಿ

ಮಂಗಳೂರು ಮಹಾನಗರ ಪಾಲಿಕೆ: 712 ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಣೆ

Pinterest LinkedIn Tumblr

ಮಂಗಳೂರು ಮಾರ್ಚ್ 16 : ಮಂಗಳೂರು ಮಹಾನಗರ ಪಾಲಿಕೆಯ ನಗರ ಬಡತನ ನಿರ್ಮೂಲನೆ ಕೋಶದ ವತಿಯಿಂದ ನಗರ ಪಾಲಿಕೆ ವ್ಯಾಪ್ತಿಯ ಜನರಿಗೆ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮವು ಪುರಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ದಕ್ಷಿಣ ಶಾಸಕ ಜೆ ಆರ್ ಲೋಬೋ ಮಾತನಾಡಿ ಮಂಗಳೂರು ಮಹಾನಗರ ಪಾಲಿಕೆಯು ತನ್ನ ವ್ಯಾಪ್ತಿಯ ಎಲ್ಲಾ ಜನರಿಗೆ ಮೂಲಭೂತ ಸೌಳಭ್ಯಗಳನ್ನು ತಲುಪಿಸುವಲ್ಲಿ ಯಶಸ್ವಿಯಾಗಿದೆ. ಸರ್ಕಾರ ಮತ್ತು ಜನಪ್ರತಿನಿಧಿಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಅವರ ಸಹಾಕಾರದಿಂದ ಬೆಳವಣಿಗೆಯು ಸಾಧ್ಯವಿದ್ದು ವಿವಿಧ ಸವಲತ್ತುಗಳನ್ನು ಪಡೆಯುವ ಫಲಾನುಭವಿಗಳು ಅದರ ಸದುಪಯೋಗವನ್ನು ಪಡೆದುಕೊಂಡು ಆರ್ಥಿಕ ಅಭಿವೃಧ್ದಿಗೆ ಅವುಗಳನ್ನು ಬಳಸಿಕೊಳ್ಳಿ ಎಂದು ಹೇಳಿದರು.

ದೈಹಿಕ ನ್ಯೂನ್ಯತೆ ಎನ್ನುವುದು ಕೇವಲ ಒಂದು ವರ್ಗಕ್ಕೆ ಸೀಮಿತವಾಗಿರದೇ ಅದು ಎಲ್ಲ ವರ್ಗದವರ ನೋವು ಎಂದು ಭಾವಿಸಿ ಸರ್ಕಾರವು ಅವರಿಗೆ ಸಹಾಯವನ್ನು ಮಾಡುತ್ತಿದೆ ಜೊತೆಗೆ ಅವರಿಗೆ ವಿಶೇಷ ತರಬೇತಿ ಸೌಲಭ್ಯಗಳನ್ನು ನೀಡುವುದರ ಮೂಲಕ ಸಾಧಕರನ್ನಾಗಿ ಮಾಡಲು ಶ್ರಮಿಸುತ್ತಿದೆ ಎಂದರು.

ವಿಧಾನ ಪರಿಷತ್‍ನ ಮುಖ್ಯ ಸಚೇತಕ ಐವನ್ ಡಿಸೋಜಾ ಮಾತನಾಡಿ, ದೈಹಿಕವಾಗಿ ಸಶಕ್ತರಲ್ಲದವರು ಇಂದು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ದೈಹಿಕ ನ್ಯೂನ್ಯತೆ ಇರುವವರನ್ನು ಗುರುತಿಸುವ ಕೆಲಸ ಮೊದಲು ಆಗಬೇಕು. ಆ ಮೂಲಕ ಅವರನ್ನು ಸಶಕ್ತರನ್ನಾಗಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕು ಎಂದು ತಿಳಿಸಿದರು.

ಸಮಾರಂಭದಲ್ಲಿ ಒಟ್ಟು 712 ಮಂದಿಗೆ ವಿವಿಧ ಸೌಲಭ್ಯಗಳನ್ನು ನೀಡಲಾಯಿತು. ಮಂಗಳೂರು ಪಾಲಿಕೆ ವ್ಯಾಪ್ತಿಯ 24.10% ಮೀಸಲು ನಿಧಿ ಅನುದಾನದ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬದವರಿಗೆ ಒಟ್ಟು 167.64 ಲಕ್ಷ ರೂಗಳ ಪಕ್ಕಾ ಮನೆ ನಿರ್ಮಾಣ, ಶೌಚಾಲಯ ನಿರ್ಮಾಣ, ಸ್ವಯಂ ಉದ್ಯೋಗ ಮತ್ತು ಭಾರಿ ಶಸ್ತ್ರ ಚಿಕಿತ್ಸೆಗಾಗಿ ಸಹಾಯಧನ ನೀಡಲಾಯಿತು.

7.25% ಮೀಸಲು ನಿಧಿ ಅನುದಾನದ ಅಡಿಯಲ್ಲಿ ಇತರೆ ಬಡ ಜಾತಿಯ ಕುಟುಂಬದವರಿಗೆ ಒಟ್ಟು 70.87 ಲಕ್ಷ ರೂ.ಗಳ ಮೂಲಕ ಪಕ್ಕಾ ಮನೆ ನಿರ್ಮಾಣ, ಶೌಚಾಲಯ ನಿರ್ಮಾಣ, ಕುಡಿಯುವ ನೀರಿನ ಸಂಪರ್ಕ, ಭಾರಿ ಶಸ್ತ್ರ ಚಿಕಿತ್ಸೆಗಾಗಿ ವ್ಯವಸ್ಥೆಯನ್ನು ಕಲ್ಪಿಸಲಾಯಿತು.

3% ಮೀಸಲು ನಿಧಿ ಅನುದಾನದ ಅಡಿಯಲ್ಲಿ ಅಂಗವಿಕಲರ ಕಲ್ಯಾಣಕ್ಕಾಗಿ ಪೋಷಣಾ ಭತ್ಯೆ (ತಿಂಗಳಿಗೆ 500ರೂ ರಂತೆ 634 ಫಲಾನುಭವಿಗಳು), ದ್ವಿಚಕ್ರ ವಾಹನ ಮತ್ತು ಸದ್ರಿ ವಾಹನಕ್ಕೆ 2 ಹೆಚ್ಚುವರಿ ಚಕ್ರ ಸೇರಿಸಿ ಓದಗಿಸುವ ಬಗ್ಗೆ, ಕ್ಯಾಲಿಫರ್ ವಿಥ್ ಶೂ, ವೀಲ್ ಚೇಯರ್ ವಿಥ್ ಕ್ರೊವೆಡ್, ಶ್ರವಣ ಸಾಧನ, ವೈದ್ಯಕೀಯ ವೆಚ್ಚ ಶೌಚಾಲಯ ನಳ್ಳಿ ನೀರು, ಕ್ರೀಡಾ ಪ್ರೋತ್ಸಾಹ ಧನ, ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಧನ, ಅಂಗವಿಕಲರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ಸಹಾಯಧನ, ಸ್ವಯಂ ಉದ್ಯೋಗ ಸಹಾಯಧನಗಳಿಗೆ 61.01 ಲಕ್ಷ ರೂ.ಗಳನ್ನು ಬಳಸಲಾಗಿದ್ದು ಸರ್ಕಾರವು ಒಟ್ಟು 312.13 ಲಕ್ಷವನ್ನು ಈ ಕಾರ್ಯಕ್ರಮಕ್ಕಾಗಿ ವ್ಯಯಿಸಿದೆ ಎಂದು ಜಂಟೀ ಆಯುಕ್ತ ಗೋಕುಲ್‍ದಾಸ್ ನಾಯ್ಕ್ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಭಾಸ್ಕರ್ ಕೆ ವಹಿಸಿದ್ದರು. ಅತಿಥಿಗಳಾಗಿ ಪಾಲಿಕೆ ಆಯುಕ್ತ ಮಹಮ್ಮದ್ ನಝೀರ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ನಾಗವೇಣಿ, ಲೆಕ್ಕ ಪರಿಶೋಧನಾ ಸ್ಥಾಯಿ ಸಮಿತಿ ಅಧ್ಯಕ್ಷೆ ಸಬಿತಾ ಮಿಸ್ಕಿತ್, ಮಾಜಿ ಉಪಮೇಯರ್ ರಜನೀಶ್ ಕಾಪಿಕಾಡ್, ಮಾಜಿ ಮೇಯರ್ ಜೆಸಿಂತಾ, ಸದಸ್ಯರಾದ ಅಪ್ಪಿ, ಆಶಾ ಡಿಸಿಲ್ವ, ಲತೀಫ್, ಶೈಲಜಾ, ಪ್ರವೀಣ್‍ಚಂದ್ರ ಆಳ್ವ, ಮತ್ತಿತರರು ಉಪಸ್ಥಿತರಿದ್ದರು.

Comments are closed.