ಕರಾವಳಿ

ದೈವದ ನೇಮದ ಹಿನ್ನೆಲೆ : ಹೆಣ ಮುಟ್ಟದ ಸ್ಥಳೀಯರು – ಹೆಣ ಸಾಗಿಸಲು ಹೆಗಲು ಕೊಟ್ಟ ಪೊಲೀಸರು -ವ್ಯಾಪಕ ಪ್ರಶಂಸೆ

Pinterest LinkedIn Tumblr

ಕಡಬ, ಮಾರ್ಚ್. 4. ಕುಸಿದು ಬಿದ್ದು ಮೃತಪಟ್ಟ ವೃದ್ದರೊಬ್ಬರ ಹೆಣವನ್ನು ಪೊಲೀಸರೆ ಹೊತ್ತುಕೊಂಡು ಮನೆಗೆ ಸಾಗಿಸಿದ ಘಟನೆಯೊಂದು ಪುತ್ತೂರು ತಾಲೂಕಿನ ಕೊಯಿಲ ಗ್ರಾಮದ ಗುಲ್ಗೋಡಿ ಎಂಬಲ್ಲಿ ಶುಕ್ರವಾರ ನಡೆದಿದ್ದು, ಪೊಲೀಸರ ಈ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಮಾತ್ರವಲ್ಲದೇ ಪೊಲೀಸರ ಈ ಮಾನವೀಯ ಸೇವೆಯನ್ನು ಶ್ಲಾಘಿಸಿರುವ ದ.ಕ.ಜಿಲ್ಲಾ ಎಸ್ಪಿಯವರು ನಗದು ಬಹುಮಾನ ಘೋಷಿಸಿದ್ದಾರೆ.

ಘಟನೆಯ ವಿವರ :

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಜಂಬದಹಳ್ಳಿ ನಿವಾಸಿ ಪಲನಿ ಸ್ವಾಮಿ ಎಂಬವರ ಪುತ್ರ ಅಸಲಪ್ಪ (80) ಎಂಬ ವಯೋವೃದ್ಧರು ಕೊಯಿಲ ಗ್ರಾಮದ ಗುಲ್ಗೋಡಿ ಎಂಬಲ್ಲಿರುವ ತಮ್ಮ ಮಗನ ಮನೆಗೆ ಗುಡ್ಡದ ಕಾಲುದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕುಸಿದು ಬಿದ್ದು ಮೃತಪಟ್ಟಿದ್ದರು. ಆದರೆ ಈ ಊರಿನಲ್ಲಿ ದೈವದ ನೇಮ ಇದ್ದುದರಿಂದ ಊರವರು ಹೆಣ ಸಾಗಿಸಲು ಹಿಂಜರಿದಿದ್ದು, ಕೊನೆಗೆ ಬೇರೆ ದಾರಿ ಕಾಣದೆ ಪೊಲೀಸರೇ ಹೆಣವನ್ನು ಸಾಗಿಸಿದ್ದಾರೆ.

ಮೀನು ಹಿಡಿಯುವ ಕಾಯಕದ ಇವರು ಹಲವು ವರ್ಷಗಳ ಹಿಂದೆ ಕಡಬ ತಾಲೂಕಿನ ಕೊಯಿಲಕ್ಕೆ ಆಗಮಿಸಿದ್ದು, ಅವರ ಪುತ್ರ ಇಲ್ಲಿನ ಮಹಿಳೆಯೋರ್ವರನ್ನು ವಿವಾಹವಾಗಿದ್ದರು ಎನ್ನಲಾಗಿದೆ. ತನ್ನ ಮಗನ ಮನೆಗೆಂದು ಆಗಮಿಸಿದ್ದ ಇವರು ಶುಕ್ರವಾರ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಊರಿನಲ್ಲಿ ಸೋಮವಾರ ದೈವದ ನೇಮ ಇದ್ದುದರಿಂದ ಗ್ರಾಮದ ಜನ ಹೆಣ ಮುಟ್ಟಲು ಹಿಂಜರಿದಿದ್ದರು ಹಾಗು ಕುಟುಂಬಸ್ಥರು ಯಾರೂ ಇರಲಿಲ್ಲ. ಇದರಿಂದ ಮೃತದೇಹವನ್ನು ಸಾಗಿಸಲು ಜನರಿಲ್ಲದೆ ಗೊಂದಲ ಸೃಷ್ಟಿಯಾಗಿತ್ತು. ಕೊನೆಗೆ ಕಡಬ ಠಾಣೆ ಸಬ್ ಇನ್ಸ್ಪೆಕ್ಟರ್ ಪ್ರಕಾಶ್ ದೇವಾಡಿಗ, ಎಎಸ್‌ಐ ರವಿ ಮತ್ತು ಹೋಂಗಾರ್ಡ್ ಸಂದೇಶ್ ಮೃತದೇಹಕ್ಕೆ ತಾವೇ ಹೆಗಲು ಕೊಟ್ಟು ಮನೆತನಕ ಸಾಗಿಸಲು ನೆರವಾಗಿದ್ದಾರೆ. ಪೊಲೀಸರ ಈ ಸೇವೆಯ ಬಗ್ಗೆ ಇದೀಗ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು, ಪೊಲೀಸರ ಈ ಸೇವೆಯನ್ನು ಗುರುತಿಸಿರುವ ದ.ಕ.ಜಿಲ್ಲಾ ಎಸ್ಪಿಯವರು ನಗದು ಬಹುಮಾನವನ್ನು ಘೋಷಿಸಿದ್ದಾರೆ.

Comments are closed.