ಕರಾವಳಿ

ರೇಪ್ ಎಂಡ್ ಮರ್ಡರ್ : ಸರಣಿ ಹಂತಕ ಮೋಹನ್ ಕುಮಾರ್‌ಗೆ ಐದನೇ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಪ್ರಕಟ

Pinterest LinkedIn Tumblr

ಮಂಗಳೂರು, ಫಬ್ರವರಿ.24: ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಪ್ರಕರಣದಲ್ಲಿ ಯುವತಿಯರ ಸರಣಿ ಹಂತಕ ಸಯನೈಡ್ ಕಿಲ್ಲರ್ ಮೋಹನ್ ಕುಮಾರ್ ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಯುವತಿಯ ಅತ್ಯಾಚಾರ ಹಾಗೂ ಕೊಲೆಯ ಐದನೇ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಬೆಳ್ತಂಗಡಿಯ ಮೇಗಿನ ಮಾಲಾಡಿ ನಿವಾಸಿ ಯಶೋದಾ(28) ಅತ್ಯಾಚಾರ-ಕೊಲೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿದ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮೋಹನ್ ಕುಮಾರ್ ನನ್ನು ಅಪರಾಧಿ ಎಂದು ಫೆ.23 (ಶುಕ್ರವಾರ) ಘೋಷಿಸಿತ್ತು. ಶಿಕ್ಷೆಯ ಪ್ರಮಾಣವನ್ನು ಇಂದು ಪ್ರಕಟಿಸುವುದಾಗಿ ನ್ಯಾಯಾಧೀಶ ಡಿ.ಜೆ.ಪುಟ್ಟರಂಗ ಸ್ವಾಮಿ ತಿಳಿಸಿದ್ದರು. ಅದರಂತೆ ಇಂದು ಪೂರ್ವಾಹ್ನ ಶಿಕ್ಷೆಯನ್ನು ಪ್ರಕಟಿಸಿದ್ದಾರೆ.

ಮೋಹನ್ ಕುಮಾರ್ ಬೆಳ್ತಂಗಡಿಯ ಮೇಗಿನ ಮಾಲಾಡಿ ನಿವಾಸಿ ಯಶೋದಾ(28)ಎಂಬಾಕೆ ಯೊಂದಿಗೆ ಸಲುಗೆ ಬೆಳೆಸಿ ಕೊಂಡಿದ್ದ. ಈ ಸಂದರ್ಭ ತನ್ನ ಹೆಸರನ್ನು ಶಶಿಧರ ಪೂಜಾರಿ ಎಂದು ಪರಿಚಯಿಸಿದ್ದ. ವಿವಾಹ ಆಗುವುದಾಗಿ ಹೇಳಿ ಚಿನ್ನಾಭರಣದೊಂದಿಗೆ ಬರು ವಂತೆ ಆಕೆಗೆ ತಿಳಿಸಿದ್ದ. ಅದರಂತೆ 2009ರ ಸೆ.24ರಂದು ಮನೆಯಲ್ಲಿ ಹೇಳದೆ ಬಂದ ಯಶೋದಾರನ್ನು ಹಾಸನಕ್ಕೆ ಕರೆದೊಯ್ದು ಅಲ್ಲಿ ಲಾಡ್ಜ್ವೊಂದರಲ್ಲಿ ಅತ್ಯಾಚಾರ ಎಸಗಿದ್ದನು.

ಮರುದಿನ ಬೆಳಗ್ಗೆ ಆಕೆಯನ್ನು ಹಾಸನ ಬಸ್ ನಿಲ್ದಾಣಕ್ಕೆ ಕರೆದುಕೊಂಡು ಬಂದಿದ್ದ. ಗರ್ಭ ಧರಿಸಿದರೆ ತೊಂದರೆಯಾಗುತ್ತದೆ ಎಂದು ಹೇಳಿ ಆಕೆಗೆ ಗರ್ಭ ನಿರೋಧಕ ಮಾತ್ರೆ ಎಂದು ಸಯನೈಡ್ನ್ನು ನೀಡಿದ್ದ. ಅದನ್ನು ಶೌಚಾಲಯದಲ್ಲಿ ಸೇವಿಸುವಂತೆ ಸೂಚಿಸಿದ್ದ. ಅದರಂತೆ ಯಶೋದಾ ಸೆನೈಡ್ ಅನ್ನು ತಿಂದು ಶೌಚಾಲಯದಲ್ಲಿ ಕುಸಿದು ಮೃತಪಟ್ಟಿದ್ದಳು. ಆಕೆ ಮೃತಪಟ್ಟಿದ್ದನ್ನು ಖಚಿತ ಪಡಿಸಿಕೊಂಡ ಮೋಹನ್ ಬಳಿಕ ಅಲ್ಲಿಂದ ಪರಾರಿಯಾಗಿದ್ದ ಎಂದು ಪೊಲೀಸ್ ದೂರು ದಾಖಲಾಗಿತ್ತು.

ಇದರೊಂದಿಗೆ ಮೋಹನ್ ಕುಮಾರ್ ತನ್ನ ವಿರುದ್ಧ ಇದ್ದ 20 ಅತ್ಯಾಚಾರ-ಹತ್ಯೆ ಪ್ರಕರಣಗಳಲ್ಲಿ ವಿಚಾರಣೆ ಪೂರ್ಣಗೊಂಡ ಐದು ಪ್ರಕರಣಗಳಲ್ಲಿ ನಾಲ್ಕರಲ್ಲಿ ಜೀವಾವಧಿ ಹಾಗೂ ಒಂದರಲ್ಲಿ ಮರಣ ಶಿಕ್ಷೆಗೊಳಗಾಗಿದ್ದಾನೆ. ಇನ್ನೂ 15 ಪ್ರಕರಣಗಳ ವಿಚಾರಣೆ ಬಾಕಿಯಿದೆ. ಪಬ್ಲಿಕ್ ಪ್ರಾಸಿಕ್ಯೂಷನ್ ಪರವಾಗಿ ಜುಡಿತ್ ಕ್ರಾಸ್ತಾ ವಾದಿಸಿದ್ದರು.

Comments are closed.