ಕರಾವಳಿ

ಮೊದಲ ಬಾರಿಗೆ ಎನ್‌ಎಂಪಿಟಿ ಶಿಪ್ಪಿಂಗ್ ಕಂಪನಿ ವಿರುದ್ಧ ಧ್ವನಿ ಎತ್ತಿದ ಕಾರ್ಮಿಕರು : 8ನೇ ದಿನಕ್ಕೆ ಕಾಲಿರಿಸಿದ ಮುಷ್ಕರ

Pinterest LinkedIn Tumblr

ಮಂಗಳೂರು, ಫೆ. 5: ನವಮಂಗಳೂರು ಬಂದರು ಮಂಡಳಿಯ ( ಎನ್ ಎಮ್ ಪಿ ಟಿ) ಶಿಪ್ಪಿಂಗ್ ಕಂಪನಿ ಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರ ಸೋಮವಾರ 8ನೇ ದಿನಕ್ಕೆ ಕಾಲಿರಿಸಿದೆ.

ಕನಿಷ್ಟ ವೇತನ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಎಐಸಿಸಿಟಿಯು ಮತ್ತು ಅಖಿಲ ಭಾರತ ಬಂದರು ಕಾರ್ಮಿಕರ ಒಕ್ಕೂಟ ಸಹಭಾಗಿತ್ವದಲ್ಲಿ ಜ. 29ರಿಂದ ಇದೇ ಮೊದಲ ಬಾರಿಗೆ ಶಿಪ್ಪಿಂಗ್ ಕಂಪನಿಗಳ ಕಾರ್ಮಿಕರು ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆಡಳಿತದ ವಿರುದ್ಧ ಧ್ವನಿ ಎತ್ತಿ ಮುಷ್ಕರ ನಿರತರಾಗಿದ್ದಾರೆ.

ಎಲ್ಲ ಶಿಪ್ಪಿಂಗ್ ಕಂಪನಿ ಕಾರ್ಮಿಕರಿಗೂ ಕೇಂದ್ರ ಸರಕಾರ ಜಾರಿಗೊಳಿಸಿರುವ ಕನಿಷ್ಟ ವೇತನ ದೊರೆಯಬೇಕು. ಹೆಚ್ಚುವರಿ ಕೆಲಸಕ್ಕೆ ಗಂಟೆಗೆ ತಲಾ 150 ರೂ. ನೀಡಬೇಕು. ಪ್ರತಿ ವರ್ಷ ಕನಿಷ್ಟ ವೇತನದ ಶೇ. 20 ಬೋನಸ್ ನೀಡಬೇಕು. ಬಂದರಿನ ನೇರ ಕಾರ್ಮಿಕರಿಗೆ ಸಿಗುವಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಎಲ್ಲ ಕಾರ್ಮಿಕರಿಗೂ ಕೆಲಸ ಖಾಯಂ ಆಗಿರಬೇಕು, ಸುಳ್ಳು ಕಾರಣ ನೀಡಿ ಕೆಲಸದಿಂದ ವಜಾ ಮಾಡಬಾರದು ಎಂಬ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಎನ್‌ಎಂಪಿಟಿ ಶಿಪ್ಪಿಂಗ್ ಕಂಪನಿಯ ಕಾರ್ಮಿಕರು ಮುಷ್ಕರ ನಡೆಸುತ್ತಿದ್ದಾರೆ.

ಎಐಸಿಸಿಟಿಯು ಅಖಿಲ ಭಾರತ ಕಾರ್ಯದರ್ಶಿ ಶಂಕರ್ ಮಾತನಾಡಿ,”ಸುಮಾರು 1000ಕ್ಕೂ ಅಧಿಕ ಮಂದಿ ಕಾರ್ಮಿಕರು ಎನ್‌ಎಂಪಿಟಿ ಪ್ರವೇಶ ದ್ವಾರದ ಬಳಿ ಮುಷ್ಕರ ನಿರತರಾಗಿದ್ದರೂ, ಎನ್‌ಎಂಪಿಟಿ ಅಧಿಕಾರಿಗಳು ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೆ ಕಾರ್ಮಿಕರ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

”ಶಿಪ್ಪಿಂಗ್ ಕಂಪನಿಗಳ ಕಾರ್ಮಿಕರು ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಎನ್‌ಎಂಪಿಟಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮುಷ್ಕರ ನಿರತರಾಗಿದ್ದಾರೆ. ಕಾರ್ಮಿಕರಲ್ಲಿ ಬಹುಪಾಲು ಸ್ಥಳೀಯರಾಗಿದ್ದಾರೆ. ಈ ನಡುವೆ ಕೆಲ ಶಿಪ್ಪಿಂಗ್ ಕಂಪನಿಗಳ ಮಾಲಕರು ಬಿಹಾರ, ಬಳ್ಳಾರಿ ಮೊದಲಾದ ಕಡೆಗಳಿಂದ ಕಾರ್ಮಿಕರನ್ನು ಕರೆದುಕೊಂಡು ಬಂದು ಕೆಲಸ ಮಾಡಿಸಲು ಪ್ರಯತ್ನಿಸುವ ಮೂಲಕ ಕಾರ್ಮಿಕ ವಿರೋಧಿ ಹಾಗೂ ಕಾರ್ಖಾನೆ ವಿವಾದ ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಇದನ್ನು ನಾವು ವಿರೋಧಿಸುತ್ತೇವೆ” ಎಂದು ಅವರು ಹೇಳಿದ್ದಾರೆ.

”ಕಾರ್ಮಿಕರ ಸಮಸ್ಯೆಗಳನ್ನು ಅರಿತು ಪರಿಹರಿಸಬೇಕಾದ ಎನ್‌ಎಂಪಿಟಿ ಅಧಿಕಾರಿಗಳು ಶಿಪ್ಪಿಂಗ್ ಕಂಪನಿಗಳ ಮಾಲಕರ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ನಮ್ಮ ಮನವಿಯನ್ನು ಕೂಡಾ ತೆಗೆದುಕೊಳ್ಳುವ ಸೌಜನ್ಯ ತೋರುತ್ತಿಲ್ಲ. ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗೂ ದೂರು ನೀಡಲಾಗಿದೆ. ಸಮಸ್ಯೆಯನ್ನು ಬಗೆಹರಿಸುವಂತೆ ಸಂಘಟನೆ ವತಿಯಿಂದ ಇಂದು ಕೇಂದ್ರದ ಶಿಪ್ಪಿಂಗ್ ಸಚಿವಾಲಯಕ್ಕೆ ಪತ್ರ ಬರೆಯಲಾಗುತ್ತಿದೆ” ಎಂದು ಶಂಕರ್ ತಿಳಿಸಿದ್ದಾರೆ.

ಕಾರ್ಮಿಕ ಮುಖಂಡ ದಿವಾಕರ್ ಮಾತನಾಡಿ,”ಕೆಲ ಶಿಪ್ಪಿಂಗ್ ಕಂಪನಿಗಳ ಮಾಲಕರ ನೇತೃತ್ವದಲ್ಲಿ ಕಾರ್ಮಿಕರನ್ನು ಅಪಹರಿಸುವ ಪ್ರಯತ್ನ, ಕಾರ್ಮಿಕರಿಗೆ ಬೆದರಿಕೆ ನೀಡುವ ಕುಕೃತ್ಯಗಳೂ ನಡೆಯು ತ್ತಿವೆ. ಫೆ. 6ರಂದು ಕೇಂದ್ರ ಕಾರ್ಮಿಕ ವಿಭಾಗದ ಉಪ ಆಯುಕ್ತರು ನಗರದ ಕೇಂದ್ರ ರೈಲ್ವೇ ನಿಲ್ದಾಣದ ಬಳಿಯ ಸಹಾಯಕ ಕಾರ್ಮಿಕರ ಆಯುಕ್ತರ ಕಚೇರಿಯಲ್ಲಿ ಸಭೆ ನಡೆಸಲಿದ್ದು, ಸಭೆಯಲ್ಲಿ ನಮ್ಮ ಸಮಸ್ಯೆ ಬಗೆಹರಿಯುವ ಭರವಸೆ ಹೊಂದಿದ್ದೇವೆ. ಇಲ್ಲವಾದಲ್ಲಿ ನಮ್ಮ ಮುಷ್ಕರ ಮುಂದುವರಿಸಲಿದ್ದೇವೆ” ಎಂದು ತಿಳಿಸಿದ್ದಾರೆ.

Comments are closed.