ಕರಾವಳಿ

ಇಂಟರ್‌ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್‌ನಿಂದ ಬಡ ಕುಟುಂಬಕ್ಕೆ ನೂತನ ಗೃಹ ಹಸ್ತಾಂತರ

Pinterest LinkedIn Tumblr

ಕೋಣಾಜೆ, ಫೆಬ್ರವರಿ.07: ಕೋಣಾಜೆ ಗ್ರಾಮದ ಗ್ರಾಮ ಚಾವಡಿ ಎಂಬಲ್ಲಿ ಇಂಟರ್‌ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನೇತೃತ್ವದಲ್ಲಿ ದಾನಿಗಳ ನೆರವಿನಿಂದ ನಿರ್ಮಿಸಿದ ನೂತನ ಮನೆಯನ್ನು ಫಲಾನುಭವಿಗಳಾದ ಶ್ರೀಮತಿ ನಳಿನಿ ಶೆಟ್ಟಿ ಕುಟುಂಬದವರಿಗೆ ಬುಧವಾರ ನಡೆದ ಸರಳ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.

ಟ್ರಸ್ಟ್ ನ ಉದ್ಘಾಟನೆಯ ನಾಲ್ಕನೇ ವರ್ಷದ ಸವಿ ಸಂಭ್ರಮದ ನೆನಪಿಗಾಗಿ ಬಂಟ ಸಮಾಗಮ 2018 ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮನೆ ನಿರ್ಮಾಣ ನಡೆದಿದ್ದು, ಟ್ರಸ್ಟ್ ಅಧ್ಯಕ್ಷರಾದ ಎ. ಸದಾನಂದ ಶೆಟ್ಟಿ ಅವರು ಮನೆಯನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದರು.

ಸರಕಾರ ಮಾಡಬಹುದಾದ ಕೆಲಸವನ್ನು ಟ್ರಸ್ಟ್ ನವರು ಮಾಡಿರುವುದು ಸ್ವಾಗತಾರ್ಹ. ಗುಣಮಟ್ಟದ ಕಾಮಗಾರಿ ಮೂಲಕ ಉತ್ತಮ ಮನೆ ನಿರ್ಮಿಸಿರುವುದು ಖುಷಿ ಕೊಟ್ಟಿದೆ ಎಂದು ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿಯವರು ಅತಿಥಿಯಾಗಿ ಭಾಗವಹಿಸಿ ಶ್ಲಾಘಿಸಿದರು.

ಪಂಚಾಯತಿ ಅಧ್ಯಕ್ಷ ಶೌಕತ್ ಅಲಿ, ರಾಷ್ಟ್ರೀಯ ವನ್ಯಜೀವಿ ಸಂರಕ್ಷಣಾ ಕೇಂದ್ರದ ನಿರ್ದೇಶಕ ಕೊಡ್ಮಣ್ ಗುತ್ತು ರಾಮಚಂದ್ರ ಶೆಟ್ಟಿ, ಟ್ರಸ್ಟ್ ನ ಮಹಿಳಾ ವಿಭಾಗದ ಅಧ್ಯಕ್ಷರಾದ ಜಯಲಕ್ಷ್ಮಿ ಬಿ. ಶೆಟ್ಟಿ, ಯುವ ವಿಭಾಗದ ಅಧ್ಯಕ್ಷ ದೇವಿಚರಣ್ ಶೆಟ್ಟಿ, ಮನೆ ನಿರ್ಮಾಣದ ಉಸ್ತುವಾರಿ ವಹಿಸಿದ ಸ್ಥಳೀಯ ಮುಂದಾಳು ಕಲ್ಲಿಮಾರು ಪ್ರಸಾದ್ ರೈ, ಉಳ್ಳಾಲ, ಜಪ್ಪಿನಮೊಗರು, ಜಪ್ಪು, ಕಂಕನಾಡಿ ಬಂಟರ ಸಂಘದ ಪದಾಧಿಕಾರಿಗಳು, ಟ್ರಸ್ಟ್ ನ ಸರ್ವ ಸದಸ್ಯರು ಭಾಗವಹಿಸಿದ್ದರು.

ಸಂಘಟನಾ ಕಾರ್ಯದರ್ಶಿ ರಾಜಗೋಪಾಲ್ ರೈ ಕಾರ್ಯಕ್ರಮ ನಿರೂಪಿಸಿದರು. ಉಳ್ಳಾಲ ಬಂಟರ ಸಂಘದ ಅಧ್ಯಕ್ಷರಾದ ತಲಪಾಡಿಗುತ್ತು ಜಿತೇಂದ್ರ ಶೆಟ್ಟಿ ವಂದಿಸಿದರು.

ಜಾತಿ ಮತ ಭೇದವಿಲ್ಲದೆ ಸ್ಥಳೀಯರಿಂದ ಶ್ರಮದಾನ :

ಈ ಮನೆ ನಿರ್ಮಾಣದಲ್ಲಿ ಸ್ಥಳೀಯ 30 ಯುವಕರು ಜಾತಿ ಮತ ಭೇದವಿಲ್ಲದೆ ಆರ್ಥಿಕ ಸಹಾಯ ನೀಡಿದ್ದಲ್ಲದೆ, ಸುಮಾರು ಒಂದೂವರೆ ತಿಂಗಳು ಶ್ರಮದಾನ ಮಾಡಿರುವುದನ್ನು ಟ್ರಸ್ಟ್ ನ ಅಧ್ಯಕ್ಷರು, ಪದಾಧಿಕಾರಿಗಳು ಪ್ರಶಂಸಿಸಿ ಶಾಲು ಹೊದಿಸಿ ಗೌರವ ಸಲ್ಲಿಸಿದರು.

Comments are closed.