ಕುಂದಾಪುರ: ಕೋಟೇಶ್ವರ ನೇರಂಬಳ್ಳಿ ಸಮೀಪದ ಹಡಿಲು ಭೂಮಿಯೊಂದರಲ್ಲಿ ಸುಟ್ಟ ಸ್ಥಿತಿಯಲ್ಲಿ ಅಪರಿಚಿತ ಶವವೊಂದು ಗುರುವಾರ ಮಧ್ಯಾಹ್ನದ ಸುಮಾರಿಗೆ ಪತ್ತೆಯಾಗಿದ್ದು ಶವದ ಗುರುತು ಪತ್ತೆಯಾಗಿದೆ.
ಕುಂದಾಪುರ ತಾಲೂಕಿನ ವಡೇರಹೋಬಳಿ ಗ್ರಾಮದ ಬಣ್ಸಾಲೆಬೆಟ್ಟು ನಿವಾಸಿ ಶೇಖರ್ ಪೂಜಾರಿ (46) ಎನ್ನುವವರ ಶವ ಇದಾಗಿದೆ.
ಗಾರೆ ಕೆಲಸ ಮಾಡಿಕೊಂಡಿರುವ ಶೇಖರ್ ವಿವಾಹಿತರಾಗಿದ್ದು ಮಕ್ಕಳಿರಲಿಲ್ಲ. ಕುಡಿತದ ಚಟ ಹೊಂದಿದ್ದ ಆತ ಬುಧವಾರ ಸಂಜೆಯ ತನಕವೂ ಮನೆಯಲ್ಲಿಯೇ ಇದ್ದು ಬಳಿಕ ನಾಪತ್ತೆಯಾಗಿದ್ದರು. ಶೇಖರ್ ಪತ್ನಿ ಮನೆಯೂ ಒಂದೇ ಊರಾದ ಕಾರಣ ಶೇಖರ್ ಪತ್ನಿ ಮನೆಯಲ್ಲಿರಬಹುದೆಂದು ಮನೆಯಯವರು ತಿಳಿದರೇ ಮನೆಯಲ್ಲಿರಬಹುದೆಂದು ಪತ್ನಿ ಭಾವಿಸಿದ್ದರೆನ್ನಲಾಗಿದೆ.
ಗುರುವಾರದಂದು ಮನೆ ಸಮೀಪದ ಗದ್ದೆಯಲ್ಲಿ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು ನಾಪತ್ತೆಯಾಗಿದ್ದ ಶೇಖರ್ ಮನೆಯವರಿಗೆ ಕೊಂಚ ಅನುಮಾನ ಬಂದ ಕಾರಣ ಶವ ಪರಿಶೀಲನೆ ಮಾಡಿ ಗುರುತು ಪತ್ತೆಹಚ್ಚಿದ್ದಾರೆ. ಶೇಖರ್ ಬಾಯಲ್ಲಿ ಎದುರು ಭಾಗದ ಎರಡು ಹಲ್ಲು ಇಲ್ಲದಿರುವುದು ಮತ್ತು ಅವರು ಧರಿಸಿದ ಚಪ್ಪಲಿ ಆಧಾರದಲ್ಲಿ ಗುರುತು ಪತ್ತೆಹಚ್ಚಲಾಗಿದೆ. ಶವ ದೊರೆತ ಅನತಿ ದೂರದಲ್ಲಿ ಸೈಕಲ್ ಕೂಡ ಪತ್ತೆಯಾಗಿದೆ.
ಶೇಖರ್ ಅವರಿಗೆ ಯಾವುದೇ ದ್ವೇಷಗಳಿರಲಿಲ್ಲ. ಆದರೇ ಈ ಅಸಹಜ ಸಾವು ಹೇಗೆ ನಡೆಯಿತೆಂಬ ತನಿಖೆಯಾಗಲಿ ಎಂದು ಶೇಖರ್ ಕುಟುಂಬಿಕರು ತಿಳಿಸಿದ್ದಾರೆ. ಶವ ಸಿಕ್ಕ ಸ್ಥಳದಲ್ಲಿ ಇಸ್ಪೀಟ್ ಜುಗಾರಿ ನಡೇಯುತ್ತಿದ್ದು ಶೇಖರ್ ಇಸ್ಫೀಟ್ ಹವ್ಯಾಸ ಹೊಂದಿಲ್ಲ ಎಂದು ಕುಟುಂಬಿಕರು ಹೇಳುತ್ತಾರೆ.
ಮಣಿಪಾಲ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಇಂದು ಶವವನ್ನು ಕುಟುಂಬಿಕರಿಗೆ ಹಸ್ತಾಂತರಿಸಲಾಗಿದ್ದು ಕುಂದಾಪುರ ಪೊಲೀಸರು ವ್ಯಾಪಕ ತನಿಖೆ ನಡೆಸುತ್ತಿದ್ದಾರೆ.
(ವರದಿ- ಯೋಗೀಶ್ ಕುಂಭಾಸಿ)
ಇದನ್ನೂ ಓದಿರಿ: ಕುಂದಾಪುರ: ಹಡಿಲು ಭೂಮಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆ: ಕೊಲೆಯೋ…ಅಸಹಜ ಸಾವೋ? ನಿಗೂಡ!