ಕರಾವಳಿ

ಪಿಲಿಕುಳ :ವಿದ್ಯಾರ್ಥಿನಿಯ ಮೇಲಿನ ಹಲ್ಲೆ ಪ್ರಕರಣ – ವಿಡಿಯೋ ಅಪ್‌ಲೋಡ್ ಮಾಡಿದ ಆರೋಪಿ ಸೆರೆ

Pinterest LinkedIn Tumblr

ಮಂಗಳೂರು, ಫಬ್ರವರಿ.7: ಇತ್ತೀಚಿಗೆ ಪಿಲಿಕುಳ ನಿಸರ್ಗಧಾಮದ ಮಾನಸ ವಾಟರ್ ಪಾರ್ಕ್ನಲ್ಲಿ ಅನ್ಯಕೋಮಿನ ಯುವಕರೊಂದಿಗೆ ವಿಹರಕ್ಕೆ ಬಂದಿದ್ದ ಕಾಲೇಜು ವಿದ್ಯಾರ್ಥಿನಿಯೋರ್ವಳ ಮೇಲೆ ಹಿಂದೂಪರ ಸಂಘಟನೆಯ ಯುವಕನೊಬ್ಬ ಪೊಲೀಸರ ಸಮ್ಮುಖದಲ್ಲೇ ಹಲ್ಲೆ ನಡೆಸಿದ ಘಟನೆಯ ವೀಡಿಯೊ ಮತ್ತು ವಿದ್ಯಾರ್ಥಿನಿಯರ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಆರೋಪಿಯೊಬ್ಬನನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕೊಟ್ಟಾರದ ಚೌಕಿಯಲ್ಲಿರುವ ಹಣಕಾಸು ಸಂಸ್ಥೆಯೊಂದರ ಉದ್ಯೋಗಿ ಪಚ್ಚನಾಡಿ ನಿವಾಸಿ ವಿಶಾದ್ (34) ಎಂದು ಗುರುತಿಸಲಾಗಿದೆ.

ಜ. 2ರಂದು ಪಿಲಿಕುಳ ನಿಸರ್ಗಧಾಮದ ಮಾನಸ ವಾಟರ್ ಪಾರ್ಕ್ಗೆ ಬಂದಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಮೇಲೆ ಹಿಂದೂಪರ ಸಂಘಟನೆಯ ಕಾರ್ಯಕರ್ತನೊಬ್ಬ ಪೊಲೀಸರ ಎದುರೇ ಹಲ್ಲೆ ನಡೆಸಿದ್ದ. ಇದು ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮೂಡುಶೆಡ್ಡೆ ನಿವಾಸಿಗಳಾದ ಸಂಪತ್ ಶೆಟ್ಟಿ, ವರದಾ ಮತ್ತು ದಿನೇಶ್ ಎಂಬವರನ್ನು ಬಂಧಿಸಿದ್ದರು.

ಈ ಎಲ್ಲಾ ಘಟನೆಗಳ ವಿಡಿಯೋ ಹಾಗೂ ಫೋಟೊವನ್ನು ವಿಶಾದ್ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಹಲ್ಲೆಗೊಳಗಾದ ವಿದ್ಯಾರ್ಥಿನಿಯ ಫೋಟೊ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗಿತ್ತು.

ಈ ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ತನಿಖೆ ನಡೆಸಿದ್ದ ಪೊಲೀಸರು ಮಂಗಳವಾರ ವಿಶಾದ್ ನನ್ನು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Comments are closed.