ರಾಷ್ಟ್ರೀಯ

ಇದು ಪ್ರಜಾಪ್ರಭುತ್ವ, ಮಧ್ಯ ಯುಗದ ಯುದ್ಧವಲ್ಲ: ತಸ್ಲೀಮಾ ನಸ್ರಿನ್

Pinterest LinkedIn Tumblr


ನವದೆಹಲಿ: ತ್ರಿಪುರಾ ಚುನಾವಣಾ ಫಲಿತಾಂಶ ಘೋಷಣೆ ಬಳಿಕ ಲೆನಿನ್ ಪ್ರತಿಮೆ ಮೇಲಿನ ದಾಳಿಯನ್ನು ಖಂಡಿಸಿರುವ ಬಾಂಗ್ಲಾದೇಶದ ವಿವಾದಾತ್ಮಕ ಲೇಖಕಿ ತಸ್ಲೀಮಾ ನಸ್ರಿನ್ ಅವರು, ಇದು ಪ್ರಜಾಪ್ರಭುತ್ವ, ಮಧ್ಯ ಯುಗದ ಯುದ್ಧವಲ್ಲ ಎಂದು ಹೇಳಿದ್ದಾರೆ.

ರೀಡರ್ಸ ಡೈಜೆಸ್ಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ತಸ್ಲೀಮಾ ನಸ್ರಿನ್ ಅವರು, ಜನರಿಗೆ ತಮ್ಮ ಭಾವನೆಗಳ ಮೇಲೆ ನಿಯಂತ್ರಣ ಹೇರಲು ಸಾಧ್ಯವಾಗುತ್ತಿಲ್ಲ. ಭಾವೋದ್ವೇಗಕ್ಕೆ ಒಳಗಾಗಿ ಪ್ರತಿಮೆಗಳನ್ನು ಭಗ್ನಗೊಳಿಸುತ್ತಿದ್ದಾರೆ. ಅದರೆ ಇದು ಸರಿಯಲ್ಲ. ಇದು ಪ್ರಜಾಪ್ರಭುತ್ವ, ಮಧ್ಯ ಯುಗದ ಯುದ್ಧವಲ್ಲ ಎಂದು ತಸ್ಲೀನಾ ಹೇಳಿದ್ದಾರೆ.

ಈ ಹಿಂದೆ ಅಂದರೆ ಮಧ್ಯಯುಗದಲ್ಲಿ ಯುದ್ಧ ಗೆದ್ದವರು ಸೋತವರ ಮನೆ-ಮಠಗಳ ಮೇಲೆ ದಾಳಿ ಮಾಡಿ ಕೈಗೆ ಸಿಕ್ಕದ್ದನ್ನು ದೋಚುತ್ತಿದ್ದರು. ಇತ್ತೀಚೆಗೆ ನಡೆದ ತ್ರಿಪುರಾ ಘಟನೆ ಕೂಡ ಅದನ್ನೇ ನೆನಪಿಸುವಂತಿತ್ತು. ಅದು ಇತಿಹಾಸದ ಕರಾಳ ಪುಟಗಳು.. ಅವೆಲ್ಲವೂ ಗತಿಸಿ ಹೋಗಿವೆ. ಅದನ್ನೇ ಪುನಾರಾವರ್ತಿಸುವುದು ಅನಾಗರಿಕತೆ. ತ್ರಿಪುರಾ ಘಟನೆ ಕೂಡ ಇದಕ್ಕೆ ಹೊರತಾಗಿಲ್ಲ. ಲೆನಿನ್ ಸಿದ್ಧಾಂತ ನಿಮಗಿಷ್ಟವಿಲ್ಲ ಎಂದಾದಲ್ಲಿ ಅದನ್ನು ಬೆಂಬಲಿಸಬೇಡಿ ಮತ್ತು ಅದನ್ನು ಅನುಕರಿಸಬೇಡಿ. ಅದನ್ನು ಬಿಟ್ಟು ಅವರ ಪ್ರತಿಮೆಗಳ ಮೇಲೆ ದಾಳಿ ಮಾಡಬಾರದು. ಪ್ರತಿಮೆಗಳ ಮೇಲೆ ದಾಳಿ ಮಾಡುವ ಮೂಲಕ ನಿಮ್ಮ ಸಿದ್ಧಾಂತಗಳನ್ನು ಜಗ್ಗಜಾಹೀರು ಮಾಡಿದ್ದೀರಿ ಎಂದು ತಸ್ಲೀಮಾ ನಸ್ರಿನ್ ಹೇಳಿದ್ದಾರೆ.

ಇತ್ತೀಚೆಗೆ ನಡೆದ ತ್ರಿಪುರಾ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಣೆ ಬಳಿಕ ಬಿಜೆಪಿ ಕಾರ್ಯಕರ್ತರು ತ್ರಿಪುರಾದಲ್ಲಿದ್ದ ಕಮ್ಯುನಿಸ್ಟ್ ವಾದಿ ಲೆನಿನ್ ಪ್ರತಿಮೆಯನ್ನು ಧ್ವಂಸ ಮಾಡಿದ್ದರು. ಈ ಘಟನೆ ಬಳಿಕ ದೇಶದಲ್ಲಿ ಇಂತಹುದೇ ಹಲವು ಘಟನೆಗಳು ನಡೆದು, ಪೆರಿಯಾರ್, ಅಂಬೇಡ್ಕರ್, ಗಾಂಧಿ ಮತ್ತು ಹನುಮನ ವಿಗ್ರಹಗಳ ಮೇಲೆ ದಾಳಿ ಮಾಡಲಾಗಿತ್ತು.

Comments are closed.