ಮಂಗಳೂರು, ಫೆಬ್ರವರಿ.10: ಇತಿಹಾಸ ಪ್ರಸಿದ್ಧ ನಾಗರಾಧನ ಕ್ಷೇತ್ರವಾದ ಕುಡುಪು ಅನಂತಪದ್ಮನಾಭ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಫೆ. 18ರಿಂದ ವಿವಿಧ ಕಡೆಗಳಿಂದ ಹೊರೆಕಾಣಿಕೆ ಸಲ್ಲಿಕೆಯಾಗಲಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಹೊರೆಕಾಣಿಕೆ ಸಮಿತಿಯ ಪ್ರಧಾನ ಸಂಚಾಲಕ ಕಡಂಬೋಡಿ ಮಹಾಬಲ ಪೂಜಾರಿ ಅವರು, ಫೆ. 18ರಂದ ಮಧ್ಯಾಹ್ನ 2.30ಕ್ಕೆ ಶರವು ಮಹಾಗಣಪತಿ ದೇವಸ್ಥಾನದಲ್ಲಿ ಮಂಗಳೂರು ಮೇಯರ್ ಕವಿತಾ ಸನಿಲ್ ಹಾಗೂ ಶಾರದಾ ಸಮೂಹ ಸಂಸ್ಥೆಯ ಅಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್ ಹಾಗೂ ಶರವು ದೇವಸ್ಥಾನದ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿಗಳ ಉಪಸ್ಥಿತಿಯಲ್ಲಿ ಹೊರೆಕಾಣಿಕೆ ಸಮರ್ಪಣಾ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ ಎಂದರು.
ಬಳಿಕ ನಗರದ ನೆಹರೂ ಮೈದಾನದಿಂದ ಬೃಹತ್ ಹೊರೆಕಾಣಿಕೆ ಮೆರವಣಿಗೆಗೆ ಹಸಿರು ನಿಶಾನೆ ತೋರಲಾಗುವುದು. ಮೆರವಣಿಗೆಯು ನೆಹರೂ ಮೈದಾನದಿಂದ ಅಂಬೇಡ್ಕರ ವೃತ್ತ ಮೂಲಕ ಬಂಟ್ಸ್ ಹಾಸ್ಟೆಲ್, ಕದ್ರಿ, ನಂತೂರು, ಬಿಕರ್ನಕಟ್ಟೆ, ಕೈಕಂಬ, ಕುಲಶೇಖರ, ಚೌಕಿ ಬೈತುರ್ಲಿಯಾಗಿ ಕುಡುಪು ಕ್ಷೇತ್ರಕ್ಕೆ ಆಗಮಿಸಲಿದೆ. ಫೆ. 20ರಂದು ಮಧ್ಯಾಹ್ನ 2 ಗಂಟೆಗೆ ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಿರೂರು ಮಠಾಧೀಶ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಹಾಗೂ ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಐ. ರಮಾನಂದ ಭಟ್ ಉಪಸ್ಥಿತಿಯಲ್ಲಿ ಸುರತ್ಕಲ್ ವಲಯದಿಂ ಹೊರೆಕಾಣಿಕೆ ಸಮರ್ಪಣೆಯಾಗಲಿದೆ.
ಫೆ. 22ರಂದು ಸಂಜೆ 4 ಗಂಟೆಗೆ ವಾಮಂಜೂರು ಶ್ರೀರಾಮ ಭಜನಾ ಮಂದಿರದಿಂದ, ಮಧ್ಯಾಹ್ನ 2 ಗಂಟೆಗೆ ಮೂಡಬಿದ್ರೆಯ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ಹೊರೆಕಾಣಿಕೆ ಕುಡುಪು ಕ್ಷೇತ್ರಕ್ಕೆ ಆಗಮಿಸಲಿದೆ ಎಂದು ಅವರು ವಿವರ ನೀಡಿದರು.
ಹೊರೆಕಾಣಿಕೆಯ ಅಂಗವಾಗಿ ವಸ್ತುಗಳ ಸಂಗ್ರಹಣಾ ಕೇಂದ್ರವು ಶರವು ಮಹಾಗಣಪತಿ ದೇವಸ್ಥಾನದಲ್ಲಿ ಫೆ. 10ರಂದು, ಫೆ. 16ರಂದು ವಾಮಂಜೂರು ರಾಮ ಭಜನಾ ಮಂದಿರ, ಫೆ. 17ರಂದು ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಅವರು ಹೇಳಿದರು.
ಹೊರೆಕಾಣಿಕೆಗೆ ಸ್ಟೀಲ್ ಬಾಲ್ದಿ, ಸೌಟು, ಕಡಾಯಿ, ಹುಟ್ಟು (ಅನ್ನ ಬಡಿಸುವ ಸೌಟು), ಕೌಳಿಗೆ, ಲೋಟಗಳು ಹಾಗೂ ಪ್ಲೇಟ್ಗಳು.ಬೆಳ್ತಿಗೆ ಅಕ್ಕಿ (ಬಾಲಾಜಿ, ಟೈಗರ್ ಸ್ಟ್ರೋಬರಿ, ಪವನ್ ಬ್ರಾಂಡ್), ತೆಂಗಿನಕಾಯಿ, ಗೋಧಿ, ಉದ್ದ ಮೆಣಸು, ಗಿಡ್ಡ ಮೆಣಸು, ತೊಗರಿಬೇಳೆ, ಕಡ್ಲೆ ಹಿಟ್ಟು, ಮೈದಾ, ಕೊತ್ತಂಬರಿ, ಸಾಸಿವೆ, ಸಕ್ಕರೆ, ಕಡ್ಲಬೇಳೆ, ಉದ್ದಿನ ಬೇಳೆ, ಹೆಸರು ಬೇಳೆ, ಬೆಲ್ಲ, ತೆಂಗಿನೆಣ್ಣೆ, ತುಪ್ಪ, ಹುಳಿ, ರುಚಿ ಗೋಲ್ಡ್ ಸನ್ ಪ್ಲವರ್ ಎಣ್ಣೆ, ಬಾಂಬೆ ರವೆ, ಉಪ್ಪು, ಕಣ್ವ ಸಜ್ಜಿಗೆ, ಅವಲಕ್ಕಿ, ಬಟಾಣಿ, ಬಿಳಿ ಕಡಲೆ, ಹುರುಳಿ ಇತರ ಅಡುಗೆಗೆ ಬೇಕಾದ ಉಪಯುಕ್ತ ದಿನಸಿ ಸಾಮಗ್ರಿಗಳು, ಸೀಯಾಳ, ಹಿಂಗಾರ, ಫಲವಸ್ತುಗಳು, ಬಾಳೆಹಣ್ಣಿನ ಗೊನೆ, ಬಾಳೆ ಎಲೆ. ನೀರುಳ್ಳಿ, ಬೆಳ್ಳುಳ್ಳಿ, ಕಾಲಿಪ್ಲವರ್, ಸೋರೆಕಾಯಿ, ಬಸಳೆ ಹೊರತುಪಡಿಸಿ ಇತರ ಎಲ್ಲಾ ಬಗೆಯ ತರಕಾರಿಗಳನ್ನು ನೀಡಬಹುದಾಗಿದೆ ಎಂದವರು ಮಾಹಿತಿ ನೀಡಿದರು.
ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಸಂಚಾಲಕ ಕೃಷ್ಣ ರಾಜತಂತ್ರಿ, ಪ್ರಧಾನ ಕಾರ್ಯದರ್ಶಿ ಸುಜನ್ ದಾಸ್ ಕುಡುಪು, ಹೊರೆಕಾಣಿಕೆ ಸಮಿತಿಯ ಪ್ರಧಾನ ಸಂಚಾಲಕ ಶರಣ್ ಪಂಪ್ವೆಲ್, ಮನೋಹರ ಭಟ್, ಪ್ರಭಾಕರ ಭಟ್, ಗಣೇಶ್ ಭಟ್, ಪುಷ್ಪರಾಜ ಪೂಜಾರಿ, ಉದಯ ಕುಮಾರ್ ಕುಡುಪು, ನವೀನ್ ಮೂಡುಶೆಡ್ಡಿ , ಜಗನ್ನಾಥ ಶೆಟ್ಟಿ ಬಾಳ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.