ಕರಾವಳಿ

ರಾಜೀನಾಮೆ ನೀಡಿ ಕುಂದಾಪುರ ಕ್ಷೇತ್ರವನ್ನು ಅನಾಥವಾಗಿಸಿದ ಹಾಲಾಡಿ: ರಾಕೇಶ್ ಮಲ್ಲಿ ಆರೋಪ

Pinterest LinkedIn Tumblr

ಕುಂದಾಪುರ: 2018-19ರ ಬಜೆಟ್ ಮಂಡನೆಯಾಗುತ್ತಿರುವ ಇಂತಹ ಮಹತ್ವದ ಸಂದರ್ಭದಲ್ಲಿ ಕುಂದಾಪುರ ಕ್ಷೇತ್ರಕ್ಕೆ ಅಗತ್ಯದ ಅನುದಾನವನ್ನು ಮಂಜೂರು ಮಾಡಿಸುವ ಮತ್ತು ಕ್ಷೇತ್ರದ ಹಲವಾರು ಜ್ವಲಂತ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಅಪೂರ್ವ ಅವಕಾಶ ಇದ್ದಾಗ್ಯೂ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಕ್ಷೇತ್ರವನ್ನು ಅನಾಥಗೊಳಿಸಿದ್ದಾರೆ ಎಂದು ರಾಜ್ಯ ಇಂಟಕ್ ಅಧ್ಯಕ್ಷ ರಾಕೇಶ್ ಮಲ್ಲಿ ಹೇಳಿದ್ದಾರೆ.

(ರಾಜ್ಯ ಇಂಟಕ್ ಅಧ್ಯಕ್ಷ ರಾಕೇಶ್ ಮಲ್ಲಿ)

ಈ ಹಿಂದೆ ೨೦೧೨ರಲ್ಲಿ ಅವಧಿಗೆ ಮುಂಚಿತವಾಗಿ ಹಾಲಾಡಿ ರಾಜೀನಾಮೆ ನೀಡಿರುವ ಕಾರಣಕ್ಕೆ ರಾಜ್ಯ ಸರಕಾರದಿಂದ ಬರಬಹುದಾಗಿದ್ದ ಅನುದಾನದಿಂದ ಕುಂದಾಪುರ ಕ್ಷೇತ್ರ ವಂಚಿತವಾಗಿತ್ತು. ಕಳೆದ ವಿಧಾನಸಭಾ ಚುನಾವಣೆಯ ವೇಳೆಯಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ವೇಳೆ ಮತ್ತೊಮ್ಮೆ ಬಿಜೆಪಿಗೆ ಸೇರದೆ ಕ್ಷೇತ್ರವನ್ನು ಜಾತ್ಯಾತೀತವಾಗಿ ಪ್ರತಿನಿಧಿಸುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ ಇದೀಗ ಮತ್ತೆ ಬಿಜೆಪಿ ಸೇರುವ ಕಾರಣಕ್ಕೆ ಮತ ನೀಡಿ ಚುನಾಯಿಸಿದ ಜನರನ್ನು ಕಡೆಗಣಿಸಿ ತನ್ನ ಸ್ವಾರ್ಥ ಸಾಧನೆಗಾಗಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಇವರಿಗೆ ಮತ ನೀಡಿ ಚುನಾಯಿಸಿದ ಕ್ಷೇತ್ರದ ಸರ್ವ ಜಾತಿ, ಧರ್ಮಗಳ ಮತದಾರರಿಗೆ ಮಾಡಿದ ದ್ರೋಹವಾಗಿದೆ.

ವಸತಿ ಕಮಿಟಿ, ನಿವೇಶನ ಕಮಿಟಿ, ಆಶ್ರಯ ಕಮಿಟಿ, ಅಕ್ರಮ-ಸಕ್ರಮ ಮುಂತಾದ ಕಮಿಟಿಗಳಲ್ಲಿ ಕ್ಷೇತ್ರದ ಸಾವಿರಾರು ಅರ್ಜಿಗಳು ಈತನಕ ಇತ್ಯರ್ಥವಾಗದೆ ಬಾಕಿ ಇದ್ದಾಗ್ಯೂ ಆ ಕಮಿಟಿಗಳ ಅಧ್ಯಕ್ಷರಾಗಿ ಅರ್ಜಿಗಳನ್ನು ಇತ್ಯರ್ಥಗೊಳಿಸುವ, ಜನರ ಸಮಸ್ಯೆಗಳನ್ನು ಪರಿಹರಿಸುವ ಅವಕಾಶ ಮತ್ತು ಅಧಿಕಾರ ಇನ್ನೂ ನಾಲ್ಕು ತಿಂಗಳು ಇದ್ದಾಗ್ಯೂ ಆ ಕುರಿತು ಎಳ್ಳಷ್ಟು ಚಿಂತಿಸದೆ ರಾಜೀನಾಮೆ ನೀಡಿರುವುದು ಕ್ಷೇತ್ರದ ಮತದಾರರ ಸಮಸ್ಯೆಗಳ ಕುರಿತು ಅವರಿಗಿರುವ ಅನಾದರವನ್ನು ಎತ್ತಿ ತೋರಿಸುತ್ತದೆ. ಕುಂದಾಪುರ ವಿಧಾನಸಭಾ ಕ್ಷೇತ್ರ ಸಿ‌ಆರ್‌ಝಡ್ ಸಮಸ್ಯೆಯಿಂದ ಬಳಲುತ್ತಿದ್ದು ಕ್ಷೇತ್ರದ ಜನರು ಗೋವಾ ಮತ್ತು ಕೇರಳ ಮಾದರಿಯಲ್ಲಿ ಸಿ‌ಆರ್‌ಝಡ್ ವ್ಯಾಪ್ತಿಯನ್ನು ೫೦ ಮೀಟರ್‌ಗೆ ಇಳಿಸುವ ಕುರಿತು ಬೇಡಿಕೆ ಇಟ್ಟಾಗ್ಯೂ ಸ್ಥಳೀಯ ಶಾಸಕರು ಆ ಕುರಿತು ಈತನಕ ಯಾವುದೇ ಪ್ರಯತ್ನ ನಡೆಸಿಲ್ಲ. ಡೀಮ್ಡ್ ಫಾರೆಸ್ಟ್ ವ್ಯಾಪ್ತಿಗೆ ಈ ಕ್ಷೇತ್ರದ ವಸತಿ ಪ್ರದೇಶವನ್ನು ಸೇರಿಸಿರುವುದರ ಕುರಿತು ಕೂಡಾ ಚಕಾರವೆತ್ತದಿರುವುದು ನಿಜಕ್ಕೂ ಖೇದನೀಯ.

ಉಡುಪಿ ಬಿಟ್ಟರೆ ಕುಂದಾಪುರ ಅತೀ ಹೆಚ್ಚು ವಾಹನಗಳ ನೋಂದಣಿ ಮಾಡುವ ತಾಲೂಕಾಗಿದ್ದು ಇಲ್ಲಿ ಎ‌ಆರ್‌ಟಿ‌ಓ ಕಛೇರಿಯ ಸ್ಥಾಪನೆಯ ಕುರಿತು ಹಲವಾರು ವರ್ಷಗಳಿಂದ ಬೇಡಿಕೆಯಿದೆ. ಕುಂದಾಪುರದಲ್ಲಿ ಈ ಹಿಂದೆ ಮಹಿಳಾ ಪೊಲೀಸ್ ಠಾಣೆ ಕಾರ್ಯಚರಿಸುತ್ತಿದ್ದು ಇದೀಗ ಈ ಠಾಣೆ ಬೇರೊಂದು ತಾಲೂಕಿಗೆ ಸ್ಥಳಾಂತರಗೊಂಡಿದೆ. ಹೀಗೆ ಹಲವಾರು ರೀತಿಯ ಸಮಸೆಗಳಿಂದ ಈ ಕ್ಷೇತ್ರ ಪೀಡಿತವಾಗಿದ್ದರೂ ಆ ಸಮಸ್ಯೆಗಳ ಪರಿಹಾರದ ಕುರಿತಾಗಿ ಯೋಚಿಸದೆ ಏಕಾ‌ಎಕಿ ವಿನಾಕಾರಣ ರಾಜೀನಾಮೆ ನೀಡಿರುವುದು ನೋವಿನ ವಿಚಾರವಾಗಿದೆ. ಮತ್ತು ಚುನಾಯಿತ ಪ್ರತಿನಿಧಿಯೊಬ್ಬ ಈ ರೀತಿಯಾಗಿ ಕ್ಷುಲ್ಲಕ ಕಾರಣಗಳಿಗಾಗಿ ಪದೇ ಪದೇ ರಾಜೀನಾಮೆ ನೀಡುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments are closed.