ಕರಾವಳಿ

ಚುನಾವಣಾ ಸಿದ್ಧತೆ ಹಿನ್ನೆಲೆ : ಅನಧಿಕೃತ ಬ್ಯಾನರ್ ತೆರವುಗೊಳಿಸಲು ದ.ಕ.ಜಿಲ್ಲಾಧಿಕಾರಿ ಆದೇಶ

Pinterest LinkedIn Tumblr

ಮಂಗಳೂರು ಫೆಬ್ರವರಿ 09 : ಕರ್ನಾಟಕ ವಿಧಾನಸಭಾ ಚುನಾವಣೆಯ ಪೂರ್ವ ತಯಾರಿ ಹಾಗೂ ಭದ್ರತೆ ದೃಷ್ಠಿಯಿಂದ ನಗರದಲ್ಲಿ ಅನಧಿಕೃತವಾಗಿರುವ ಬ್ಯಾನರ್‍ಗಳನ್ನು ತೆರವುಗೊಳಿಸಲು ದ.ಕ. ಜಿಲ್ಲಾಧಿಕಾರಿ ಡಾ ಸಸಿಕಾಂತ್ ಸೆಂಥಿಲ್ ಆದೇಶಿಸಿದ್ದಾರೆ.

ಅವರು ಇಂದು ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್‍ಹಾಲ್‍ನಲ್ಲಿ ನಡೆದ ಅಧಿಕಾರಿಗಳ ಚುನಾವಣಾ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಇನ್ನೆರಡು ತಿಂಗಳು ಜಿಲ್ಲೆಯ ವಿವಿಧ ಕಡೆಯಲ್ಲಿ ನಡೆಯುವ ಕಾರ್ಯಕ್ರಮಗಳು, ಉತ್ಸವಗಳಿಗೆ ಸಂಬಂಧಪಟ್ಟ ಅಧಿಕಾರಿಗಳ ಅನುಮತಿಯನ್ನು ಪಡೆದು ಬಂಟಿಂಗ್ಸ್‍ಗಳನ್ನು ಹಾಕಲು ಸೂಚನೆಯನ್ನು ನೀಡಿದ್ದಾರೆ. ಅನುಮತಿ ಪಡೆಯದೇ ಇರುವವರ ಮೇಲೆ ಕ್ರಮಕೈಗೊಳ್ಳಲು ಹಾಗೂ ಅಂತಹ ಬ್ಯಾನರ್‍ಗಳನ್ನು ಮತ್ತು ಅವಧಿ ಮೀರಿದ ಬ್ಯಾನರ್‍ಗಳನ್ನು ಮುಲಾಜಿಲ್ಲದೇ ತೆರವುಗೊಳಿಸಲು ಸೂಚಿಸಿದ್ದಾರೆ.

ಚುನಾವಣೆಯ ಸಂದರ್ಭ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದ್ದು ಚುನಾವಣಾ ದಿನಾಂಕ ಪ್ರಕಟವಾಗುವ ಮುಂಚೆ ಎಲ್ಲಾ ಅನಧಿಕೃತ ಬ್ಯಾನರ್‍ಗಳನ್ನು ತೆರವುಗೊಳಿಸಿ ಶಾಂತಿಯುತವಾಗಿ ಚುನಾವಣೆಯನ್ನು ನಡೆಸಲು ತೀರ್ಮಾನಿಸಲಾಗಿದೆ.

ಅಲ್ಲದೇ ಈ ವರ್ಷವೂ ವಿದ್ಯುನ್ಮಾನ ಮತಯಂತ್ರಗಳ ಮೂಲಕ ಮತದಾನ ನಡೆಯಲಿದ್ದು, ಇದಕ್ಕೆ ಪೂರಕವಾಗಿ ವಿವಿ ಪ್ಯಾಟ್‍ಗಳನ್ನು ಬಳಸುತ್ತಿದ್ದು ಇದರಲ್ಲಿ ಯಾವುದೇ ಲೋಪದೋಷಗಳು ನಡೆಯದಂತೆ ನಿಷ್ಪಕ್ಷಪಾತವಾಗಿ ಚುನಾವಣೆಯನ್ನು ನಡೆಸಲು ಸಹಕರಿಸಬೇಕೆಂದು ಜಿಲ್ಲೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮತ ಎಣಿಕೆ ಗೊಂದಲ ಮಾಡಿದರೆ ಈ ಮುದ್ರಣವನ್ನು ಮತ್ತೊಮ್ಮೆ ಎಣಿಕೆ ಮಾಡಲು ಅವಕಾಶವಿದ್ದು ಇಲ್ಲಿ ಗೊಂದಲಕ್ಕೆ ಅವಕಾಶವಿರುವುದಿಲ್ಲ.

ಒಂದು ವೇಳೆ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸಿದರೆ ಹಾಗೂ ಕರ್ತವ್ಯ ವೇಳೆಯಲ್ಲಿ ಮೊಬೈಲ್ ಫೋನ್‍ಗಳನ್ನು ಬಳಸಿದ್ದು ಕಂಡುಬಂದಲ್ಲಿ ಅಂಥವರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.

ಪ್ರಸಕ್ತ ವರ್ಷದಲ್ಲಿ ಆನ್‍ಲೈನ್ ಪೋರ್ಟಲ್‍ಗಳ ಮೂಲಕ ಅಂಕಿ ಅಂಶಗಳನ್ನು ದಾಖಲಿಸಬೇಕಾಗಿರುವುದರಿಂದ ಪ್ರತಿ ತಾಲೂಕಿನಲ್ಲಿ ಕಂಟ್ರೋಲ್ ರೂಂ ಗಳನ್ನು ರಚಿಸಿ ಡಾಟಾ ಎಂಟ್ರಿ ಆಪರೇಟರ್‍ಗಳ ಮೂಲಕ ಕಾರ್ಯನಿರ್ವಹಿಸಲಾಗುವುದು. ಚುನಾವಣಾಧಿಕಾರಿಗಳು ಈ ಕುರಿತು ಮಾಹಿತಿ ನೀಡಲು ಸಹಕರಿಸಬೇಕು ಎಂದರು.

ಮತದಾನದ ಮಾಹಿತಿಯನ್ನು ನೀಡಲು ಅನುಭವಿ ವೀಡೀಯೋಗ್ರಾಫರ್‍ಗಳನ್ನು ನೇಮಿಸಬೇಕೆಂದು ಸಲಹೆ ನೀಡಿದರು. ನೀತಿ ಸಂಹಿತೆ ಘೋಷನೆಯಾಗುತ್ತಿದ್ದಂತೆಯೇ ಎಲ್ಲ ಸರಕಾರಿ ಅಧಿಕಾರಿಗಳು, ನೌಕರರು ಚುನಾವಣಾ ಆಯೋಗಕ್ಕೆ ನಿಯೋಜನೆಗೊಳ್ಳಲಿದ್ದು, ಚುನಾವಣಾ ಕತ್ರ್ಯವನ್ನು ಸೇವೆಯೆಂದು ಪರಿಗಣಿಸಬೇಕು ಎಂದರು.

ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿ ಎಮ್.ಆರ್ ರವಿ ಮಾತನಾಡಿ ಚುನಾವಣಾಧಿಕಾರಿಗಳು ಚುನಾವಣೆಯ ಗಂಭೀರತೆಯನ್ನು ಅರ್ಥೈಸಿಕೊಂಡು ಕೆಲಸ ಮಾಡಬೇಕು ಎಂದರು. ಈಗಾಗಲೇ ಚುನಾವಣೆಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಮುಖ್ಯವಾಗಿ ಜಿಲ್ಲೆಯ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಕಾಲೇಜ್‍ಗಳಲ್ಲಿ ಕ್ಯಾಂಪಸ್ ರಾಯಭಾರಿಗಳನ್ನು ಆಯ್ಕೆ ಮಾಡಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗಿದ್ದು ಹಾಗೂ ಬೂತ್ ಮಟ್ಟದ ಜಾಗೃತಿ ಗುಂಪಿನ ರಚನೆಯನ್ನು ಮಾಡಲಾಗಿದೆ ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಕುಮಾರ್ ಮಾತನಾಡಿ ಚುನಾವಣಾಧಿಕಾರಿಯವರು ಮತದಾನ ನಡೆಯುವ ಕ್ಷೇತ್ರದಲ್ಲಿನ ಅಂಕಿ ಅಂಶಗಳನ್ನು ಕಡ್ಡಾಯವಾಗಿ ನೀಡಬೇಕಾಗಿದ್ದು ಯಾವುದೇ ಪ್ರದೇಶದಲ್ಲಿ ಕಡಿಮೆ ಮತದಾನ ನಡೆದರೆ ಅದರ ಕುರಿತು ವಿವರವಾದ ಮಾಹಿತಿ ನೀಡುವಂತೆ ತಿಳಿಸಿದರು. ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸುವವರು ಆದಷ್ಟು ಬೇಗ ಸೇರಿಸಿ ಚುನಾವಣೆಯಲ್ಲಿ ವಿವೇಚನೆಯಿಂದ ಪಾಲ್ಗೊಳ್ಳಲು ಹೇಳಿದರು.

ಸಭೆಯಲ್ಲಿ ಪೊಲೀಸ್ ಆಯುಕ್ತ ಟಿ.ಆರ್ ಸುರೇಶ್, ಮಹಾನಗರ ಪಾಲಿಕೆ ಆಯುಕ್ತ ಮಹಮ್ಮದ್ ನಝೀರ್, ಸಹಾಯಕ ಆಯುಕ್ತ ರೇಣುಕಾಪ್ರಸಾದ್, ಅಪರ ಪೊಲೀಸ್ ವರಿಷ್ಠಾಧಿಕಾರಿ ಸಜೀತ್ ಹಾಗೂ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.