ಕರಾವಳಿ

ದ.ಕ.ಜಿಲ್ಲೆಯಾದ್ಯಂತ ಭಾರೀ ಗಾಳಿ, ಮಳೆ : ಸಿಡಿಲು ಬಡಿದು 5 ಮಂದಿಗೆ ಗಾಯ : ಮುನ್ನೆಚ್ಚರಿಕೆ ವಹಿಸಲು ದ.ಕ.ಜಿಲ್ಲಾಡಳಿತ ಸೂಚನೆ

Pinterest LinkedIn Tumblr

ಮಂಗಳೂರು : ಮಂಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಬುಧವಾರ ಸಂಜೆ ಅನಿರೀಕ್ಷಿತವಾಗಿ ಸುರಿದ ಮಳೆಯಿಂದಾಗಿ ಪಾದಚಾರಿಗಳು, ದ್ವಿಚಕ್ರ ವಾಹನ ಚಾಲಕರು ಪರದಾಡುವಂತಾಯಿತು.

ನಿನ್ನೆ ಮಧ್ಯಾಹ್ನದಿಂದಲೇ ಮೋಡಕವಿದ ವಾತಾವರಣವಿದ್ದು, ಸಂಜೆಯಾಗುತ್ತಲ್ಲೇ ನಗರದಲ್ಲಿ ಹನಿಹನಿ ಮಾಳೆಯಾದರೆ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಮಧ್ಯಾಹ್ನದಿಂದಲೇ ಸಿಡಿಲು, ಗಾಳಿ ಸಹಿತಾ ಭಾರೀ ಮಳೆಯಾಗಿದೆ.

ಉಳ್ಳಾಲ ಸಹಿತ ಮುಡಿಪು, ದೇರಳಕಟ್ಟೆ, ಕೊಣಾಜೆ ಪ್ರದೇಶದಲ್ಲಿ ಬುಧವಾರ ಅಪರಾಹ್ನ ಮಳೆ ಸುರಿದಿದ್ದು, ಮುಡಿಪಿನಲ್ಲಿ ಅರ್ಧ ಗಂಟೆಗಳ ಕಾಲ ಜಡಿ ಮಳೆ ಸುರಿಯಿತು. ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಬಿಸಿಲು ಹೆಚ್ಚಾಗಿತ್ತು. ಮಧ್ಯಾಹ್ನವಾಗುತ್ತಿದ್ದಂತೆ ಮೋಡ ಕವಿದಿದ್ದು, ಮುಡಿಪು ಪ್ರದೇಶದಲ್ಲಿ ಮಧ್ಯಾಹ್ನ ಹಾಗೂ ತೊಕ್ಕೊಟ್ಟು, ಉಳ್ಳಾಲ ಭಾಗದಲ್ಲಿ ಸಂಜೆ ಮಳೆ ಸುರಿಯಿತು.

ಮೂಡಬಿದಿರೆ, ಮೂಲ್ಕಿ, ಬಜಪೆ, ಹಳೆಯಂಗಡಿ, ಕಿನ್ನಿಗೋಳಿ ಮತ್ತು ಉಳ್ಳಾಲ ಸುತ್ತಮುತ್ತ ಬುಧವಾರ ಅಪರಾಹ್ನ ಉತ್ತಮ ಮಳೆ ಸುರಿದಿದೆ. ಮೂಡಬಿದಿರೆ ಪ್ರದೇಶದಲ್ಲಿ ಒಂದು ಗಂಟೆ ವಿಪರೀತ ಮಳೆಯಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಗಾಳಿ, ಗುಡುಗು ಸಹಿತ ಭಾರೀ ಮಳೆ ಉಂಟಾಗಿದೆ. ಇದರಿಂದಾಗಿ ಕೆಲವೆಡೆ ವಿದ್ಯುತ್‌ ಕಡಿತಗೊಂಡಿದೆ.

ಉಪ್ಪಿನಂಗಡಿಯಲ್ಲಿ ಸಿಡಿಲು ಬಡಿದು 5 ಮಂದಿಗೆ ಗಾಯ :

ಉಪ್ಪಿನಂಗಡಿ, ಸಿಡಿಲು ಬಡಿದು 5 ಮಂದಿ ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದಲ್ಲಿ ಬುಧವಾರ ಸಂಭವಿಸಿದೆ.

ಇಲ್ಲಿನ ದರ್ಕಾಸು ಮನೆಯ ಅಂಬೋಡಿ ಅವರ ಪುತ್ರ ಆನಂದ (30), ಪತ್ನಿ ಮೀನಾಕ್ಷಿ (26), ಪುತ್ರ ಪೂರ್ಣೇಶ್ (6) ಹಾಗೂ ಪಕ್ಕದ ಮನೆಯ ಓಡಿಯಪ್ಪ ಅವರ ಪುತ್ರ ಅಭಿಲಾಷ್ ಹಾಗೂ ಇನ್ನೊಂದು ಮನೆಯ ಈಸುಬು ಅವರ ಪುತ್ರಿ ಉಮೈಮ (22) ಸಿಡಿಲ ಆಘಾತಕ್ಕೆ ಒಳಗಾದವರು. ರಾತ್ರಿ ಇವರೆಲ್ಲರೂ ತಮ್ಮ ತಮ್ಮ ಮನೆಯಲ್ಲಿದ್ದ ಸಂದರ್ಭ ಮನೆ ಪಕ್ಕದ ಮರಕ್ಕೆ ಸಿಡಿಲು ಬಡಿದಿದೆ.

ಗಾಯಗೊಂಡವರನ್ನು ಉಪ್ಪಿನಂಗಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಡಿಲು ಬಡಿದಿರುವುದರಿಂದ ಮೂರು ಮನೆಯ ವಿದ್ಯುತ್ ಉಪಕರಣಗಳು ಸುಟ್ಟು ಹೋಗಿವೆ.

ಮುನ್ನೆಚ್ಚರಿಕೆ ವಹಿಸಲು ದ.ಕ.ಜಿಲ್ಲಾಡಳಿತ ಸೂಚನೆ :

ಮಂಗಳೂರು : ಕೇರಳದಲ್ಲಿ ಸಮುದ್ರ ಅಲೆಗಳ ಅಬ್ಬರದ ಹಿನ್ನೆಲೆಯಲ್ಲಿ ಸಂಭಾವ್ಯ ಅಪಾಯವನ್ನು ತಪ್ಪಿಸುವ ಸಲುವಾಗಿ ಮುನ್ನೆಚ್ಚರಿಕೆ ವಹಿಸಲು ದ.ಕ.ಜಿಲ್ಲಾಡಳಿತ ಸೂಚನೆ ನೀಡಿದೆ.

ದ.ಕ. ಜಿಲ್ಲೆಯ ಸಮುದ್ರ ಅಲೆಗಳ ಚಲನವಲನದ ಮೇಲೆ ಹಾಗೂ ಕಡಲ ಕಿನಾರೆಯಲ್ಲಾಗುವ ಪ್ರಕ್ಷುಬ್ಧದ ಬಗ್ಗೆ ನಿಗಾ ವಹಿಸಲು ಜಿಲಾಡಳಿತ ಸೂಚಿಸಿದೆ. ಉಳ್ಳಾಲ, ಸೋಮೇಶ್ವರ, ಪಣಂಬೂರು, ಸಸಿಹಿತ್ಲು ಮತ್ತಿತರ ಕಡೆ ಸಮುದ್ರ ಅಲೆಗಳು ಸಾಮಾನ್ಯ ಸ್ಥಿತಿಯಲ್ಲಿದ್ದು, ಹವಾಮಾನ ಇಲಾಖೆಯ ಸೂಚನೆಯ ಮೇರೆಗೆ ಜಿಲ್ಲಾ ವಿಪತ್ತು ನಿರ್ವಹಣೆ ತಂಡವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಪರಿಶೀಲನೆ ಮಾಡುತ್ತಿವೆ.

ಮೀನುಗಾರಿಕೆಗೆ ತೆರಳಿರುವ ಎಲ್ಲಾ ಬೋಟುಗಳನ್ನು ಹಿಂದಿರುಗಲು ಸೂಚನೆ ನೀಡಿರುವ ಜಿಲ್ಲಾಡಳಿತ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಬರುವವರೆಗೆ ಮೀನುಗಾರಿಕೆಗೆ ತೆರಳದಂತೆ ಎಚ್ಚರಿಕೆ ನೀಡಿದೆ.

Comments are closed.