ಕರಾವಳಿ

ಉಡುಪಿ ಜಿಲ್ಲೆಯಲ್ಲಿ ಮಿನಿ ವಿಧಾನಸೌಧಗಳ ನಿರ್ಮಾಣಕ್ಕೆ 20 ಕೋಟಿ ನೀಡ್ತೇವೆ: ಕಾಗೋಡು ತಿಮ್ಮಪ್ಪ

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ತಾಲೂಕುಗಳಲ್ಲಿ 5 ಕೋಟಿ ರೂ ಗಳ ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಿಸಲಾಗುವುದು ಎಂದು ರಾಜ್ಯದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ. ಅವರು ಶನಿವಾರ ಹೆಬ್ರಿಯಲ್ಲಿ, ಹೆಬ್ರಿ ನೂತನ ತಾಲೂಕು ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.

ಉಡುಪಿ ಜಿಲ್ಲೆ ಯ ನೂತನ ತಾಲೂಕುಗಳಾದ ಬೈಂದೂರು, ಬ್ರಹ್ಮಾವರ, ಕಾಪು ಮತ್ತು ಹೆಬ್ರಿಯಲ್ಲಿ ತಲಾ 5 ಕೋಟಿ ರೂ ಗಳ ವೆಚ್ಚದಲ್ಲಿ ಮಿನಿ ವಿಧಾನ ಸೌಧ ನಿರ್ಮಿಸಲು ನಿರ್ಧರಿಸಿದ್ದು, ಜಿಲ್ಲಾಧಿಕಾರಿಗಳ ಮೂಲಕ ಶೀಘ್ರದಲ್ಲಿ ಪ್ರಸ್ತಾವನೆ ತಲುಪಿಸದಲ್ಲಿ, ಕೂಡಲೇ ಹಣ ಬಿಡುಗಡೆ ಮಾಡಲಾಗುವುದು ಎಂದು ಕಾಗೋಡು ಹೇಳಿದರು.

ಕಳೆದ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು 50 ಹೊಸ ತಾಲೂಕುಗಳ ರಚನೆಗೆ ಘೋಷಣೆ ಮಾಡಿದ್ದು, 2018 ರ ಜನವರಿ 30 ರ ತನಕ ಸಂಬಂದಪಟ್ಟ ಎಲ್ಲಾ ಕ್ರಮ ಕೈಗೊಂಡು, ಆಕ್ಷೇಪಗಳನ್ನು ಆಹ್ವಾನಿಸಿ, ಅಂತಿಮ ಅಧಿಸೂಚನೆ ಹೊರಡಿಸಿ, ಪ್ರಸ್ತುತ 50 ಹೊಸ ತಾಲೂಕುಗಳಿಗೆ ಅಸ್ತಿತ್ವಕ್ಕೆ ತರಲಾಗಿದೆ, ಈ ಹೊಸ ತಾಲೂಕುಗಳಿಗೆ ಅಗತ್ಯವಿರುವ ಎಲ್ಲಾ ಮೂಲಬೂತ ಸೌಲಭ್ಯಗಳು ಹಾಗೂ ತಹಸೀಲ್ದಾರ್ ಗಳನ್ನು ನೇಮಕ ಮಾಡಿ, ಸಾರ್ವಜನಿಕರಿಗೆ ಎಲ್ಲಾ ರೀತಿಯ ಸೌಲಭ್ಯ ದೊರೆಯುವಂತೆ ಮಾಡಲಗುವುದು ಎಂದು ಕಾಗೋಡು ತಿಮ್ಮಪ್ಪ ಹೇಳಿದರು.

ಈ ಭಾಗದಲ್ಲಿ ಭೂಮಿಗೆ ಸಂಬಂದಿಸಿದಂತೆ ಹಲವು ಸಮಸ್ಯೆಗಳಿದ್ದು, ಡ್ರೀಮ್ಡ್ ಫಾರೆಸ್ಟ್ ಸಮಸ್ಯೆ ಸಹ ಇದೆ, ಡ್ರೀಮ್ಡ್ ಫಾರೆಸ್ಟ್ ನಿಂದ ಅರಣ್ಯ ಭೂಮಿಯನ್ನು ಹೊರಗಿಡುವ ಕುರಿತಂತೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಸಿದ್ದವಾಗಿದ್ದು, ಶೀಘ್ರದಲ್ಲಿ ಪರಿಹಾರ ದೊರೆಯಲಿದೆ, ಹೆಬ್ರಿ ತಾಲೂಕಿಗೆ ಸಂಬಂದಿಸಿದಂತೆ ಸುಮಾರು 4000 ಭೂ ಸುದಾರಣಾ ಅರ್ಜಿಗಳು ಬಾಕಿ ಇದ್ದು, ಬೇಗನೆ ಇತ್ಯರ್ಥಪಡಿಸಲಾಗುವುದು, ಉಡುಪಿ ಮತ್ತು ದ.ಕನ್ನಡ ಜಿಲ್ಲೆಗಳಲ್ಲಿ ಭೂಮಿ ವಿಷಯಕ್ಕೆ ಸಂಬಂದಪಟ್ಟ ಸಮಸ್ಯೆಗಳ ಪ್ರತ್ಯೇಕ ನಡೆಸಲು ಚಿಂತಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಹೊಸ ತಾಲೂಕುಗಳಲ್ಲಿ ಆಡಳಿತದಲ್ಲಿ ಹೊಸ ಶಕ್ತಿ ಬರಬೇಕು, ರಾಜ್ಯ ಸರ್ಕಾರ ಸ್ವಚ್ಛ ಮತ್ತು ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಿದ್ದು, ಕಂದಯ ಇಲಾಖೆಯಲ್ಲಿ ಪಾರದರ್ಶಕ ಆಡಳಿತ ನಡೆದರೆ ಎಲ್ಲಾ ಇಲಾಖೆಗಳಲ್ಲಿ ಪಾರದರ್ಶಕತೆ ಮೂಡಲಿದೆ, ಅಧಿಕಾರಿಗಳು ಕಾನೂನು ವ್ಯಾಪ್ತಿಯಲ್ಲಿ, ಜನಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಕಾಗೋಡು ಹೇಳಿದರು.

ಸಂಸದ ವೀರಪ್ಪ ಮ್ಯೊಲಿ ಮಾತನಾಡಿ, ಹೊಸ ತಾಲೂಕಿನಿಂದ ಅಭಿವೃದ್ದಿ ಕೆಲಸಗಳು ಕ್ಷಿಪ್ರವಾಗಿ ನಡೆದು, ಸಾರ್ವಜನಿಕರಿಗೆ ಎಲ್ಲಾ ರೀತಿಯ ಪ್ರಯೋಜನ ದೊರಯಲಿ ಎಂದು ಹೇಳಿದರು. ಕಾರ್ಕಳ ಶಾಸಕ ಹಾಗೂ ವಿಧಾನಸಭೆಯ ವಿರೋಧಪಕ್ಷದ ಮುಖ್ಯ ಸಚೇತಕ ವಿ.ಸುನೀಲ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಕಳ ತಾಲೂಕು ಪಂಚಾಯತ್ ಅಧ್ಯಕ್ಷೆ ಮಾಲಿನಿ ಜೆ.ಶೆಟ್ಟಿ. ಜಿಲ್ಲಾ ಪಂಚಾಯತ್ ಸದಸ್ಯೆ ಜ್ಯೋತಿ ಹರೀಶ್, ಹೆಬ್ರಿ ಗ್ರಾ.ಪಂ. ಅಧ್ಯಕ್ಷ ಸುಧಾಕರ್ ಹೆಗ್ಡೆ, ಕುಂದಾಪುರ ಉಪ ವಿಭಾಗಾಧಿಕಾರಿ ಭೂಬಾಲನ್ ಮತ್ತಿತರರು ಉಪಸ್ಥಿತರಿದ್ದರು.

ಹೆಬ್ರಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಭಾಸ್ಕರ್ ಜೋಯಿಸ್ ಪ್ರಾಸ್ತಾವಿಕವಾಗಿ ಮಾತನಾಡಿದರು, ತಹಸೀಲ್ದಾರ್ ಮಹಾದೇವಯ್ಯ ಸ್ವಾಗತಿಸಿದರು, ಸೀತಾನದಿ ವಿಠಲ ಶೆಟ್ಟಿ ಹಾಗೂ ಟಿಜಿ ಆಚಾರ್ಯ ನಿರೂಪಿಸಿದರು.

Comments are closed.