ಕರಾವಳಿ

ಗುರುವಾರ ಉಡುಪಿ ಶ್ರೀಕೃಷ್ಣ ಮಠದಲ್ಲಿ ಪರ್ಯಾಯೋತ್ಸವ; ಸಜ್ಜುಗೊಂಡಿದೆ ಕೃಷ್ಣನಗರಿ

Pinterest LinkedIn Tumblr

ಉಡುಪಿ: ಪ್ರತಿ ಎರಡು ವರ್ಷಗಳಿಗೊಮ್ಮೆ ಶ್ರೀಕೃಷ್ಣ ಮಠದಲ್ಲಿ ಜರಗುವ ಪರ್ಯಾಯೋತ್ಸವ ಗುರುವಾರ ಬೆಳಗ್ಗೆ ನಡೆಯಲಿದೆ. 1522ರಲ್ಲಿ ಆರಂಭಗೊಂಡ ಎರಡು ವರ್ಷಗಳ ಪರ್ಯಾಯ 31 ಬಾರಿ ನಡೆದಿದೆ. ಈಗ 32ನೇ ಪರ್ಯಾಯ ಚಕ್ರ ನಡೆಯಲಿದೆ.

ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ತಮ್ಮ ಎರಡನೆಯ ಪರ್ಯಾಯ ಪೂಜೆಯ ಸರತಿಯಲ್ಲಿದ್ದಾರೆ. ಗುರುವಾರ ಮುಂಜಾನೆ ಕಾಪು ದಂಡತೀರ್ಥದಲ್ಲಿ ಸ್ನಾನ ಮಾಡಿ ಜೋಡುಕಟ್ಟೆಯಿಂದ ಭವ್ಯ ಮೆರವಣಿಗೆಯಲ್ಲಿ ಇತರ ಮಠಾಧೀಶರೊಂದಿಗೆ ಸಾಗಿ ಬರಲಿದ್ದಾರೆ. ಬೆಳಗ್ಗೆ ಶ್ರೀಕೃಷ್ಣ ದರ್ಶನ ಮಾಡಿ ಪೂಜಾಧಿಕಾರವನ್ನು ವಹಿಸಿಕೊಳ್ಳುವ ಶ್ರೀಪಾದರು ಬಳಿಕ ದರ್ಬಾರ್‌ ಸಭೆಯಲ್ಲಿ ಆಶೀರ್ವಚನ ನೀಡುವರು. ಪಲಿಮಾರು ಶ್ರೀಪಾದರು ಗರ್ಭಗುಡಿಗೆ ಚಿನ್ನದ ತಗಡು ಹೊದೆಸುವುದು, ನಿರಂತರ ಭಜನೆ, ನಿತ್ಯ ಲಕ್ಷ ತುಳಸಿ ಅರ್ಚನೆ, ಚಿಣ್ಣರ ಸಂತರ್ಪಣೆ ಯೋಜನೆಯ ವಿಸ್ತರಣೆ ಮೊದಲಾದ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ.

ಉಡುಪಿಯ ಶ್ರೀಕೃಷ್ಣಪೂಜಾ ನಿರ್ವಹಣೆಗಾಗಿ ಗುರುವಾರ ಸರ್ವಜ್ಞ ಪೀಠವನ್ನೇರಲಿರುವ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರ ದ್ವಿತೀಯ ಶ್ರೀಕೃಷ್ಣಪೂಜಾ ಪರ್ಯಾಯಕ್ಕೆ ಕೃಷ್ಣನಗರಿ ಸಜ್ಜುಗೊಂಡಿದೆ.  ವೈಭವದಿಂದ ಸಂಪನ್ನಗೊಳ್ಳಲಿರುವ ಪರ್ಯಾಯೋತ್ಸವ ವೀಕ್ಷಿಸಲು ರಾಜ್ಯದ ವಿವಿಧೆಡೆಗಳಿಂದ ಪ್ರವಾಸಿಗರು ಈಗಾಗಲೇ ಆಗಮಿಸಿದ್ದು, ಬಹುತೇಕ ಹೊಟೇಲ್‌ಗ‌ಳ ವಸತಿಗೃಹಗಳು ಭರ್ತಿಗೊಂಡಿವೆ.

Comments are closed.