ವಾಷಿಂಗ್ಟನ್: ಶಾಲಾ ವಿದ್ಯಾರ್ಥಿಗಳ ಶೂಟೌಟ್ ತಪ್ಪಿಸಲು ಶಾಲಾ ಶಿಕ್ಷಕರ ಕೈಗೂ ಗನ್ ನೀಡಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಇತ್ತೀಚೆಗೆ ಅಮೆರಿಕದ ಫ್ಲೋರಿಡಾ ಖಾಸಗಿ ಶಾಲೆಯಲ್ಲಿ ನಡೆದ ಶೂಟೌಟ್ ಪ್ರಕರಣದಲ್ಲಿ 17 ಮಂದಿ ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಟ್ ಹೌಸ್ ನಲ್ಲಿ ಜಂಟಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಟ್ರಂಪ್, ಶೂಟೌಟ್ ನಡೆಸಿದ ಬಾಲಕನನ್ನು ಶಾಲಾ ಸಿಬ್ಬಂದಿ ತಡೆದು ಆತನ ತಲೆಗೆ ಗನ್ ಇಟ್ಟಿದ್ದಿದ್ದರೆ ಖಂಡಿತಾ ಈ ದುರಂತ ತಪ್ಪುತ್ತಿತ್ತು ಎಂದು ಹೇಳಿದ್ದಾರೆ.
ಶಾಲಾ ಭದ್ರತಾ ಸಿಬ್ಬಂದಿಗೆ ಮಕ್ಕಳು ಯಾರು ಎಂದು ತಿಳಿದಿರುವುದಿಲ್ಲ. ಅಂತೆಯೇ ಶಾಲೆಗೆ ಬರುವ ಮಕ್ಕಳನ್ನು ಪ್ರೀತಿಸುವುದಿಲ್ಲ, ಭದ್ರತಾ ಸಿಬ್ಬಂದಿ ಬಳಿ ಗನ್ ಇದ್ದರೆ ಸರಿ ಹೋಗದು, ಶಿಕ್ಷಕರೂ ಕೂಡ ಗನ್ ಹಿಡಿದು ದುಷ್ಟ ವಿದ್ಯಾರ್ಥಿಗಳ ಹೆಣೆಗೆ ಇಟ್ಟರೆ ಇಂತಹ ಅವಘಡಗಳು ಸಂಭವಿಸುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಇದೇ ವೇಳೆ ಗನ್ ಫ್ರೀ ವಾತಾವರಣ ಸರಿಹೊಂದುವುದಿಲ್ಲ ಎಂದು ಪ್ರತಿಪಾದಿಸಿದ ಟ್ರಂಪ್, ನಿಮ್ಮ ಬಳಿ ಗನ್ ಇಲ್ಲವೆಂದಾದರೆ ನೀವೇ ದುಷ್ಕರ್ಮಿಗಳೃನ್ನು ಆಹ್ವಾನಿಸಿ ಆತನಿಗೆ ಬೇಕಾದ್ದು ಮಾಡಲು ಆಹ್ವಾನಿಸಿದಂತೆ ಎಂದೂ ಹೇಳಿದ್ದಾರೆ.
ಅಮೆರಿಕದಲ್ಲಿ ಹೆಚ್ಚುತ್ತಿರುವ ಗನ್ ಸಂಸ್ಕೃತಿಯನ್ನು ತಡೆಗಟ್ಟಬೇಕು ಎಂದು ವಿವಿಧ ಸಾಮಾಜಿಕ ಸಂಘಟನೆಗಳು ವಿವಿಧ ರೀತಿಯ ಜಾಗೃತಿ ಅಭಿಯಾನ ನಡೆಸುತ್ತಿದ್ದರೆ, ಇತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತ್ರ ಮಕ್ಕಳು ಗನ್ ತಂದರೆ ಶಿಕ್ಷಕರಿಗೂ ಗನ್ ನೀಡಬೇಕು ಎಂದು ವಿವಾದಾತ್ಮಕವಾಗಿ ಹೇಳಿದ್ದಾರೆ. ಟ್ರಂಪ್ ಹೇಳಿಕೆಗೆ ಇದೀಗ ಅಮೆರಿಕದಲ್ಲಿ ವ್ಯಾಪಕ ವಿರೋಧಗಳು ವ್ಯಕ್ತವಾಗುತ್ತಿದೆ.