ಉಡುಪಿ: ಭೂ ಒತ್ತುವರಿ ಪ್ರಕರಣಗಳ ವರ್ಗಾವಣೆಗೆ ಸಂಬಂಧಿಸಿದಂತೆ ಬೆಂಗಳೂರಿನ ನ್ಯಾಯಾಲಯ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರಿಗೆ ವಾರಂಟ್ ಜಾರಿಗೊಳಿಸಿದೆ. ಇದು ಜಾಮೀನು ನೀಡಬಹುದಾದ ವಾರಂಟ್ ಆಗಿದ್ದು ಸ್ವಯಂಪ್ರೇರಿತ ಪ್ರಕರಣವೊಂದರಲ್ಲಿ ನ್ಯಾಯಾಲಯದ ಮುಂದೆ ಹಾಜರಾಗಿ ವಿಚಾರಣೆ ಎದುರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
ಕರ್ನಾಟಕ ಭೂ ಕಂದಾಯ ಕಾಯ್ದೆ 2011ರ ವಿಚಾರಣೆಯನ್ನು 2017ರಲ್ಲಿ ವಿಶೇಷ ನ್ಯಾಯಾಲಯವು ಕೈಗೆತ್ತಿಕೊಂಡಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯಲ್ಲೂ ವಿವಿಧ ನ್ಯಾಯಾಲಯಗಳಲ್ಲಿ ಸುಮಾರು 30 ಪ್ರಕರಣಗಳು ವಿಚಾರಣೆಯಲ್ಲಿದ್ದವು. ಸರಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿರುವವರ ವಿವರಣೆ ನೀಡುವಂತೆ ಪ್ರತಿಕ್ರಿಯೆ ನೀಡಲು ಕೋರ್ಟು ಜಿಲ್ಲಾಡಳಿತಕ್ಕೆ ಸೂಚಿಸಿತ್ತು. ಈಗಾಗಲೇ ಜಿಲ್ಲಾಧಿಕಾರಿಗೆ ಮೂರು ನೊಟೀಸ್ ನೀಡಲಾಗಿದೆ ಎನ್ನಲಾಗಿದ್ದು ಡಿಸಿ ನ್ಯಾಯಾಲಯದ ಆದೇಶ ಪಾಲಿಸಿರಲಿಲ್ಲ ಎಂದು ತಿಳಿದುಬಂದಿದೆ. ಐಜಿಪಿ ಕಚೇರಿಯಿಂದ ಬಂದ ವಾರಂಟನ್ನು ಮಣಿಪಾಲ ಠಾಣೆಯ ಮುಖಾಂತರ ಜಿಲ್ಲಾಧಿಕಾರಿಯವರಿಗೆ ತಲುಪಿಸಲಾಗಿದೆ. ಅವರು 10,000 ರೂ.ಗಳ ಬಾಂಡ್ ನೀಡಬೇಕಾಗಿದೆ ಮತ್ತು ನ್ಯಾಯಾಲಯಕ್ಕೆ ಹಾಜರಾಗಬೇಕಾಗಿದೆ.
ಬೆಂಗಳೂರಿನಲ್ಲಿರುವ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಿಂದ ವಾರಂಟ್ ಜಾರಿಯಾಗಿರುವ ಕುರಿತು ಪ್ರತಿಕ್ರಿಯಿಸಿರುವ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರು, “ಅಕ್ರಮ ಭೂ ಒತ್ತುವರಿ ಬಗ್ಗೆ ನಾವು ಸ್ಥಳೀಯ ನ್ಯಾಯಾಲಯಗಳಲ್ಲಿ ದೂರು ದಾಖಲಿಸಿದ್ದೇವೆ. ಆದರೆ ಅದನ್ನು ಭೂಕಬಳಿಕೆ ನಿಷೇಧ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿಲ್ಲ ಎಂಬ ಹಿನ್ನೆಲೆಯಲ್ಲಿ ಈಗ ವಾರಂಟ್ ಜಾರಿಯಾಗಿದೆ. ತಹಶೀಲ್ದಾರರು ಮಾಡಿರುವ ನಿರ್ಲಕ್ಷ್ಯದಿಂದ ಹೀಗೆ ಆಗಿದೆ ಎಂದು ತಿಳಿಸಿದ್ದಾರೆ.