ಕರಾವಳಿ

ದ.ಕ. ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ವರ್ಗಾವಣೆ : ನೂತನ ಎಸ್ಪಿಯಾಗಿ ಎನ್ಕೌಂಟರ್ ಸ್ಪೆಷಲಿಸ್ಟ್ ಖ್ಯಾತಿಯ ಐಪಿಎಸ್ ಅಧಿಕಾರಿ ಡಾ.ರವಿಕಾಂತೇ ಗೌಡ ನೇಮಕ

Pinterest LinkedIn Tumblr

                               ಡಾ.ರವಿಕಾಂತೇ ಗೌಡ                                             ಸುಧೀರ್ ಕುಮಾರ್ ರೆಡ್ಡಿ

ಮಂಗಳೂರು, ಜನವರಿ,20 : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಸುಧೀರ್ ಕುಮಾರ್ ರೆಡ್ಡಿ ಅವರು ವರ್ಗಾವಣೆ ಗೊಂಡಿದ್ದಾರೆ. ಕರ್ನಾಟಕ ಸರ್ಕಾರ ಸುಧೀರ್ ಕುಮಾರ್ ರೆಡ್ಡಿ ಅವರನ್ನು ವರ್ಗಾವಣೆ ಮಾಡಿ ಶನಿವಾರ ಆದೇಶ ಹೊರಡಿಸಿದೆ.

ಸುಧೀರ್ ಕುಮಾರ್ ರೆಡ್ಡಿ ಅವರು ಜೂನ್ 21, 2017ರಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಕರ್ತವ್ಯ ನಿರ್ವಾಹಿಸುತ್ತಿದ್ದ ಅವರನ್ನು ಇದೀಗ ಏಕಾಏಕಿ ಬೆಳಗಾವಿ ಜಿಲ್ಲೆಗೆ ( ಎಸ್‌ಪಿಯಾಗಿ) ವರ್ಗಾಯಿಸಲಾಗಿದೆ.

ದ.ಕ.ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಐಪಿಎಸ್ ಅಧಿಕಾರಿ ಡಾ.ರವಿಕಾಂತೇ ಗೌಡ ಅವರನ್ನು ನೇಮಿಸಲಾಗಿದೆ. ಈ ಮೊದಲು ಬೆಳಗಾವಿ ಜಿಲ್ಲೆಯಲ್ಲಿ ಎಸ್‌ಪಿಯಾಗಿದ್ದ ಇವರು ಪ್ರಸ್ತುತ ಮಂಡ್ಯ ಜಿಲ್ಲಾ ಎಸ್ಪಿಯಾಗಿ ಕಾರ್ಯಾನಿರ್ವಹಿಸುತ್ತಿದ್ದರು. ಇದೀಗ ಡಾ. ರವಿಕಾಂತೇ ಗೌಡ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ದಕ್ಷಿಣ ಕನ್ನಡ ಎಸ್ಪಿಯಾಗಿ ನೇಮಿಸಲಾಗಿದೆ.

‘ಎನ್ಕೌಂಟರ್ ಸ್ಪೆಷಲಿಸ್ಟ್’ ಖ್ಯಾತಿಯ ಡಾ.ರವಿಂಕಾಂತೇ ಗೌಡ ಅವರು ಕೋಮು ಗಲಭೆ ಹಾಗೂ ಭೂಗತ ರೌಡಿಗಳ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಬಹಳ ಪ್ರಸಿದ್ಧರಾಗಿರಾಗಿದ್ದಾರೆ. ಬೆಂಗಳೂರಿನಲ್ಲಿ ಡಿಸಿಪಿಯಾಗಿದ್ದಾಗ ಮೂರು ಮಂದಿ ಕುಖ್ಯಾತ ರೌಡಿಗಳನ್ನು ಎನ್ಕೌಂಟರ್‌ ನಡೆಸಿದ ಇವರ ಕಾರ್ಯಾಚಟುವಟಿಕೆ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತವಾಗಿತ್ತು

ಜಿಲ್ಲೆಯ ದಕ್ಷ ಅಧಿಕಾರಿಗಳ ವರ್ಗಾವಣೆ :

ಬಂಟ್ವಾಳದ ಕಲ್ಲಡ್ಕದಲ್ಲಿ ಚೂರಿ ಇರಿತ ಪ್ರಕರಣ ನಡೆದ ಸಂದರ್ಭದಲ್ಲಿ ಆಗಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ರಾವ್ ಬೊರಸೆ ಅವರನ್ನು ತನ್ನ ಕಾರ್ಯಕರ್ತರ ಮುಂದೆ ನಿಲ್ಲಿಸಿ ಆರ್.ಎಸ್.ಎಸ್ ಮುಖಂಡ ಪ್ರಭಾಕರ್ ಭಟ್ ಸೇರಿದಂತೆ ಇನ್ನಿತರ ಹಿಂದೂ ಸಂಘಟನೆಯ ಮುಖಂಡರನ್ನು ಬಂಧಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಆದೇಶ ನೀಡಿದ್ದ ವಿಡಿಯೋ ವೈರಲ್ ಆಗಿತ್ತು.

ನಂತರ ಬಂಟ್ವಾಳದಲ್ಲಿ ಆರ್.ಎಸ್.ಎಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆಯಾದ ಸಂದರ್ಭದಲ್ಲಿ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಎಂದೇ ಖ್ಯಾತಿ ಪಡೆದಿದ್ದ ಭೂಷಣ ರಾವ್ ಬೊರಸೆಯವರನ್ನು ವರ್ಗಾವಣೆ ಮಾಡಲಾಗಿತ್ತು. ಬಳಿಕ ಸುಧೀರ್ ಕುಮಾರ್ ರೆಡ್ಡಿ ಅವರನ್ನು ನೇಮಿಸಲಾಗಿತ್ತು.

ಅತೀ ಸೂಕ್ಷ್ಮ ಪರಿಸ್ಥಿತಿಯಲ್ಲಿ ಜಿಲ್ಲೆಗ ಆಗಮಿಸಿದ್ದ ಸುಧೀರ್ ಕುಮಾರ್ ರೆಡ್ಡಿ ಜಿಲ್ಲೆಯಲ್ಲಿ ಕಟ್ಟು ನಿಟ್ಟಿನ ಕ್ರಮಗಳಿಂದ ಕಾನೂನ ಸುವ್ಯವಸ್ಥೆಯನ್ನು ಸಂಪೂರ್ಣ ನಿಯಂತ್ರಣಕ್ಕೆ ತಂದಿದ್ದರು. ಆರ್.ಎಸ್.ಎಸ್ ಕಾರ್ಯಕರ್ತ ಶರತ್ ಮಡಿವಾಳ ಅವರ ಅತ್ಯಂತ ಜಟಿಲ ಪ್ರಕರಣವನ್ನು ಭೇದಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಈ ನಡುವೆ ಜಿಲ್ಲೆಯಲ್ಲಿ ಶಾಂತಿ ಭಂಗಕ್ಕೆ ಕಾರಣವಾಗುತ್ತಿದ್ದ ಅಪರಾಧಿಗಳನ್ನು ಗಡಿಪಾರು ಮಾಡು ಪ್ರಕ್ರಿಯೆ ಆರಂಭಿಸಿದ್ದರು. ಇದು ಚುನಾವಣೆ ಹೊಸ್ತಿಲಲ್ಲಿ ಕೆಲ ರಾಜಕಾರಣಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವರ ದೂರವಾಣಿ ಕರೆಗಳನ್ನು ಸುಧೀರ್ ಕುಮಾರ್ ರೆಡ್ಡಿ ಸ್ವೀಕರಿಸುತ್ತಿರಲಿಲ್ಲ ಎಂಬ ದೂರು ಕೂಡ ಕೇಳಿಬಂದಿತ್ತು. ಇದರಿಂದಾಗಿ ಜಿಲ್ಲೆಯ ಪ್ರಭಾವಿ ಸಚಿವರೊಬ್ಬರು ಕುಪಿತರಾಗಿದ್ದರು ಎನ್ನಲಾಗಿದೆ.ಈ ಹಿನ್ನೆಲೆಯಲ್ಲಿ ಸುಧೀರ್ ಕುಮಾರ್ ರೆಡ್ಡಿ ಅವರನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಲಾಗಿದೆ ಎಂಬ ಮಾತು ಕೇಳಿಬರುತ್ತಿದೆ.

Comments are closed.