ಕರಾವಳಿ

ಮಹಿಳಾ ಕಾರ್ಪೋರೇಟರ್‌ ಜೊತೆ ಅಸಭ್ಯ ವರ್ತನೆ ಆರೋಪ : ಕಾಂಗ್ರೆಸ್ ಪಕ್ಷದ ಹುದ್ದೆಯಿಂದ ಅಬ್ದುಲ್ ಸತ್ತಾರ್ ವಜಾ

Pinterest LinkedIn Tumblr

 

                                     ಅಬ್ದುಲ್ ಸತ್ತಾರ್                                             ಪ್ರತಿಭಾ ಕುಳಾಯಿ    

ಮಂಗಳೂರು, ಮಾರ್ಚ್. 14: ಮಂಗಳೂರು ನಗರ ಪಾಲಿಕೆಯ ಮಹಿಳಾ ಕಾರ್ಪೋರೇಟರ್‌ ಜೊತೆ ಅಸಭ್ಯವಾಗಿ ವರ್ತಿಸಿದ್ದ ಆರೋಪದಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸತ್ತಾರ್ ಅವರನ್ನು ಹುದ್ದೆಯಿಂದ ವಜಾ ಮಾಡಲಾಗಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಹರೀಶ್ ಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಸೋಮವಾರ ಬೆಳಗ್ಗೆ ಮಂಗಳೂರು ಉತ್ತರ ಶಾಸಕ ಮೊದಿನ್ ಬಾವಾ ಅವರ ಸುರತ್ಕಲ್ ಕಚೇರಿಯಲ್ಲಿ ಅಭಿವೃದ್ದಿ ಕಾರ್ಯಗಳ ಬಗ್ಗೆ ಚರ್ಚೆ ನಡೆಯುತ್ತಿತ್ತು. ಈ ಚರ್ಚೆಯಲ್ಲಿ ಕಾರ್ಪೋರೇಟರ್ ಪ್ರತಿಭಾ ಕುಳಾಯಿ ಕೂಡ ಭಾಗವಹಿಸಿದ್ದರು. ಈ ವೇಳೆ ಪ್ರತಿಭಾ ಜೊತೆ ಸತ್ತಾರ್ ಅಸಭ್ಯವಾಗಿ ವರ್ತಿಸಿದ್ದ ಎನ್ನಲಾಗಿದೆ.

ಈ ವೇಳೆ ಕೋಪಗೊಂಡ ಪ್ರತಿಭಾ, ಸತ್ತಾರ್‌ಗೆ ಧರ್ಮದೇಟು ನೀಡಲು ಮುಂದಾದ ವೇಳೆ ಆತ ಸ್ಥಳದಿಂದ ಪರಾರಿಯಾಗಿದ್ದ. ಬಳಿಕ ಕಚೇರಿಯ ಮುಂದೆ ರಾಜೀ ಪಂಚಾಯಿತಿ ಮೂಲಕ ತನ್ನ ತಪ್ಪಿಗೆ ಕ್ಷಮೆ ನೀಡಬೇಕೆಂದು ಪ್ರತಿಭಾ ಬಳಿ ಕೇಳಿಕೊಂಡಿದ್ದ. ಆದರೆ ಆತನ ಅಸಭ್ಯ ವರ್ತನೆಗೆ ಮೊದಲೇ ಕೋಪಗೊಂಡಿದ್ದ ಪ್ರತಿಭಾ ಆತನಿಗೆ ಎರಡೇಟು ಬಿಗಿದಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಹರೀಶ್ ಕುಮಾರ್ ಅವರು, ಸತ್ತಾರ್ ಅನುಚಿತ ವರ್ತನೆಯ ಬಗ್ಗೆ ಮಾಧ್ಯಮ ಮೂಲಕ ತಿಳಿದುಕೊಂಡಿದ್ದೇವೆ. ಸದ್ಯಕ್ಕೆ ಅಬ್ದುಲ್ ಸತ್ತಾರ್ ಅವರನ್ನು ಪಕ್ಷದ ಹುದ್ದೆಯಿಂದ ವಜಾಗೊಳಿಸಿ ಸೂಕ್ತ ಕ್ರಮ ಕೈಗೊಂಡಿದ್ದೇವೆ ಎಂದರು.

ಪ್ರತಿಭಾ ಕುಳಾಯಿಗೆ ನೋಟಿಸ್ :

ಇದೇ ವೇಳೆ ಘಟನೆಗೆ ಸಂಬಂಧಿಸಿ ವಿವರಣೆ ಕೇಳಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಅವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.

Comments are closed.