ಕರಾವಳಿ

ಕರಾವಳಿಯಲ್ಲಿ ಸಂಘಟನೆಗಳು ಚುರುಕಾಗಿರುವುದೇ ಗಲಭೆಗಳಿಗೆ ಕಾರಣ: ಗೃಹಸಚಿವ ರಾಮಲಿಂಗ ರೆಡ್ಡಿ

Pinterest LinkedIn Tumblr

ಉಡುಪಿ: ಕರಾವಳಿಯಲ್ಲಿ ಸಾಮರಸ್ಯ ಕದಡುವ ಕೆಲಸವಾಗುತ್ತಿದೆ. ಒಬ್ಬರು ಪಿ.ಎಫ್.ಐ ಮೇಲೆ ಆರೋಪ ಮಾಡಿದರೇ ಇನ್ನು ಕೆಲವರು ಆರ್.ಎಸ್.ಎಸ್. ಸಂಘಟನೆ ನಿಷೇಧ ಮಾಡುವ ಹೇಳಿಕೆ ನೀಡುತ್ತಿದ್ದಾರೆ. ಆದರೆ ಪರಸ್ಪರ ಆರೋಪ ಪ್ರತ್ಯಾರೋಪ, ನಿಷೇಧದ ಮಾತುಕತೆಗಳಾಗುತ್ತಿದೆ. ನಿಷೇಧ ಮಾಡಿದ್ರೆ ಎಲ್ಲವನ್ನೂ ಮಾಡಬೇಕಿದೆ. ರಾಜ್ಯದಲ್ಲಿ ಶಾಂತಿ ಕದಡುವ ವಾತಾವರಣ ಸೃಷ್ಟಿಸುವ ಎಲ್ಲಾ ಸಂಘಟನೆ ನಿಷೇಧ ಮಾಡುವುದು ಉತ್ತಮ ಎಂಬುದು ಚಿಂತನೆಯಾಗಿದೆ ಎಂದು ರಾಜ್ಯ ಗೃಹ ಸಚಿವ ರಾಮಲಿಂಗ ರೆಡ್ಡಿ ಹೇಳಿದ್ದಾರೆ.

ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು ಆರ್.ಎಸ್.ಎಸ್. ಸಂಘಟನೆ ಉಗ್ರಗಾಮಿ ಎಂಬ ಸಿ‌ಎಂ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಲ್ಲದೇ ಸಿ‌ಎಂ ಸರಿಯಾಗಿಯೇ ಹೇಳಿದ್ದಾರೆ ಎಂದರು.

ಆರ್.ಎಸ್.ಎಸ್. ಉಗ್ರಗಾಮಿ ಸಂಘಟನೆ ಎಂಬ ಹೇಳಿಕೆ ಬಳಿಕ ಸಂಸದೆ ಶೋಭಾ ಕರಂದ್ಲಾಜೆ ಜೈಲ್ ಭರೋ ಎಚ್ಚರಿಕೆ ನೀಡಿದ್ದರ ಕುರಿತು ಪ್ರತಿಕ್ರಿಯಿಸಿದ ಸಚಿವರು, ‘ಎಲ್ಲರಿಗೂ ಪ್ರತಿಭಟನೆ ಮಾಡುವ ಹಕ್ಕಿದೆ. ಜೈಲ್ ಭರೋ ಮಾಡಬೇಡಿ ಎಂದು ನಾವೇನು ಹೇಳಲ್ಲ. ಆದರೇ ಶಾಂತಿ, ಕಾನೂನು ಸುವ್ಯವಸ್ಥೆ ಭಂಗ ಮಾಡಬಾರದು. ಪ್ರಸ್ತುತ ಬಿಜೆಪಿಯಲ್ಲಿರುವವರ ಯಾವ ಪೂರ್ವಿಕರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ, ಜೈಲಿಗೂ ಹೋಗಿಲ್ಲ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ವ್ಯವಸ್ಥೆಯಿದು ಎಂದರು.

ಸಿ‌ಎಂ ಹಲವು ಬಾರಿ ಉಡುಪಿಗೆ ಬಂದಿದ್ದು ಕಳೆದ ವಾರ ಬಂದಾಗಲೂ ಉಡುಪಿಯಲ್ಲೇ ವಾಸ್ತವ್ಯ ಹೂಡಿದರೂ ಶ್ರೀ ಕ್ರಷ್ಣ ಮಠಕ್ಕೆ ಭೇಟಿ ನೀಡಿಲ್ಲ ನೀವಾದರೂ ದೇವಳಕ್ಕೆ ಹೋಗುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ನಾನು ದೇವಸ್ಥಾನ, ಮಸೀದಿ, ಚರ್ಚ್, ಜೈನ ಮಂದಿರ ಸೇರಿದಂತೆ ನನಗೆ ಆಹ್ವಾನ ನೀಡಿದಲ್ಲಿ ತೆರಳುತ್ತೇನೆ. ಈ ಬಾರಿ ಮಠಕ್ಕೆ ತೆರಳಲ್ಲ ಎಂದರು. ಮುಖ್ಯಮಂತ್ರಿಗಳು ಮಠಕ್ಕೆ ತೆರಳದ ಬಗ್ಗೆ ಅವರನ್ನೇ ಕೇಳಬೇಕು ಎಂದರು.

ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಪೊಲೀಸ್ ಇಲಾಖೆ ಬಲಿಷ್ಟವಾಗಿದೆ. ಆದರೂ ಕೂಡ ಪಿ.ಎಫ್.ಐ, ಆರ್.ಎಸ್.ಎಸ್., ಭಜರಂಗದಳ, ಜಾಗರಣ ವೇದಿಕೆಯಂತಹ ಕೆಲವು ಸಂಘಟನೆಗಳು ಈ ಭಾಗದಲ್ಲಿ ಚುರುಕಾಗಿದೆ. ಅವರ ಚುರುಕುತನ ಕಡಿಮೆಯಾದರೆ ಅಹಿತಕರ ಘಟನೆಗಳಿಗೆ ಕಡಿವಾಣ ಬಿದ್ದಂತಾಗುತ್ತೆ. ಶಾಂತಿ ಕದಡುವುದು, ಗಲಾಟೆಯನ್ನು ಜನರು ಸಹಿಸೊಲ್ಲ. ಈಗಿನ ಜನರು ಬಯಸುವುದು ಶಾಂತಿ ಹಾಗೂ ಸುವ್ಯವಸ್ಥೆ, ಸಹಬಾಳ್ವೆ. ಸಂಘಟನೆಗಳ ದರ್ಬಾರ್ ಹೀಗೆ ಜಾಸ್ಥಿಯಾದ್ರೇ ಮುಂದೊಂದು ದಿನ ಜನತೆಯೇ ಅಂತವರನ್ನು ತಿರಸ್ಕರಿಸುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿ, ದ್ವೇಷದ ಬೀಜ ಬಿತ್ತುವಂತಹ ಕಿಡಿಗೇಡಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

Comments are closed.