
File Photo
ಮಂಗಳೂರು, ಜನವರಿ 11: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನವೊಂದು ಟೇಕ್ ಆಫ್ ವೇಳೆ ನಡೆಯಲಿದ್ದ ಭಾರೀ ಅವಘಡವೊಂದು ಏರ್ ಟ್ರಾಫಿಕ್ ಕಂಟ್ರೋಲರ್ ಅವರ ಸಕಾಲಿಕ ಸಮಯಪ್ರಜ್ಞೆಯಿಂದ ಕೂದಲೆಳೆ ಅಂತರದಲ್ಲಿ ತಪ್ಪಿದೆ ಎನ್ನಲಾಗಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ವಿಮಾನ ಟೇಕ್ ಆಫ್ ವೇಳೆ ರನ್ ವೇನಲ್ಲಿ ಲಗೇಜ್ ಟ್ರಕ್ ಕಾಣಿಸಿಕೊಂಡಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮಂಗಳೂರು-ಮುಂಬೈ ಜೆಟ್ ಏರ್ವೇಸ್ ವಿಮಾನ ಹಾರಾಟ ಆರಂಭಿಸುವ ವೇಳೆ ಈ ಅಚಾತುರ್ಯ ಸಂಭವಿಸಿದ್ದು, ಏರ್ ಟ್ರಾಫಿಕ್ ಕಂಟ್ರೋಲರ್ ಅವರ ಸಕಾಲಿಕ ಸಮಯಪ್ರಜ್ಞೆಯಿಂದ ಭಾರೀ ದುರಂತವೊಂದು ತಪ್ಪಿದ್ದು ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದ ರನ್ ವೇ ಸುತ್ತಲಿದ್ದ ಹುಲ್ಲು ತೆಗೆಯಲು ಟ್ರಾಕ್ಟರ್ ಕರೆಸಲಾಗಿತ್ತು. ಈ ಟ್ರಾಕ್ಟರನ್ನು ಅದರ ಚಾಲಕ ರನ್ ವೇ ಅಂತ್ಯದಲ್ಲಿ ನಿಲ್ಲಿಸಿದ್ದ. ಇನ್ನೇನು ಮುಂಬೈಗೆ ಹೊರಬೇಕಿದ್ದ ಜೆಟ್ ಏರ್ ವೇಸ್ ವಿಮಾನ ಟೇಕ್ ಆಫ್ ಆಗುವುದರಲ್ಲಿತ್ತು. ಆದರೆ ಚಾಲಕನಿಗೆ ಟ್ರಾಕ್ಟರ್ ನಿಂತಿರುವುದು ತಿಳಿದಿರಲಿಲ್ಲ.ಆದರೆ ರನ್ ವೇ ಮಧ್ಯಭಾಗದಲ್ಲಿ ಲಗೇಜ್ ಟ್ರಕ್ ವೊಂದು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಏರ್ ಟ್ರಾಫಿಕ್ ಕಂಟ್ರೋಲರ್ ತಕ್ಷಣ ಸೂಚನೆ ನೀಡಿದ್ದರಿಂದ ವಿಮಾನ ಟೇಕಾಫ್ ಅನ್ನು ತಡೆಹಿಡಿಯಲಾಯಿತು.
ಕೆಲಹೊತ್ತು ಸಂಚಾರ ಮೊಟಕುಗೊಂಡಿತು. ರನ್ವೇಯನ್ನು ಅಡಚಣೆಮುಕ್ತಗೊಳಿಸಿದ ಬಳಿಕ ವಿಮಾನ ವಿಮಾನ ಹಾರಾಟ ಮುಂದುವರಿಯಿತು. ಒಂದೊಮ್ಮೆ ವಿಮಾನ ಟೇಕಾಫ್ ಆಗಲು ಮುಂದುವರಿಯುತ್ತಿದ್ದಲ್ಲಿ ಟ್ರಾಕ್ಟರ್ ಗೆ ಗುದ್ದಿ ಭಾರೀ ಅವಘಡ ಸಂಭವಿಸಲಿತ್ತು. ಆದರೆ ಅದೃಷ್ಟಾವಶಾತ್ ಅಪಘಾತ ಕೂದಲೆಳೆ ಅಂತರದಲ್ಲಿ ತಪ್ಪಿದೆ.
Comments are closed.